News

ಫೆ.2ರಂದು ಬೆಂಗಳೂರು ವಕೀಲರ ಸಂಘದ ಚುನಾವಣೆ: ಅಧ್ಯಕ್ಷ ಗಾದಿಗೆ 6 ಮಂದಿ ಸ್ಪರ್ಧೆ

Share It

ಬೆಂಗಳೂರು: ದೇಶದ ಅತಿ ದೊಡ್ಡ ವಕೀಲರ ಸಂಘವಾಗಿರುವ ಬೆಂಗಳೂರು ವಕೀಲರ ಸಂಘಕ್ಕೆ (ಎಎಬಿ) ಫೆಬ್ರವರಿ 2ರಂದು ಚುನಾವಣೆ ನಡೆಯಲಿದೆ. ಸುಮಾರು 21 ಸಾವಿರ ವಕೀಲ ಮತದಾರರು ಈ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಸಾಕಷ್ಟು ಪ್ರಚಾರದ ಜತೆಗೆ ಪದಾಧಿಕಾರಿಗಳ ಹುದ್ದೆಗೆ ಹಲವರು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ವಾಪಸ್‌ ಪಡೆಯುವ ಪ್ರಕ್ರಿಯೆ ಸೋಮವಾರ ಪೂರ್ಣಗೊಂಡಿದೆ. ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಮತ್ತು ನಾಲ್ಕು ವಿಭಾಗಗಳ ಪ್ರತಿನಿಧಿ ಸದಸ್ಯರ ಸ್ಥಾನಗಳು ಸೇರಿದಂತೆ ಒಟ್ಟು 32 ಸ್ಥಾನಗಳಿಗೆ 140 ಮಂದಿ ಸ್ಪರ್ಧೆ ಮಾಡುತ್ತಿದ್ದಾರೆ.

ಸಂಘದ ಪ್ರಮುಖ ಹುದ್ದೆಗಳಾದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನದ ಆಕಾಂಕ್ಷಿಗಳಿಗೆ ಎಲ್ಲಾ ಘಟಕದ ಸದಸ್ಯರು ಮತದಾನ ಮಾಡಲಿದ್ದಾರೆ. ಉಳಿದಂತೆ ಹೈಕೋರ್ಟ್, ಸಿಟಿ ಸಿವಿಲ್‌ ಕೋರ್ಟ್‌, ಮೆಯೋ ಹಾಲ್‌ ಕೋರ್ಟ್‌ ಮತ್ತು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಗಳ ನಾಲ್ಕು ಘಟಕಗಳಲ್ಲಿ ಸದಸ್ಯತ್ವ ಪಡೆದಿರುವ ವಕೀಲರು ಆಯಾ ನಿರ್ದಿಷ್ಟ ಘಟಕದ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ 6 ಮಂದಿ ಸ್ಪರ್ಧೆ: ನಿಕಟ ಪೂರ್ವ ಅಧ್ಯಕ್ಷ ಹಾಗೂ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ, ಮಾಜಿ ಅಧ್ಯಕ್ಷ ಎ ಪಿ ರಂಗನಾಥ್‌, ಎಎಬಿ ಮಾಜಿ ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ, ವಕೀಲರಾದ ಆರ್‌ ರಾಜಣ್ಣ, ನಂಜಪ್ಪ ಕಾಳೇಗೌಡ ಮತ್ತು ಟಿ ಎ ರಾಜಶೇಖರ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ 5 ಮಂದಿ ಸ್ಪರ್ಧೆ: ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎಎಬಿ ಮಾಜಿ ಖಜಾಂಚಿ ಶಿವಮೂರ್ತಿ, ಮಾಜಿ ಖಜಾಂಚಿ ಎಂ.ಟಿ ಹರೀಶ್‌, ಎಚ್‌.ವಿ ಪ್ರವೀಣ್‌ ಗೌಡ, ಕೆ. ಅಕ್ಕಿ ಮಂಜುನಾಥ್‌ ಗೌಡ, ಎಂ.ಎಚ್‌ ಚಂದ್ರಶೇಖರ್‌ ಸ್ಪರ್ಧಿಸಿದ್ದಾರೆ.

ಖಜಾಂಚಿ ಸ್ಥಾನಕ್ಕೆ 4 ಮಂದಿ ಸ್ಪರ್ಧೆ: ಖಜಾಂಚಿ ಹುದ್ದೆಗೆ ಮುನಿಯಪ್ಪ ಸಿ.ಆರ್‌ ಗೌಡ, ಸಿ.ಎಸ್‌ ಗಿರೀಶ್‌ ಕುಮಾರ್‌, ಟಿ.ಸಿ ಸಂತೋಷ್‌ ಮತ್ತು ಎ ವೇದಮೂರ್ತಿ ಸ್ಪರ್ಧಿಸುತ್ತಿದ್ದಾರೆ.

ಹೈಕೋರ್ಟ್‌ ಘಟಕ: ಹೈಕೋರ್ಟ್‌ ಘಟಕದಿಂದ 7 ಮಂದಿ ಸದಸ್ಯರು ಎಎಬಿ ಆಡಳಿತ ಮಂಡಳಿ ಪ್ರವೇಶಿಸಲಿದ್ದು, ಈ ಹುದ್ದೆಗಳಿಗೆ 27 ಮಂದಿ ಕಣದಲ್ಲಿದ್ದಾರೆ.

ಸಿಟಿ ಸಿವಿಲ್‌ ಕೋರ್ಟ್‌ ಘಟಕ: ಸಿಟಿ ಸಿವಿಲ್‌ ಕೋರ್ಟ್‌ ಘಟಕದಿಂದ 12 ಮಂದಿ ಸದಸ್ಯರು ಎಎಬಿ ಆಡಳಿತ ಮಂಡಳಿ ಪ್ರವೇಶಿಸಲಿದ್ದು, ಇದಕ್ಕಾಗಿ 59 ಮಂದಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಮ್ಯಾಜಿಸ್ಟ್ರೇಟ್ ಕೋರ್ಟ್‌ ಘಟಕ: ಮ್ಯಾಜಿಸ್ಟ್ರೇಟ್‌ ಕೋರ್ಟ್ ಘಟಕದಿಂದ 5 ಮಂದಿ ಸದಸ್ಯರು ಎಎಬಿ ಆಡಳಿತ ಮಂಡಳಿ ಪ್ರವೇಶಿಸಲಿದ್ದು, 20 ಮಂದಿ ಸ್ಪರ್ಧಿಸುತ್ತಿದ್ದಾರೆ.

ಮೆಯೋ ಹಾಲ್‌ ಕೋರ್ಟ್‌ ಘಟಕ: ಮೆಯೋ ಹಾಲ್‌ ಕೋರ್ಟ್‌ ಘಟಕದಿಂದ 5 ಸದಸ್ಯರು ಎಎಬಿ ಆಡಳಿತ ಮಂಡಳಿ ಪ್ರವೇಶಿಸಲಿದ್ದು, ಒಟ್ಟು 19 ಮಂದಿ ಕಣಕ್ಕಿಳಿದಿದ್ದಾರೆ.

ಸಿಸಿಎಚ್ ಆವರಣದಲ್ಲಿ ಮತದಾನ: ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ ಫೆಬ್ರವರಿ 2ರಂದು ಮತದಾನ ನಡೆಯಲಿದೆ. ಚುನಾವಣೆ ಕಾರ್ಯದಲ್ಲಿ ಸುಮಾರು 800 ಮಂದಿ ಕಾರ್ಯನಿರ್ವಹಿಸಲಿದ್ದು, ಭದ್ರತೆಯ ದೃಷ್ಟಿಯಿಂದ ಸಿಟಿ ಸಿವಿಲ್‌ ಕೋರ್ಟ್‌ ಒಳಗೆ ಮತ್ತು ಹೊರಗೆ ಸಿಸಿಟಿವಿ ಅಳವಡಿಸಲಾಗಿದೆ. ಮೂರು ಡ್ರೋನ್‌ ಕ್ಯಾಮೆರಾಗಳು ನಿಗಾ ವಹಿಸಲಿವೆ. ಸರ್ಕಾರಿ ಕಲಾ ಕಾಲೇಜಿನಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಚುನಾವಣೆಗಾಗಿ ಉನ್ನತಾಧಿಕಾರ ಸಮಿತಿಯನ್ನು ಹಿರಿಯ ವಕೀಲ ಕೆ.ಎನ್ ಫಣೀಂದ್ರ ನೇತೃತ್ವದಲ್ಲಿ ರಚಿಸಲಾಗಿದ್ದು, ಈ ಸಮಿತಿಯು ಚುನಾವಣೆಯ ಮೇಲೆ ನಿಗಾ ಇರಿಸಲಿದೆ. ಸಮಿತಿಯಲ್ಲಿ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು ಮುಖ್ಯ ಚುನಾವಣಾಧಿಕಾರಿಯಾಗಿದ್ದರೆ, ಹಿರಿಯ ವಕೀಲ ವಿಕ್ರಂ ಹುಯಿಲಗೋಳ, ಪಿ ಅನು ಚೆಂಗಪ್ಪ, ವಕೀಲರಾದ ಕೆಂಪಣ್ಣ ಮತ್ತು ಎಂ ಆರ್‌ ವೇಣುಗೋಪಾಲ್‌ ಅವರು ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.


Share It

You cannot copy content of this page