ಬೆಂಗಳೂರು/ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ನಿರ್ವಹಣೆ, ಪ್ರಾಣಿಗಳ ನಡವಳಿಕೆಯ ಅಧ್ಯಯನ, ಕಾಡು ಪ್ರಾಣಿಗಳ ಸಂರಕ್ಷಣೆ ಮುಂತಾದ ವಿಷಯಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಸಲುವಾಗಿ 12 ರಿಂದ 18 ವರ್ಷದ ವಯೋಮಿತಿಯ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದೆ.
ಬೇಸಿಗೆ ಶಿಬಿರದ ಮೊದಲ ಬ್ಯಾಚ್ ಬರುವ ಏಪ್ರಿಲ್ 14 ರಿಂದ 23 ರವರೆಗೆ ನಡೆಯಲಿದ್ದು ಮೇ 5 ರಿಂದ 14 ರವರೆಗೆ ಎರಡನೇ ಬ್ಯಾಚ್ ಇರಲಿದೆ. ಶಿಬಿರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಮೃಗಾಲಯದ ಅಧಿಕಾರಿಗಳು ಮತ್ತು ಇತರೆ ವಿಷಯ ತಜ್ಞರು ಭಾಗವಹಿಸುವವರೊಂದಿಗೆ ಸಂವಾದ ಕೂಡ ಶಿಬಿರದ ವಿಶೇಷತೆಯಾಗಿದೆ.
ಆಸಕ್ತಿಯುಳ್ಳವರು ಮಾರ್ಚ್ 10 ರಿಂದ 15 ರೊಳಗೆ ಮೃಗಾಲಯದ ಕಚೇರಿಯಲ್ಲಿ ಅರ್ಜಿಯನ್ನು ಪಡೆಯಬೇಕು. ಮಾರ್ಚ್ 17 ರ ಒಳಗೆ ಭರ್ತಿಮಾಡಿದ ಅರ್ಜಿಯನ್ನು ಕಚೇರಿ ಸಮಯದಲ್ಲಿ ಸಲ್ಲಿಸಬೇಕು. ಶಿಬಿರಕ್ಕೆ ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದ ಮೇಲೆ 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಲಿದೆ. ಹೆಚ್ಚಿನ ಮಾಹಿತಿಗಾಗಿ, edumysore99@gmail.com ಗೆ ಇ-ಮೇಲ್ ಕಳುಹಿಸಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಯೊಂದಿಗೆ ಒಂದು ಇತ್ತಿಚಿನ ಸ್ಟ್ಯಾಂಪ್ ಅಳತೆಯ ಬಣ್ಣದ ಛಾಯಾಚಿತ್ರ, ವಯಸ್ಸಿನ ಪುರಾವೆ (ಆಧಾರ್ ಕಾರ್ಡ್ ಅಥವ ಜನನ ಪ್ರಮಾಣ ಪತ್ರದ ಪ್ರತಿ), ಶಿಬಿರದ ಶುಲ್ಕ ರೂ.2000/- ಅರ್ಜಿಯೊಂದಿಗೆ ಪಾವತಿಸಬೇಕಿದೆ. ಶಿಬಿರಕ್ಕೆ ಹಾಜರಾಗಲು ಆಯ್ಕೆಯಾದ ಸದಸ್ಯರಿಗೆ ಇ-ಮೇಲ್ ಮೂಲಕ ಸೂಚನೆ ಮತ್ತು ಹೆಚ್ಚಿನ ವಿವರಗಳು ಸಿಗಲಿದೆ.