ನಮ್ಮ ದೇಶದಲ್ಲಿ ಚುನಾವಣೆ ಎಂದರೆ “ಹೀಗೆ ನಡೆಯುತ್ತದೆ” ಎಂಬುದೊಂದು ಪರಿಕಲ್ಪನೆ ನಮ್ಮಲ್ಲಿದೆ. ಅದು ಯಾವುದೇ ಚುನಾವಣೆ ಇರಲಿ. ನಮ್ಮ ದೇಶದಲ್ಲಿ ಚುನಾವಣೆಗಳು ಅಷ್ಟೇನು ಉದಾತ್ತ ಚಿಂತನೆಗಳು ಮತ್ತು ಆದರ್ಶಗಳ ಮೇಲೆ ನಡೆಯುವುದಿಲ್ಲ. ಬದಲಿಗೆ ಇಲ್ಲಿ ಹಲವು ಕ್ಷುಲ್ಲಕ ವಿಚಾರಗಳು ಚುನಾವಣೆಯನ್ನು ನಿರ್ಧರಿಸುತ್ತವೆ.
ನಾಳೆ ನಡೆಯುತ್ತಿರುವ ರಾಜ್ಯ ವಕೀಲರ ಪರಿಷತ್ತಿನ ಚುನಾವಣೆಯನ್ನೂ ಇಂತಹುದೇ ಕ್ಷುಲ್ಲಕ ಸಂಗತಿಗಳು ನಿರ್ಧರಿಸುವ ಸಾಧ್ಯತೆ ಇದೆ. ಹೀಗಾಗಿ ಯಾರಿಗೆ ಓಟು ಹಾಕಬೇಕು ಎಂಬುದನ್ನು ನಮ್ಮಂತಹ ವಕೀಲರು ಕೆಲ ಕ್ಷಣವಾದರೂ ಯೋಚಿಸಬೇಕಿದೆ. ಈಗಾಗಲೇ ಯಾರಿಗೆ ಓಟು ಹಾಕಬೇಕು ಎಂದು ಒಂದಿಷ್ಟು ವಕೀಲರು ನಿರ್ಧರಿಸಿಬಿಟ್ಟಿದ್ದಾರೆ. ಅವರಿಗೆ ಈ ಮಾತುಗಳು ಅನ್ವಯಿಸುವುದಿಲ್ಲ. ಉಳಿದವರು ಓಟು ಹಾಕುವ ಮುಂಚೆ ಸ್ವಲ್ಪ ಯೋಚಿಸಿ ನಂತರ ತಮ್ಮ ಮತ ಚಲಾಯಿಸಬೇಕಿದೆ.
ಕೆ.ಎಸ್.ಬಿ.ಸಿಗೆ ಸ್ಪರ್ಧಿಸಿರುವ ಮತ್ತು ಗೆಲ್ಲುವ ಉಮೇದಿನಲ್ಲಿರುವ ಅಭ್ಯರ್ಥಿಗಳು ಹಲವು ಕಸರತ್ತುಗಳನ್ನು ಮಾಡುತ್ತಿದ್ದಾರೆ. ಜಾತಿ ಹೆಸರಿನಲ್ಲಿ, ಹಣ, ಗಿಫ್ಟ್, ಎಣ್ಣೆ ಪಾರ್ಟಿಗಳನ್ನು ನೀಡಿ ಓಟು ಕೇಳುತ್ತಿರುವ ವಿಚಾರವೇನೂ ಈಗ ಗೌಪ್ಯವಾಗಿಲ್ಲ. ಇಂತಹ ಅಭ್ಯರ್ಥಿಗಳು ಗೆದ್ದು ಮಾಡುವುದು ಅಷ್ಟರಲ್ಲೇ ಇದೆ.
ಹೀಗಾಗಿ ನಮ್ಮ ಓಟು ಸೂಕ್ತ ಮತ್ತು ಅರ್ಹ ಅಭ್ಯರ್ಥಿಗೆ ಸಿಗಬೇಕಿದೆ. ಅಂತಹ ವಕೀಲ ಅಭ್ಯರ್ಥಿಗಳನ್ನು ಗುರುತಿಸುವುದು ಕಷ್ಟವಾದರೂ ಅಭ್ಯರ್ಥಿಗಳ ಕೆಲವೊಂದು ಮೂಲ ಗುಣ-ನಡವಳಿಕೆಗಳನ್ನು ಗುರುತಿಸಿ, ತಿಳಿದು, ನಂತರವೇ ಮತ ನೀಡಬೇಕಿದೆ. ಅವುಗಳಲ್ಲಿ ಪ್ರಮುಖವಾದ ವಿಚಾರಗಳು ಹೀಗಿವೆ;
1. ವ್ಯಕ್ತಿತ್ವ
2. ಪಕ್ಷಾತೀತ ಮನೋಭಾವ
3. ವೃತ್ತಿ ಮೌಲ್ಯಗಳ ರಕ್ಷಣೆ
4. ಕಿರಿಯ ವಕೀಲರನ್ನು ನಡೆಸಿಕೊಳ್ಳುವ ಗುಣ
4. ಒಗ್ಗೂಡಿಸಿಕೊಂಡು ಹೋಗುವ ನಡವಳಿಕೆ
5. ವಕೀಲರ ಸಮಸ್ಯೆಗಳಿಗೆ ಸ್ಪಂದಿಸುವ ಜವಾಬ್ದಾರಿ
6. ಸ್ವತಂತ್ರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ
7. ಹಿರಿತನ, ಪಾರದರ್ಶಕತೆ, ಸೃಜನಶೀಲತೆ ಮತ್ತು ಪ್ರಾಮಾಣಿಕತೆ
ಶುದ್ಧ ಮತ್ತು ಶ್ರೇಷ್ಠ ವ್ಯಕ್ತಿತ್ವ ಹೊಂದಿರುವ ಅಭ್ಯರ್ಥಿ ಗೆದ್ದರೆ ಸಹಜವಾಗಿಯೇ ಶ್ರೇಷ್ಠ ಪ್ರತಿನಿಧಿಯೂ ಆಗಬಲ್ಲರು. ಹೀಗಾಗಿ ಶ್ರೇಷ್ಠ ವ್ಯಕ್ತಿತ್ವದ ಅಭ್ಯರ್ಥಿಗೆ ನಮ್ಮ ಓಟು ನೀಡುವುದು ಸೂಕ್ತ. ಇನ್ನು ನಮ್ಮಲ್ಲಿ ಪ್ರತಿ ವಕೀಲರೂ ತಮ್ಮದೇ ರಾಜಕೀಯ ಚಿಂತನೆಗಳನ್ನು ಹೊಂದಿದ್ದಾರೆ ಅಥವಾ ನೇರವಾಗಿ ರಾಜಕೀಯ ಪಕ್ಷಗಳ ಕಾರ್ಯಕರ್ತರಿದ್ದಾರೆ. ಇವರಿಗೆ ಓಟು ನೀಡುವಾಗ ಕೊಂಚ ಯೋಚಿಸಲೇಬೇಕಿದೆ. ಕೆ.ಎಸ್.ಬಿ.ಸಿ ರಾಜಕೀಯ ಚಿಂತನೆಗಳಿಂದ ಪ್ರೇರಿತವಾಗದಂತೆ ನೋಡಿಕೊಳ್ಳಬೇಕಿದ್ದರೆ ಈಗ ಚಲಾಯಿಸುವ ಓಟು ಬಹಳ ಮುಖ್ಯ. ಇದರಾಚೆಗೂ ಪಕ್ಷಾತೀತವಾಗಿ ವರ್ತಿಸುವವರಷ್ಟೇ ನಮ್ಮ ಅವಶ್ಯ.
ಇತ್ತೀಚೆಗೆ ವೃತ್ತಿ ಮೌಲ್ಯಗಳನ್ನು ಗಾಳಿಗೆ ತೂರುವ ವಕೀಲರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ವಕೀಲರ ಬಗ್ಗೆ ಸಮಾಜದಲ್ಲಿಯೂ ಅಸಡ್ಡೆ ಮತ್ತು ಕುಹಕದ ಭಾವನೆ ತೀವ್ರಗೊಳ್ಳುತ್ತಿದೆ. ಆದ್ದರಿಂದ ವೃತ್ತಿ ಮೌಲ್ಯಗಳನ್ನು ನಿರ್ಲಕ್ಷಿಸುವ ವಕೀಲರನ್ನು ಸರಿದಾರಿಗೆ ತರುವಂತಹ ನಾಯಕರು ಇಂದಿನ ಕೆ.ಎಸ್.ಬಿ.ಸಿ.ಯ ತುರ್ತು ಅವಶ್ಯವಾಗಿದೆ. ಇನ್ನು ನಮ್ಮ ನಾಯಕರಾಗುವವರನ್ನು ನಿರ್ಣಯಿಸುವಾಗ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು ತಮ್ಮ ಕಿರಿಯ ವಕೀಲರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ಕೂಡ ಅವರ ಮಾನದಂಡವಾಗುತ್ತದೆ. ತನ್ನ ಕಿರಿಯ ವಕೀಲರನ್ನೇ ಸರಿಯಾಗಿ ನಡೆಸಿಕೊಳ್ಳದವರು ಇಡೀ ವಕೀಲ ಸಮುದಾಯವನ್ನು ಸರಿದೂಗಿಸಿಕೊಂಡು ಹೋಗಲಾರರು.
ಜಾತಿ, ಧರ್ಮ ಮತ್ತು ರಾಜಕೀಯ ಪಕ್ಷಗಳ ಕುರಿತಂತೆ ಅಭ್ಯರ್ಥಿಗಳಲ್ಲಿ ಇರುವ ವೈಯಕ್ತಿಯ ಚಿಂತನೆಗಳ ಆಚೆಗೂ ಇಡೀ ರಾಜ್ಯದ ವಕೀಲ ಸಮುದಾಯವನ್ನು ಒಗ್ಗೂಡಿಸಿಕೊಂಡು ಹೋಗುವ ಮತ್ತು ತಮ್ಮ ಮಿತಿಗಳನ್ನು ದಾಟಿ ವಕೀಲ ಸಮುದಾಯವನ್ನು ಸಶಕ್ತಗೊಳಿಸುವವರಿಗೆ ಓಟು ನೀಡಬೇಕಿದೆ. ಅದೇ ರೀತಿ ಪ್ರಸ್ತುತ ವಕೀಲರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ಜವಾಬ್ದಾರಿಯನ್ನು ಹೊರುವವರು (ಬರೀ ಮಾತಿನಲ್ಲಲ್ಲ) ಇಂದಿನ ಅವಶ್ಯವಾಗಿದ್ದಾರೆ. ಅಷ್ಟೇ ಮುಖ್ಯವಾಗಿ ಹಿತ್ತಾಳೆ ಕಿವಿಯಂತೆ ವರ್ತಿಸದೇ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ತೋರುವವರು ಕೆ.ಎಸ್.ಬಿ.ಸಿ ಗೆ ಚುನಾಯಿತರಾಗಬೇಕಿದೆ. ಹೊರಗಿನ ಶಕ್ತಿಗಳಿಗೆ ಹಿತ್ತಾಳೆ ಕಿವಿಯಾಗುವವರನ್ನು ದೂರವಿಡಬೇಕಿದೆ.
ಇನ್ನು ಎಷ್ಟೇ ಸಾಮರ್ಥ್ಯವಿದ್ದರೂ, ವಕೀಲರ ಹಿತಕ್ಕಾಗಿ ದುಡಿಯುವ ಭರವಸೆ ನೀಡಿದರೂ ಕಿರಿಯರ ಜತೆಗೆ ಮಾರ್ಗದರ್ಶನಕ್ಕಾದರೂ ಒಂದಿಷ್ಟು ಹಿರಿಯರು ಬೇಕೇಬೇಕಾಗುತ್ತಾರೆ. ಅದರಂತೆ ಮತ ಹಾಕುವಾಗ ಹಿರಿತನವನ್ನು ಕೂಡ ಪರಿಗಣಿಸುವ ಅವಶ್ಯವಿದೆ. ಈ ಹಿರಿತನದೊಂದಿಗೆ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಕಾಯ್ದುಕೊಳ್ಳುವವರು ನಮ್ಮ ಅವಶ್ಯಕತೆಯಾಗಿದ್ದಾರೆ.
ವಕೀಲರ ಸಂಕಷ್ಟಗಳು ನೂರೆಂಟು ಇವೆ. ಹಿಂದೆಯೂ ಇದ್ದವು. ಈಗಲೂ ಇವೆ. ಮುಂದೆಯೂ ಇರಲಿವೆ. ಅವುಗಳನ್ನು ಪರಿಷತ್ತಿನ ಕೆಲವರಾದರೂ ಪರಿಹರಿಸುವ ಪ್ರಯತ್ನ ಮಾಡಿದ್ದಾರೆ. ಅಂತಹವರನ್ನು ನಾಳೆಯ ಚುನಾವಣೆಯಲ್ಲೂ ಪರಿಗಣಿಸುವ ಅವಶ್ಯವಿದೆ. ಒಟ್ಟಾರೆ ವಕೀಲರ ಸಮಸ್ಯೆಗಳನ್ನು ಹಗುರವಾಗಿ ತೆಗೆದುಕೊಳ್ಳದೆ ಗಂಭೀರವಾಗಿ ಪರಿಗಣಿಸಬಲ್ಲ, ವೃತ್ತಿ ಮೌಲ್ಯಗಳನ್ನು ಕಾಪಾಡುವ ಮತ್ತು ವಕೀಲಿಕೆಯ ಗೌರವವನ್ನು ಸಮಾಜದಲ್ಲಿ ಎತ್ತಿಹಿಡಿಯುವ ಮತ್ತು ಪಕ್ಷಾತೀಕವಾಗಿ ನಡೆದುಕೊಳ್ಳುವ ಅಭ್ಯರ್ಥಿಗಳಿಗೆ ಓಟು ನೀಡಬೇಕಿದೆ.
ವಕೀಲಿಕೆ ನೋಬೆಲ್ ಪ್ರೊಫೆಷನ್ ಎಂದು ಹೇಳುವುದಕ್ಕೆ ಮತ್ತು ಕೇಳುವುದಕ್ಕಷ್ಟೇ ಸೀಮಿತವಾಗಬಾರದು. ನಾಳೆ ನಡೆಯುತ್ತಿರುವುದು ಅತಿ ಹೆಚ್ಚು ಸುಶಿಕ್ಷಿತರ ನಾಯಕರನ್ನು ಆರಿಸುವ ಚುನಾವಣೆ. ಸೂಕ್ತ ಅಭ್ಯರ್ಥಿಗೆ ಮತ ನೀಡದಿದ್ದರೆ, ಪಾರ್ಟಿ, ಗಿಫ್ಟ್, ಹಣ, ಜಾತಿ, ಧರ್ಮದ ಕಾರಣಕ್ಕೆ ಮತ ಹಾಕಿದರೆ ನಮಗೂ, ಹಳ್ಳಿಯ ಅಶಿಕ್ಷಿತ ವ್ಯಕ್ತಿ ಮತ ಹಾಕುವುದಕ್ಕೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಹೀಗಾಗಿ ಸೂಕ್ತ ಅಭ್ಯರ್ಥಿಗೆ ಮತ ನೀಡೋಣ.
ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
