News

ವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣ: ‘ಸಾಯುವವರೆಗೆ ಶಿಕ್ಷೆ’ ಪ್ರಶ್ನಿಸಿ ಮೇಲ್ಮನವಿ: ಹೈಕೋರ್ಟ್ ಅನುಮತಿ

Share It

ಕಲ್ಕತ್ತಾ: ಆರ್‌ಜಿಕಾರ್ ಆಸ್ಪತ್ರೆಯ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಸಂಜಯ್ ರಾಯ್‌ ಗೆ ಸಾಯುವವರೆಗೆ ಜೈಲು ಶಿಕ್ಷೆ ವಿಧಿಸಿರುವ ಸೀಲ್ಡಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಅನುಮತಿ ನೀಡಿದೆ.

ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಕರಣದಲ್ಲಿ ರಾಯ್‌ ಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ವಾದವನ್ನು ತಿರಸ್ಕರಿಸಿದ್ದ ಸೀಲ್ಡಾದ ವಿಚಾರಣಾ ನ್ಯಾಯಾಲಯ, ಇದು “ಅಪರೂಪದಲ್ಲಿ ಅಪರೂಪ” ಅಪರಾಧ ಪ್ರಕರಣವಲ್ಲ ಎಂದು ಹೇಳಿ, ಆಪರಾಧಿಗೆ ಸಾಯುವವರೆಗೆ ಜೈಲು ಶಿಕ್ಷೆ ವಿಧಿಸಿತ್ತು.

ಅಲ್ಲದೇ, ನ್ಯಾಯಾಲಯವು ರಾಯ್‌ ಗೆ 50,000 ರೂ. ದಂಡ ವಿಧಿಸಿದ್ದು, ಮೃತ ವೈದ್ಯೆಯ ಕುಟುಂಬಕ್ಕೆ 17 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ವಿಚಾರಣಾ ನ್ಯಾಯಾಲಯದ ಆದೇಶ ಸಮಾಧಾನಕರವಾಗಿಲ್ಲ ಎಂದಿದ್ದ ಪಶ್ಚಿಮ ಬಂಗಾಳ ಸರ್ಕಾರ ಮೇಲ್ಮನವಿಗೆ ಸಿದ್ದವಾಗಿದ್ದು, ಪ್ರಕರಣದ ಏಕೈಕ ಅಪರಾಧಿ ಸಂಜಯ್ ರಾಯ್‌ ಗೆ ಮರಣದಂಡನೆ ವಿಧಿಸುವಂತೆ ಕೋರಿ ಅಡ್ವೊಕೇಟ್ ಜನರಲ್ ಕಿಶೋರ್ ದತ್ತ ಅವರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಇದೀಗ ಸೀಲ್ಡಾದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಅವರು ಸೋಮವಾರ ನೀಡಿದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಅನುಮತಿ ನೀಡಿದೆ.


Share It

You cannot copy content of this page