ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ಮಾಗಡಿ, ಬಿಡದಿ ನಗರಗಳಲ್ಲಿ ಸ್ಯಾಟಲೈಟ್ ಟೌನ್ ಶಿಪ್ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ.
ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ವತಿಯಿಂದ ರಾಮನಗರ ಜಿಲ್ಲೆ, ರಾಮನಗರ ತಾಲೂಕು, ಬಿಡದಿ ಹೋಬಳಿಯ ಭೈರಮಂಗಲ, ಬನ್ನಿಗೇರೆ, ಹೊಸೂರು, ಕಂಚುಗಾರನಹಳ್ಳಿ, ಕೆಂಪ್ಪಯ್ಯನ ಪಾಳ್ಯ, ಮಂಡಲ ಹಳ್ಳಿ, ಹಾಗೂ ಹಾರೋಹಳ್ಳಿ ಹೋಬಳಿಯ ವಡ್ಡೆರಹಳ್ಳಿ ಸೇರಿದಂತೆ ಒಟ್ಟು 10 ಗ್ರಾಮಗಳ ವ್ಯಾಪ್ತಿಯ ಪ್ರದೇಶದಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯನ್ನು ಅನುಷ್ಠಾನ ಮಾಡೋದಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಬೆಂಗಳೂರು ಜನ ದಟ್ಟಣೆ ಕಡಿಮೆ ಮಾಡಲು, ಬೆಂಗಳೂರು ಸುತ್ತಾ ಮುತ್ತಲಿನ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ, ಬಿಡದಿ ಪಟ್ಟಣಗಳನ್ನು ರಸ್ತೆ ಮತ್ತು ರೈಲು ಸಂಪರ್ಕಗಳೊಂದಿಗೆ ಸ್ಯಾಟಲೈಟ್ ಟೌನ್ ಶಿಪ್ ಗಳನ್ನಾಗಿ ಅಭಿವೃದ್ದಿ ಪಡಿಸುವ ಉದ್ದೇಶವನ್ನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊಂದಿದ್ದು, ಈ ಯೋಜನೆಗೆ ಗುರುವಾರ ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ.
ಈಗಾಗಲೇ ಈ ನಗರಗಳಿಗೆ ಸಂಪರ್ಕ ವ್ಯವಸ್ಥೆ ಇದ್ದು, ಈಗಿರುವ ರಸ್ತೆಗಳನ್ನ 4 ಲೈನ್, 6 ಲೈನ್ ಗಳಾಗಿ ಬದಲಾಯಿಸಲಾಗುವುದು. ಇನ್ನು ಈ ಯೋಜನೆಗೆ ಬೇಕಾಗುವಂತಹ ಹಣವನ್ನ ಕ್ರೂಡೀಕರಣ ಮಾಡಲಾಗುವುದು, ಎಂದು ಸಚಿವ ಎಚ್.ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.
ಇನ್ನು ಈ ಯೋಜನೆಯಿಂದಾಗಿ ಬೆಂಗಳೂರಿನ ಸುತ್ತಾ ಮುತ್ತಲಿನ ನಗರಗಳಾದ ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ, ಮಾಗಡಿ, ಹೊಸಕೋಟೆ, ಬಿಡದಿ ಪ್ರದೇಶಗಳ ಭೂಮಿ ಬೆಲೆ ಗಗನಕ್ಕೇರಲಿದೆ.