News

ರಾಜ್ಯ ಸರ್ಕಾರದ 30 ಇಲಾಖೆಗಳ 150 ಸೇವೆಗಳು ಇನ್ಮುಂದೆ ಬೆರಳತುದಿಯಲ್ಲಿ ಲಭ್ಯ

Share It

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಯೋಜನೆಗಳಿಗೆ ತ್ವರಿತ ಗತಿಯಲ್ಲಿ ಅನುಮೋದನೆ ನೀಡಬಲ್ಲ ಮತ್ತು ಉದ್ಯಮಗಳಿಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಇಲಾಖೆಗಳ 150 ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವಂತಹ ಉದ್ಯಮಸ್ನೇಹಿ ಪರಿಷ್ಕೃತ ಏಕಗವಾಕ್ಷಿ ಪೋರ್ಟಲ್ ಜಾಗತಿಕ ಹೂಡಿಕೆದಾರರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿದೆ.

ಮೈಕ್ರೋಸಾಫ್ಟ್ ಕಂಪನಿಯ ನೆರವಿನೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದ ಬಲದಿಂದ ರೂಪಿಸಿರುವ ಈ ವ್ಯವಸ್ಥೆಯು ಕೈಗಾರಿಕಾ ಯೋಜನೆಗಳಿಗೆ ಸಂಬಂಧಿಸಿದ ಅನುಮೋದನೆ, ನವೀಕರಣ, ತಿದ್ದುಪಡಿ, ಕುಂದುಕೊರತೆಗಳಿಗೆ ಪರಿಹಾರಗಳನ್ನು ಸರಳಗೊಳಿಸಲಿದ್ದು, ಕ್ಷಿಪ್ರಗತಿಯಲ್ಲಿ ಹೂಡಿಕೆ ನನಸಾಗುವಂತೆ ಮಾಡಲಿದೆ. ಜೊತೆಗೆ ಹೂಡಿಕೆದಾರರಿಗೆ ಕೇಂದ್ರ ಸರಕಾರದ ಮಟ್ಟದಲ್ಲಿ ಸಿಗಬೇಕಾದ ಸೇವೆಗಳನ್ನು ಕೂಡ ಇದರ ಮೂಲಕ, ಅಧಿಕಾರಿಶಾಹಿಯ ಅಡೆತಡೆಯಿಲ್ಲದೆ ಪಡೆದುಕೊಳ್ಳಬಹುದಾಗಿದೆ.

ಕೈಗಾರಿಕಾ ಯೋಜನೆಗಳಿಗೆ ಸಂಬಂಧಿಸಿದ ಸೇವೆಗಳು ಬೇರೆಬೇರೆ ಇಲಾಖೆಗಳಲ್ಲಿ ಚದುರಿ ಹೋಗಿದ್ದವು. ಇದರಿಂದ ಎಲ್ಲವೂ ಮಂದಗತಿಗೆ ಸಿಲುಕಿ ಸ್ತಬ್ಧವಾಗುತ್ತಿದ್ದವು. ಈಗ ರಾಜ್ಯ ಸರಕಾರ 30 ಇಲಾಖೆಗಳ ಎಲ್ಲ ಸೇವೆಗಳನ್ನೂ ಒಂದೆಡೆ ತಂದಿದೆ. ಕೃತಕ ಬುದ್ಧಿಮತ್ತೆಯನ್ನು ಆಧರಿಸಿ ವಿನ್ಯಾಸಗೊಳಿಸಿರುವ ಚಾಟ್-ಬಾಟ್ ಸೌಲಭ್ಯದಲ್ಲಿ ಉದ್ಯಮಿಗಳು ತಮಗೆ ಬೇಕಾದ ಸೇವೆ ಅಥವಾ ಮಾಹಿತಿಗಳನ್ನು ತಮ್ಮ ಇಷ್ಟದ ಭಾಷೆಯಲ್ಲಿ ಬೆರಳತುದಿಯಲ್ಲೇ ಪಡೆದುಕೊಳ್ಳಬಹುದಾಗಿದೆ.ಈ ಸೇವೆಗಳು ಮೊಬೈಲಿನಲ್ಲಿ ಕೂಡ ಸಿಗಲಿವೆ.

ಈ ಏಕಗವಾಕ್ಷಿ ವ್ಯವಸ್ಥೆಯಡಿ ಕರ್ನಾಟಕ ಉದ್ಯೋಗ ಮಿತ್ರದ ಮೂಲಕ ಹೂಡಿಕೆದಾರರಿಗೆ ಪ್ರಮಾಣಪತ್ರ ಆಧರಿತ ಅನುಮೋದನೆ (ಎಬಿಸಿ) ಸಿಗಲಿದೆ. ಇದರಿಂದ ಕಟ್ಟಡ ಕಾಮಗಾರಿ ಮತ್ತು ಇತರೆ ಸಿದ್ಧತೆ ಆರಂಭಿಸಬಹುದಾಗಿದೆ. ಈ ವ್ಯವಸ್ಥೆಯನ್ನು ರಾಷ್ಟ್ರ ಮಟ್ಟದ ಏಕಗವಾಕ್ಷಿ ವ್ಯವಸ್ಥೆಯೊಂದಿಗೆ ಬೆಸೆಯಲಾಗಿದೆ. ಈ ಪೋರ್ಟಲ್ಲಿನಲ್ಲಿ ಕೈಗಾರಿಕೆಗೆ ಬೇಕಾದ ಭೂಮಿಯ ಹುಡುಕಾಟ, ಮಂಜೂರಾತಿ, ಕಟ್ಟಡ ನಕಾಶೆಗೆ ಅನುಮೋದನೆ ಮುಂತಾದ ಕೆಐಎಡಿಬಿ ಸೇವೆಗಳೂ ಇರಲಿವೆ.

ಹೊಸ ವ್ಯವಸ್ಥೆಯಲ್ಲಿ ಜಿಐಎಸ್ ಆಧರಿತ ಕೈಗಾರಿಕಾ ಮಾಹಿತಿಯೂ ಸಿಗಲಿದೆ ಇದರಿಂದ ಕೈಗಾರಿಕೆಗೆ ತಮ್ಮ ಸ್ವಂತ ಅಥವಾ ಕಂದಾಯ ಭೂಮಿಯನ್ನು ಉಪಯೋಗಿಸಿಕೊಳ್ಳುವವರಿಗೆ ಅನುಕೂಲವಾಗಲಿದೆ. ನಿರಾಕ್ಷೇಪಣಾ ಪತ್ರ ಇತ್ಯಾದಿಗಳಿಗೆ ವಿಝರ್ಡ್ ತಂತ್ರಜ್ಞಾನವನ್ನುಳ್ಳ ಸಾಧನ ಇದರಲ್ಲಿದೆ. ಹಾಗೆಯೇ, ಉದ್ಯಮಿಗಳು ತಮಗೆ ಸಿಗಲಿರುವ ಪ್ರೋತ್ಸಾಹನಾ ಭತ್ಯೆ, ರಿಯಾಯಿತಿ ಮತ್ತು ವಿನಾಯಿತಿಗಳನ್ನು ‘ವಿಝರ್ಡ್ ಮತ್ತು ಕ್ಯಾಲ್ಕ್ಯುಲೇಟರ್’ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಹೂಡಿಕೆಯ ವಿಚಾರದಲ್ಲಿ ನೆರೆಹೊರೆ ರಾಜ್ಯಗಳಿಂದ ತೀವ್ರ ಸ್ಪರ್ಧೆ ಇದೆ. ಹೀಗಾಗಿ ಕೈಗಾರಿಕಾ ಯೋಜನೆಗಳ ವಿಚಾರದಲ್ಲಿ ಉಳಿದ ಪ್ರಕ್ರಿಯೆಗಳು ಸುಲಭವೂ ತ್ವರಿತವೂ ಆಗಿರಲೇಬೇಕು. ಇಲ್ಲದಿದ್ದರೆ, ಅವಕಾಶಗಳು ಬೇರೆಯವರ ಪಾಲಾಗುತ್ತವೆ. ಏಕಗವಾಕ್ಷಿ ವ್ಯವಸ್ಥೆ ತರುತ್ತೇವೆಂದು ಮಾತು ಕೊಟ್ಟಿದ್ದೆವು. ಅದು ಈಗ ಈಡೇರಿದೆ. ಇದು ಸುಲಲಿತ ವಾಣಿಜ್ಯ ಸಂಸ್ಕೃತಿಯ ದಾಪುಗಾಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್ ಹೇಳಿದ್ದಾರೆ.


Share It

You cannot copy content of this page