ಅನೇಕ ಭಾರತೀಯರು “ನೈಸರ್ಗಿಕ ಸಾವು” ಸಂಭವಿಸಿದರೆ ರಕ್ಷಣೆ ಪಡೆಯಲು ಟರ್ಮ್ ಇನ್ಶೂರೆನ್ಸ್ (ಅವಧಿ ವಿಮೆ) ಮಾಡಿಸುತ್ತಾರೆ. ಆದರೆ ಅಪಘಾತದ ನಂತರ ಬದುಕುಳಿದು ಅಂಗವೈಕಲ್ಯಕ್ಕೆ ಒಳಗಾಗುವ “ಬದುಕಿನ ಅಪಾಯ” (Living Risk) ಬಗ್ಗೆ ಜಾಗೃತಿಯ ಕೊರತೆಯಿದೆ. 2024 ರಲ್ಲಿ ಭಾರತದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 1.77 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ (ದಿನಕ್ಕೆ ಸರಾಸರಿ 485 ಸಾವು). ಆದರೆ ಇದಕ್ಕಿಂತ ಭಯಾನಕ ಸಂಗತಿಯೆಂದರೆ, ಲಕ್ಷಾಂತರ ಜನರು ಗಂಭೀರ ಗಾಯಗೊಂಡು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ. ಇದು ತಕ್ಷಣದ ಉದ್ಯೋಗ ನಷ್ಟ ಮತ್ತು ಭರಿಸಲಾಗದ ವೈದ್ಯಕೀಯ ವೆಚ್ಚಗಳಿಗೆ ಕಾರಣವಾಗುತ್ತಿದೆ. ವೈಯಕ್ತಿಕ ಅಪಘಾತ (Personal Accident – PA) ವಿಮೆಯು ಕೇವಲ ಸಾವಿನ ನಂತರದ ಪರಿಹಾರವಲ್ಲದೆ, ಬದುಕಿರುವಾಗ ಬರುವ ಆರ್ಥಿಕ ಸಂಕಷ್ಟಗಳಿಗೆ ಆದಾಯದ ರಕ್ಷಣೆಯನ್ನು ನೀಡುತ್ತದೆ.
ಸಮೀಕ್ಷೆಯ ಒಳ ನೋಟ: ಭಾರತೀಯ ರಸ್ತೆಗಳು ಮತ್ತು ಮನೆಗಳ ವಾಸ್ತವ
2024 ರ ರಸ್ತೆ ಅಪಘಾತಗಳಲ್ಲಿ ಸಂಭವಿಸಿದ ಸಾವುಗಳಲ್ಲಿ ಶೇಕಡಾ 66 ಕ್ಕಿಂತ ಹೆಚ್ಚು ಸಾವುಗಳು 18 ರಿಂದ 45 ವರ್ಷದ ದುಡಿಯುವ ವಯಸ್ಸಿನವರದ್ದಾಗಿವೆ. ಅಂದರೆ ರಸ್ತೆಯಲ್ಲಿ ಸಾಯುವ ಪ್ರತಿ ಮೂವರಲ್ಲಿ ಒಬ್ಬರು 18 ರಿಂದ 35 ವರ್ಷದೊಳಗಿನವರು. ನೀವು ಎಷ್ಟೇ ಸುರಕ್ಷಿತವಾಗಿ ಚಾಲನೆ ಮಾಡಿದರೂ ಅದು ಸುರಕ್ಷತೆಯ ಗ್ಯಾರಂಟಿ ಅಲ್ಲ; ಶೇಕಡಾ 70 ಕ್ಕಿಂತ ಹೆಚ್ಚು ಸಾವುಗಳು ಇತರರ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸುತ್ತಿವೆ. ಇದರರ್ಥ ಬೇರೆಯವರ ತಪ್ಪಿಗೆ ನೀವು ಬೆಲೆ ತೆರಬೇಕಾದ ಪರಿಸ್ಥಿತಿ ಇದೆ. ಮನೆಗಳಲ್ಲಿ ಸಂಭವಿಸುವ ಅಪಘಾತಗಳು ಕೂಡ ಅಷ್ಟೇ ಆತಂಕಕಾರಿಯಾಗಿವೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 30 ಲಕ್ಷ ಹಿರಿಯ ನಾಗರಿಕರು ಸ್ನಾನದ ಕೋಣೆಯಲ್ಲಿ (ಬಾತ್‌ರೂಮ್) ಜಾರಿ ಬೀಳುತ್ತಿದ್ದಾರೆ. ಸಮೀಕ್ಷೆಯ ಪ್ರಕಾರ, ಶೇಕಡಾ 23 ರಿಂದ 31 ರಷ್ಟು ಹಿರಿಯರು ವಾರ್ಷಿಕವಾಗಿ ಇಂತಹ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ, ಇದು ಅವರ ಜೀವನದ ಗುಣಮಟ್ಟವನ್ನು ಕುಸಿಯುವಂತೆ ಮಾಡುತ್ತಿದೆ.
ವಿಮೆಯಲ್ಲಿ ಒಳಗೊಳ್ಳುವ ಅಪಘಾತಗಳ ಪಟ್ಟಿ: ವಿಮಾ ಜಗತ್ತಿನಲ್ಲಿ, “ಅಪಘಾತ” ಎಂದರೆ ಹಠಾತ್, ಅನಿರೀಕ್ಷಿತ ಮತ್ತು ಬಾಹ್ಯವಾಗಿ ಸಂಭವಿಸುವ ಘಟನೆ. ವೈಯಕ್ತಿಕ ಅಪಘಾತ ವಿಮೆಯು ಇವುಗಳನ್ನು ಒಳಗೊಂಡಿರುತ್ತದೆ: ಸ್ನಾನದ ಕೋಣೆಯಲ್ಲಿ ಜಾರಿ ಬೀಳುವುದು (ಇದು ಅನಿರೀಕ್ಷಿತವಾಗಿರಬೇಕು), ಮರ ಅಥವಾ ಕಟ್ಟಡದಿಂದ ಬೀಳುವುದು, ಮೆಟ್ಟಿಲುಗಳಿಂದ ಜಾರುವುದು ಮತ್ತು ವಿದ್ಯುತ್ ಆಘಾತ (Electric shock). ಇದಲ್ಲದೆ ಬೀದಿನಾಯಿ ಕಡಿತ, ಹಾವು ಕಡಿತ ಮತ್ತು ಎತ್ತು ಅಥವಾ ದನಗಳ ದಾಳಿಯನ್ನು ಇದು ಒಳಗೊಳ್ಳುತ್ತದೆ. ರಸ್ತೆ, ರೈಲು ಮತ್ತು ವಿಮಾನ ಅಪಘಾತಗಳ ಜೊತೆಗೆ ನೀರಿನಲ್ಲಿ ಮುಳುಗುವುದು, ಬೆಂಕಿ ಅಥವಾ ರಾಸಾಯನಿಕದಿಂದ ಉಂಟಾಗುವ ಸುಟ್ಟ ಗಾಯಗಳು, ಆಕಸ್ಮಿಕ ವಿಷ ಸೇವನೆ, ಸಿಡಿಲು ಬಡಿಯುವುದು ಮತ್ತು ಭಯೋತ್ಪಾದಕ ಕೃತ್ಯಗಳಿಂದಾಗುವ ಗಾಯಗಳಿಗೂ ವಿಮೆ ದೊರೆಯುತ್ತದೆ. ಬಾತ್‌ರೂಮ್‌ನಲ್ಲಿ ಜಾರಿ ಬಿದ್ದಾಗ ಪರಿಹಾರ ಪಡೆಯಲು ಅದು ಕೇವಲ ಆಕಸ್ಮಿಕ ಘಟನೆಯಾಗಿರಬೇಕು ಮತ್ತು ಅದಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳಿರಬೇಕು.
ಪ್ರಯೋಜನಗಳು: ಆರ್ಥಿಕ ಚೇತರಿಕೆ ಕಾರ್ಯಕ್ರಮ: ಅಪಘಾತ ವಿಮೆಯು ಚೇತರಿಕೆಯ ಸಮಯದಲ್ಲಿ ಆದಾಯದ ಬದಲಿಯಾಗಿ ಕಾರ್ಯನಿರ್ವಹಿಸುತ್ತದೆ. ನೀವು ಅಪಘಾತದಿಂದ ಕೆಲಸ ಮಾಡಲು ಸಾಧ್ಯವಾಗದಿದ್ದರೆ, ‘ತಾತ್ಕಾಲಿಕ ಸಂಪೂರ್ಣ ಅಂಗವೈಕಲ್ಯ’ (TTD) ಅಡಿಯಲ್ಲಿ ಗರಿಷ್ಠ 100 ರಿಂದ 104 ವಾರಗಳವರೆಗೆ ವಾರಕ್ಕೊಮ್ಮೆ ಹಣವನ್ನು ನೀಡಲಾಗುತ್ತದೆ. ಇದು ಶಸ್ತ್ರಚಿಕಿತ್ಸೆ, ಆಸ್ಪತ್ರೆ ವೆಚ್ಚ ಮತ್ತು ದೀರ್ಘಕಾಲದ ಫಿಸಿಯೋಥೆರಪಿ ವೆಚ್ಚಗಳನ್ನೂ ಭರಿಸುತ್ತದೆ. ‘ಮಕ್ಕಳ ಶಿಕ್ಷಣ ಬೆಂಬಲ’ (Secure Child Education Support) ಯೋಜನೆಯಡಿ, ಮನೆಯ ಯಜಮಾನ ಸಾವನ್ನಪ್ಪಿದರೆ ಅಥವಾ ಅಂಗವೈಕಲ್ಯಕ್ಕೆ ತುತ್ತಾದರೆ ಮಕ್ಕಳ ಶಿಕ್ಷಣಕ್ಕಾಗಿ ಒಂದು ದೊಡ್ಡ ಮೊತ್ತದ ಹಣ ಅಥವಾ ಮಾಸಿಕ ಸಹಾಯವನ್ನು ನೀಡಲಾಗುತ್ತದೆ. ಇದು ಸಾಮಾನ್ಯವಾಗಿ 25 ವರ್ಷದೊಳಗಿನ ವಿದ್ಯಾರ್ಥಿ ಮಕ್ಕಳಿಗೆ ಲಭ್ಯವಿರುತ್ತದೆ. ಶಾಶ್ವತ ಅಂಗವೈಕಲ್ಯ ಉಂಟಾದಲ್ಲಿ, ಜೀವನಶೈಲಿಯ ಬದಲಾವಣೆಗಾಗಿ ವಿಮಾ ಮೊತ್ತದ ಶೇಕಡಾ 100 ರಷ್ಟನ್ನು ಪಾವತಿಸಲಾಗುತ್ತದೆ.
ಅವಧಿ ಮತ್ತು ವಿಸ್ತೃತ ಆಯ್ಕೆಗಳು: ಸಾಮಾನ್ಯವಾಗಿ ಈ ವಿಮೆಗಳು 1 ವರ್ಷದ ಅವಧಿಗೆ ಇರುತ್ತವೆ ಮತ್ತು ಜೀವನಪರ್ಯಂತ ನವೀಕರಿಸಬಹುದು. ಆದಾಗ್ಯೂ, ಅನೇಕ ವಿಮಾ ಕಂಪನಿಗಳು ಈಗ 1, 3 ಅಥವಾ 5 ವರ್ಷಗಳ ದೀರ್ಘಾವಧಿಯ ಯೋಜನೆಯನ್ನು ನೀಡುತ್ತಿವೆ. ವೈಯಕ್ತಿಕ ಅಪಘಾತ ವಿಮೆಯು ಕೇವಲ ಒಂದು ಪಾಲಿಸಿಯಲ್ಲ, ಅದು ನಿಮ್ಮ ಕುಟುಂಬದ ಜೀವನಶೈಲಿ ಮತ್ತು ನಿಮ್ಮ ಮಕ್ಕಳ ಭವಿಷ್ಯವು ಅಪಘಾತದಿಂದಾಗಿ ಕುಂಠಿತವಾಗದಂತೆ ನೋಡಿಕೊಳ್ಳುವ ಒಂದು ಭವಿಷ್ಯದ ಭದ್ರತೆ ಕಾರ್ಯಕ್ರಮ’ವಾಗಿದೆ.
ಸಲಹೆ: ವಿಮೆ ಎಂಬುದು ನಿಮ್ಮ ಮೇಲಿರುವ ಅಪಾಯವನ್ನುವರ್ಗಾಯಿಸುವ ಒಂದು ಮಾರ್ಗವಾಗಿದೆ. ಅಪಘಾತ ವಿಮೆಯ ಕವರೇಜ್ ನಿಮ್ಮ ಮಾಸಿಕ ಉಳಿತಾಯವನ್ನು ರಕ್ಷಿಸಿದರೆ, ಹೊಣೆಗಾರಿಕೆಯ ಕವರೇಜ್ ನಿಮ್ಮ ಸ್ವಾತಂತ್ರ್ಯ ಮತ್ತು ಗೌರವವನ್ನು ಕಾಪಾಡುತ್ತದೆ.
ಸೂಚನೆ: “ವಿಮಾ ವಿಷಯಗಳಿಗೆ ಸಂಬಂಧಿಸಿದ ಈ ಮಾಹಿತಿಯು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ನೀಡಲಾಗಿದೆಯೇ ಹೊರತು, ಇದು ಯಾವುದೇ ವಿಮಾ ಕಂಪನಿ ಅಥವಾ ಪಾಲಿಸಿಗಳ ವಾಣಿಜ್ಯ ಪ್ರಚಾರವಲ್ಲ. ಯಾವುದೇ ವಿಮಾ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು ಅಥವಾ ಪಾಲಿಸಿ ಖರೀದಿಸುವ ಮೊದಲು ಸಂಬಂಧಪಟ್ಟ ಕಂಪನಿಯ ಅಧಿಕೃತ ದಾಖಲೆಗಳನ್ನು ಪೂರ್ಣವಾಗಿ ಓದಿ ಮತ್ತು ನಿಮ್ಮ ವಿಮಾ ಸಲಹೆಗಾರರೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲು ಸೂಚಿಸಲಾಗಿದೆ.”
ಲೇಖನ: ಪ್ರತಾಪ್ ಎಂ. ಅನಂತ ಫೈನಾನ್ಷಿಯಲ್ ಸರ್ವಿಸಸ್
ಇಮೇಲ್: ananthafinancials@gmail.com
ದೂರವಾಣಿ: 9964282378
