ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ತಂಬಾಕು ಸೇವನೆಯ ಅಪಾಯಗಳು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ಹುಕ್ಕಾ ನಿಷೇಧದ ಕುರಿತು ಜಾಗೃತಿ ಮೂಡಿಸಲು ಆಟೋ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಬಿಬಿಎಂಪಿ, ವಿಶ್ವ ಆರೋಗ್ಯ ಸಂಸ್ಥೆೆಯೊಂದಿಗೆ ಪಾಲುದಾರಿಕೆ ಹೊಂದಿರುವ ಬ್ಲೂಮ್ ಬರ್ಗ್ ಫಿಲಾಂತ್ರಪೀಸ್ ಬೆಂಬಲಿತ ಆರೋಗ್ಯಕರ ನಗರಗಳ ಪಾಲುದಾರಿಕೆಯೊಂದಿಗೆ ಮತ್ತು ಸ್ಟ್ರಾಟರ್ಜೀಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ತಂಬಾಕಿನ ಹಾನಿಕಾರಕ ಪರಿಣಾಮಗಳು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆಯ ಅಪಾಯಗಳು ಮತ್ತು ಹುಕ್ಕಾ ನಿಷೇಧದ ಬಗ್ಗೆೆ ಜಾಗೃತಿ ಮೂಡಿಸಲು ನಗರಾದ್ಯಂತ ಆಟೋ ಅಭಿಯಾನವನ್ನು ಆರಂಭಿಸಲಾಗಿದೆ.
ಈ ಉಪಕ್ರಮದ ಭಾಗವಾಗಿ 16 ಬ್ರ್ಯಾಂಡ್ ಆಟೋರಿಕ್ಷಾಗಳು ನಗರದ ಅತ್ಯಂತ ಜನದಟ್ಟಣೆಯ ಪ್ರದೇಶಗಳಲ್ಲಿ ಸಂಚರಿಸಲಿದ್ದು, ತಂಬಾಕು ಸಂಬಂಧಿತ ಹಾನಿಗಳು ಮತ್ತು ಧೂಮಪಾನ ಮುಕ್ತ ಸಾರ್ವಜನಿಕ ಸ್ಥಳಗಳ ಮಹತ್ವದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಮೊದಲೇ ರೆಕಾರ್ಡ್ ಮಾಡಿರುವ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತಿದೆ. ಒಂದು ವಾರದವರೆಗೆ ನಡೆಯಲಿರುವ ಈ ಅಭಿಯಾನವು ತಂಬಾಕು ನಿಯಂತ್ರಣ ಕಾನೂನುಗಳ ಪಾಲನೆಯನ್ನು ಬಲಗೊಳಿಸಲು ಮತ್ತು ಆರೋಗ್ಯಕರ ಬೆಂಗಳೂರನ್ನು ಉತ್ತೇಜಿಸುವ ಪ್ರಯತ್ನವಾಗಿದೆ.
ನಗರದಲ್ಲಿ ತಂಬಾಕು ನಿಯಂತ್ರಣ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಮತ್ತು ಅಸ್ತಿತ್ವದಲ್ಲಿರುವ ನಿಯಮಗಳೊಂದಿಗೆ ಹೆಚ್ಚಿನ ಸಾರ್ವಜನಿಕ ಪಾಲನೆಯನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಉಪಕ್ರಮವು ಒಂದು ಮಹತ್ವದ ಹೆಜ್ಜೆೆಯಾಗಿದೆ. ಎಲ್ಲಾ ನಾಗರಿಕರು ಈ ಉಪಕ್ರಮವನ್ನು ಬೆಂಬಲಿಸಬೇಕು ಮತ್ತು ಆರೋಗ್ಯಕರ, ಧೂಮಪಾನದ ಹೊಗೆ ಮುಕ್ತ ಬೆಂಗಳೂರನ್ನು ನಿರ್ಮಿಸಲು ಕೊಡುಗೆ ನೀಡಬೇಕು ಎಂದು ಬಿಬಿಎಂಪಿ ಆಗ್ರಹಿಸಿದೆ.
ನಮ್ಮ ಮಕ್ಕಳು, ನಮ್ಮ ಭವಿಷ್ಯ ಮತ್ತು ತಂಬಾಕಿನ ಅಪಾಯಗಳಿಂದ ಅವರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ಅಭಿಯಾನವು ಸಾರ್ವಜನಿಕರಿಗೆ ಧೂಮಪಾನದಿಂದ ಆರೋಗ್ಯದ ಮೇಲಾಗುವ ಅಪಾಯಗಳ ಬಗ್ಗೆೆ ಅರಿವು ಮೂಡಿಸಲಿದೆ. ಹುಕ್ಕಾ ಮತ್ತು ಇ-ಸಿಗರೇಟ್‌ಗಳ ನಿಷೇಧವನ್ನು ಪ್ರಮುಖವಾಗಿ ಪ್ರಸ್ತಾಪಿಸಲಿದೆ ಮತ್ತು ತಂಬಾಕು ನಿಯಂತ್ರಣ ಕಾನೂನುಗಳ ಪಾಲನೆಯನ್ನು ಉತ್ತೇಜಿಸಲಿದೆ ಎಂದು ಪಾಲಿಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಳರ್ ವಿಕಾಸ್ ಕಿಶೋರ್ ಹೇಳಿದ್ದಾರೆ.
ಸ್ಮೋಕ್ ಫ್ರೀ ಬೆಂಗಳೂರು ಉಪಕ್ರಮದ ಯೋಜನಾ ನಿರ್ದೇಶಕಿ ಡಾ. ಬಿ ಎಸ್ ತ್ರಿವೇಣಿ ಮಾತನಾಡಿ, ಬಿಬಿಎಂಪಿಯೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ, ಯುವ ಜನತೆಯನ್ನು ತಂಬಾಕಿನ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸುವ ಮತ್ತು ಸಾರ್ವಜನಿಕ ಸ್ಥಳಗಳು ಧೂಮಪಾನದ ಹೊಗೆ ಮುಕ್ತವಾದುದನ್ನು ಖಾತ್ರಿಪಡಿಸಿಕೊಳ್ಳುವ ಬದ್ಧತೆಯನ್ನು ನಾವು ಬಲಪಡಿಸುತ್ತಿದ್ದೇವೆ ಎಂದಿದ್ದಾರೆ.