News

ಎಎಬಿ ಅಧ್ಯಕ್ಷರಿಗೆ ಪತ್ರ ಬರೆದು ಶುಭ ಕೋರಿದ ಎಪಿಆರ್: ಪತ್ರದಲ್ಲಿ ಹಲವು ಮಹತ್ವದ ವಿಷಯಗಳ ಕುರಿತು ಸಲಹೆ

Share It

ಬೆಂಗಳೂರು: ಬೆಂಗಳೂರು ವಕೀಲರ ಸಂಘಕ್ಕೆ ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿವೇಕ್ ಸುಬ್ಬಾರೆಡ್ಡಿ ಅವರಿಗೆ ಮಾಜಿ ಅಧ್ಯಕ್ಷರಾದ ಎ.ಪಿ ರಂಗನಾಥ್ ಪತ್ರ ಬರೆದು ಶುಭಕೋರಿದ್ದಾರೆ. ಪತ್ರದಲ್ಲಿ ವಕೀಲರ ಸಂಕಷ್ಟಗಳ ಕುರಿತಂತೆ ಗಮನ ಹರಿಸಲು ವಿವೇಕ್ ಸುಬ್ಬಾರೆಡ್ಡಿ ಅವರಿಗೆ ಸಲಹೆ ನೀಡಿದ್ದಾರೆ.

ಮುಖ್ಯವಾಗಿ ಹೈಕೋರ್ಟ್ ರಿಜಿಸ್ಟ್ರಿಯಲ್ಲಿ ಹೆಚ್ಚಾಗುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮತ್ತು ಅದರಿಂದ ವಕೀಲರಿಗೆ ಉಂಟಾಗುತ್ತಿರುವ ಸಂಕಷ್ಟಗಳನ್ನು ನಿವಾರಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.

ಎಪಿಆರ್ ಪತ್ರ:
ರವರಿಗೆ,
ಶ್ರೀ ವಿವೇಕ್ ಸುಬ್ಬಾರೆಡ್ಡಿ, ಅಧ್ಯಕ್ಷರು, ಬೆಂಗಳೂರು ವಕೀಲರ ಸಂಘ, ಬೆಂಗಳೂರು.

ಮಾನ್ಯರೇ,
ಬೆಂಗಳೂರು ವಕೀಲರ ಸಂಘದ ತ್ರೈವಾರ್ಷಿಕ ವಾರ್ಷಿಕ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪುನರಾಯ್ಕೆಯಾದ ಶುಭ ಸಂದರ್ಭದಲ್ಲಿ ತಮಗೆ ಅಭಿನಂದನೆಗಳು ಮತ್ತು ಶುಭಾಶಯಗಳು.

ಈ ಬಾರಿಯ ತಮ್ಮ ಅಧಿಕಾರ ಅವಧಿಯಲ್ಲಿ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸಭೆ ಸರ್ವ ಸದಸ್ಯರ ಸಭೆಗಳನ್ನು ನಿಯಮಿತವಾಗಿ ಸಂಘದ ಬೈಲಾ ರೀತಿಯಲ್ಲಿ ಆಯೋಜಿಸಿ. ಸಂಘದ ಕಾರ್ಯಕಾರಿ ಸಮಿತಿ ಸಭೆಯ ಕುರಿತು,ಸಭೆಯ ಅಜೆಂಡಾಗಳ ಕುರಿತು ವಕೀಲರಿಗೆ ಮಾಹಿತಿ ನೀಡಿ. ಸಭೆಯ ನಂತರ ಕಾರ್ಯಕಾರಿ ಸಮಿತಿಯು ಪದಾಧಿಕಾರಿಗಳೊಂದಿಗೆ ಕೂಡಿ ತೆಗೆದುಕೊಂಡ ನಿರ್ಣಯಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಿ. ವಕೀಲ ಸದಸ್ಯರು ಸಂಘದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಪಾರದರ್ಶಕವಾಗಿ ಗಮನಿಸುವಂತೆ ಮಾಡುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ಸಂಘದ ಲೆಕ್ಕಪತ್ರಗಳನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ವಕೀಲ ಸದಸ್ಯರಿಗೂ ಈ ಕುರಿತು ಮಾಹಿತಿ ಒದಗಿಸಿ. ವಕೀಲರ ಸಂಘದ ಬೈಲಾ, ಸೊಸೈಟಿ ಆಕ್ಟ್, ಸಂವಿಧಾನ ಮತ್ತು ಹಿಂದಿನ ಅವಧಿಯ ಸಂಘದ ನಡಾವಳಿಗಳು ತಮ್ಮ ಕೈದೀವಿಗೆಯಾಗಲಿ.

ಸಂಘದ ಚುನಾವಣೆ ಸಂದರ್ಭದಲ್ಲಿ ತಾವು ನೀಡಿರುವ “ಭರವಸೆಗಳು” ವಕೀಲರು ಮತ್ತು ಸಂಘದ ಹಿತಾಸಕ್ತಿಗಳನ್ನು ಪ್ರಾಮಾಣಿಕವಾಗಿ ಕಾಪಾಡುವುದೇ ಎಂಬುದರ ಕುರಿತಾಗಿ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಚರ್ಚಿಸಿ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಿ. ಇವುಗಳೊಂದಿಗೆ ಕಾಲಕಾಲಕ್ಕೆ ವಕೀಲರು ನೀಡುವ ಸಲಹೆ ಮಾರ್ಗದರ್ಶನಗಳನ್ನು ಸಹ ನಿರ್ಲಕ್ಷಿಸದೆ ಗೌರವದಿಂದ ಸ್ವೀಕರಿಸಿ. “ವಕೀಲ ರಕ್ಷಣಾ ಕಾಯ್ದೆ”ಯಲ್ಲಿರುವ ನ್ಯೂನ್ಯತೆಗಳನ್ನು ಪರಿಹರಿಸಲು ಹಿರಿಯ ವಕೀಲರ ಸಮಿತಿಯೊಂದನ್ನು ನೇಮಿಸಿ, ಅವರಿಂದ ಸಲಹೆ ಸೂಚನೆಗಳನ್ನು ಪಡೆದು, ಅವುಗಳನ್ನು ಪ್ರಸಕ್ತ ಕಾಯ್ದೆಯಲ್ಲಿ ಸೇರ್ಪಡೆಗೆ ಆಗ್ರಹಿಸಿ ಪ್ರಾಮಾಣಿಕ ಹೋರಾಟ ರೂಪಿಸಿ.

ಈ ಬಾರಿಯ ಸಂಘದ ಚುನಾವಣೆಯಲ್ಲಿ ಹೆಚ್ಚು ಚರ್ಚಿತವಾದ ವಿಚಾರಗಳೆಂದರೆ:
ಹೈಕೋರ್ಟಿನ ಫೈಲಿಂಗ್ ಮತ್ತು ಕೇಸುಗಳನ್ನು ಬೆಂಚಿಗೆ ತರುವ ಹಂತದಲ್ಲಿ ನಡೆಯುತ್ತಿರುವ ತಾರತಮ್ಯ ಮತ್ತು ಭ್ರಷ್ಟಾಚಾರಗಳು, ಟ್ರಯಲ್ ಕೋರ್ಟ್ ನ್ಯಾಯಾಲಯಗಳು ಮತ್ತು ಕಚೇರಿಗಳಲ್ಲಿ ವಕೀಲರಿಗೆ ಉಂಟಾಗುತ್ತಿರುವ ತೊಂದರೆಗಳು. ಇವುಗಳ ನಿವಾರಣೆಯಲ್ಲಿ ತಮ್ಮ ಪಾತ್ರ ಬಹಳ ಹಿರಿದಾಗಿರುತ್ತದೆ. ಎಂದಿನ ತಮ್ಮ ವೃತ್ತಿಯ ಒತ್ತಡಗಳು ಮತ್ತು ರೂಢಿಗತ ಅಭ್ಯಾಸಗಳಿಂದ ಹೊರಬಂದು ವಕೀಲರು ಮತ್ತು ವಕೀಲರ ಸಂಘದ ಸೇವೆಯ ಕಡೆಗೆ ಹೆಚ್ಚು ಸಮಯ ನೀಡಿ, ಸಂಘದ ಘನತೆ ಮತ್ತು ತಮ್ಮ ವೈಯಕ್ತಿಕ ಘನತೆಯನ್ನು ಹೆಚ್ಚಿಸಿಕೊಳ್ಳಿ.

ವಕೀಲರು ಮತ್ತು ವಕೀಲರ ಸಂಘದ ಹಿತಾಸಕ್ತಿಯ ಜೊತೆಗೆ ನ್ಯಾಯಾಂಗ, ನಾಡು, ನುಡಿ, ನೆಲ – ಜಲ ರಾಜ್ಯದ ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು – ಯುವ ಜನರು ಸೇರಿದಂತೆ ಸರ್ವರ ಹಿತಾಸಕ್ತಿಯನ್ನು ಕಾಪಾಡುವುದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರ “ನೈತಿಕ ಹೊಣೆ ಮತ್ತು ರಾಜ್ಯದ ಋಣ ಸಂದಾಯದ ಪವಿತ್ರ ಮಾರ್ಗ” ಎಂದು ಈ ಸಂದರ್ಭದಲ್ಲಿ ತಮಗೆ ತಿಳಿಸ ಬಯಸುತ್ತೇನೆ. “ಸೇವೆಯೇ ನನ್ನ ಧರ್ಮ” ಎಂಬ ಮಹಾತ್ಮ ಗಾಂಧೀಜಿಯವರ ಆದರ್ಶ, “ಶಿಕ್ಷಣ – ಹೋರಾಟ – ಸಂಘಟನೆ” ಎಂಬ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಜಾಗೃತಿ ಮಾತುಗಳು ಮತ್ತು ಕಾರ್ಲ್ ಮಾರ್ಕ್ಸ್ ಅವರ “Leadership is not a position it is a place of of service and activities” ಎಂಬ ಧೀರೋದಾತ್ತ ಕರೆ ನಿಮಗೆ ಮಾರ್ಗದರ್ಶನವಾಗಲಿ.

ಬೆಂಗಳೂರು ವಕೀಲರು ಸೇರಿದಂತೆ, ರಾಜ್ಯದ ಎಲ್ಲಾ ವಕೀಲರುಗಳು, ವಕೀಲರ ಸಂಘಗಳು, ನ್ಯಾಯಾಂಗದ ಕಲ್ಯಾಣ‌ ಮತ್ತು ಸಾರ್ವಜನಿಕರ ಕಲ್ಯಾಣ ಮತ್ತು ಹಿತಾಸಕ್ತಿಗಳಿಗಾಗಿ ಬೆಂಗಳೂರು ವಕೀಲರ ಸಂಘ ತೆಗೆದುಕೊಳ್ಳುವ ಪ್ರಾಮಾಣಿಕ ಮತ್ತು ಪಾರದರ್ಶಕ ನಿರ್ಣಯಗಳು,ಆಯೋಜಿಸುವ ಹೋರಾಟಗಳನ್ನು ಬೆಂಬಲಿಸಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ಈ ಮೂಲಕ ತಮಗೂ, ಬೆಂಗಳೂರು ವಕೀಲರು ಸೇರಿದಂತೆ ರಾಜ್ಯದ ವಕೀಲರಿಗೆ ಈ ಮೂಲಕ ಖಚಿತ ಪಡಿಸುತ್ತಿದ್ದೇನೆ.

ಗೌರವಗಳೊಂದಿಗೆ,
ತಮ್ಮ ನಂಬುಗೆಯ
ಎ ಪಿ ರಂಗನಾಥ
17/2/2025


Share It

You cannot copy content of this page