Education News

ಹೆಚ್ಚುವರಿ ಶುಲ್ಕವನ್ನು ವಿದ್ಯಾರ್ಥಿಗಳಿಗೆ ವಾಪಸ್ ಕೊಡಿಸಿದ ಶುಲ್ಕ ನಿಯಂತ್ರಣ ಸಮಿತಿ

Share It

ಬೆಂಗಳೂರು: ಬಿ.ಫಾರ್ಮಾ ಕೋರ್ಸ್ ಪ್ರವೇಶ ಸಂದರ್ಭದಲ್ಲಿ ಎಂಟು ವಿದ್ಯಾರ್ಥಿಗಳಿಂದ ನಿಗದಿಗಿಂತ ಹೆಚ್ಚಾಗಿ 5.40 ಲಕ್ಷ ಶುಲ್ಕ ಕಟ್ಟಿಸಿಕೊಂಡಿದ್ದ ನಗರದ ಆಚಾರ್ಯ ಮತ್ತು ಬಿ.ಎಂ ರೆಡ್ಡಿ ಫಾರ್ಮಸಿ ಕಾಲೇಜಿನಿಂದ ಅಷ್ಟೂ ಹಣವನ್ನು ಶುಲ್ಕ ನಿಯಂತ್ರಣ ಸಮಿತಿ‌ ವಾಪಸ್ ಕೊಡಿಸಿದೆ.

ಈ ಸಂಬಂಧ ಎಂಟು ವಿದ್ಯಾರ್ಥಿಗಳು ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಶ್ರೀನಿವಾಸಗೌಡ ಅವರ ನೇತೃತ್ವದ ಸಮಿತಿಗೆ ದೂರು ಕೊಟ್ಟಿದ್ದರು. ನಂತರ ಕಾಲೇಜಿನ ಆಡಳಿತ ಮಂಡಳಿಯ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳನ್ನು ಕರೆಸಿ, ವಿಚಾರಣೆ ನಡೆಸಿದ‌ ನಂತರ ಹೆಚ್ಚುವರಿ ಶುಲ್ಕ ವಾಪಸ್ ಮಾಡಲು ಆದೇಶಿಸಿದ್ದು, ಆ ಪ್ರಕಾರ ಡಿಡಿ ರೂಪದಲ್ಲಿ ಹಣ ಹಿಂದಿರುಗಿಸಲಾಗಿದೆ.

ಇನ್ನು ಮಂಗಳೂರಿನ ಜಿ.ಆರ್. ವೈದ್ಯಕೀಯ ಕಾಲೇಜು, ವಿದ್ಯಾರ್ಥಿಗಳಾದ ಪೂಜಿತಾ ಜೆ.ಅಂಗಡಿ ಹಾಗೂ ತುಷಾರ್ ಬಿ.ಭಾಸ್ಮೆ ಅವರಿಗೆ ನೀಡಬೇಕಿದ್ದ ಕ್ರಮವಾಗಿ 7 ಲಕ್ಷ ಮತ್ತು 1 ಲಕ್ಷ ರೂಪಾಯಿ ಶುಲ್ಕು ವಾಪಸ್ ಕೊಡಿಸುವ ಕೆಲಸವನ್ನೂ ಸಮಿತಿ ಮಾಡಿದೆ.

ಕಾಲೇಜಿನ ಮಾನ್ಯತೆ ರದ್ಧಾದ ಸಂದರ್ಭದಲ್ಲಿ ಆ ಕಾಲೇಜಿನ ವಿದ್ಯಾರ್ಥಿಗಳನ್ನು ಅನ್ಯ ಕಾಲೇಜುಗಳಿಗೆ ವರ್ಗಾಯಿಸಲಾಗಿತ್ತು. ಆ ಸಂದರ್ಭದಲ್ಲಿ ಶುಲ್ಕ‌ ವರ್ಗಾವಣೆ ಆಗಿರಲಿಲ್ಲ. ಈ ಸಂಬಂಧ ವಿದ್ಯಾರ್ಥಿಗಳು ಸಮಿತಿಗೆ ದೂರು‌ ನೀಡಿದ್ದರು.

ಉಳಿದಂತೆ ಎಂಬಿಎ ಕೋರ್ಸ್ ಪ್ರವೇಶ ಸಂಬಂಧ ಮೂವರು‌ ವಿದ್ಯಾರ್ಥಿಗಳಿಂದ ಆಚಾರ್ಯ ಬೆಂಗಳೂರು ಬಿ-ಸ್ಕೂಲ್ ಸಂಗ್ರಹಿಸಿದ್ದ ಹೆಚ್ಚುವರಿ ಶುಲ್ಕವನ್ನೂ ಸಮಿತಿ ವಾಪಸ್ ಕೊಡಿಸಿದೆ. ಕೆಇಎ ನಿಗದಿಪಡಿಸಿದ ಶುಲ್ಕದ ಜತೆಗೆ 31 ಸಾವಿರ ಮಾತ್ರ ಕಟ್ಟಿಸಿಕೊಳ್ಳಲು ಸೂಚಿಸಲಾಗಿದೆ. ಇದಕ್ಕೆ ದೂರುದಾರ ವಿದ್ಯಾರ್ಥಿಗಳು ಕೂಡ ಒಪ್ಪಿಗೆ ಸೂಚಿಸಿದ್ದಾರೆ.


Share It

You cannot copy content of this page