ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾಗಿ ಆರ್‌ಸಿ ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜನ್ನು ಪರಿವರ್ತಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಮಂಗಳವಾರ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆಯನ್ನು ನಡೆಸಿತು.
ಈ ಕುರಿತು ಮಾತನಾಡಿದ ರಾಜ್ಯ ಖಚಾಂಜಿ ಬಿ ಜೆ ಸುಭಾಸ್ ಅವರು ಆರ್ ಸಿ ಮತ್ತು ಸರ್ಕಾರಿ ಕಲಾ ಕಾಲೇಜು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಾದರೆ, ಏಕಾಏಕಿ ಕಾಲೇಜಿನ ಶುಲ್ಕ ಹೆಚ್ಚಳವಾಗುತ್ತದೆ. ಈ ಕಾರಣ ಬಡ ವಿದ್ಯಾರ್ಥಿಗಳಿಗೆ ಇರುವ ಕೆಲವೇ ಸರ್ಕಾರಿ ಕಾಲೇಜುಗಳಲ್ಲಿಯೂ ಸಹ ಓದಲು ಸಾಧ್ಯವಾಗುವುದಿಲ್ಲ. ಈಗಾಗಲೇ ಮಹಾರಾಣಿ ಪದವಿ ಕಾಲೇಜು ಕ್ಲಸ್ಟರ್ ವಿಶ್ವವಿದ್ಯಾನಿಲಯದವಾದ ಕಾರಣ, ಕಾಲೇಜಿನ ಶುಲ್ಕ ಏರಿಕೆಯಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿರುವುದನ್ನು ಗಮನಿಸಿದ್ದೇವೆ. ಸರ್ಕಾರದ ಈ ಧೋರಣೆ ಶಿಕ್ಷಣವನ್ನು ಉಳ್ಳವರ ಸ್ವತ್ತಾಗಿ ಮಾಡಲು ಮುಂದಾಗಿದಂತಾಗುತ್ತದೆ ಎಂದರು.
ಭಾಷಣಕಾರ ಅಭಯ ದಿವಾಕರ್ ಮಾತನಾಡಿ, ಯಾವ ರೀತಿಯಲ್ಲಿ ಭಗತ್ ಸಿಂಗ್ – ನೇತಾಜಿ ಸುಭಾಸ್ ಚಂದ್ರ ಬೋಸ್ ರಂತಹ ಮಹಾನ್ ಸ್ವಾತಂತ್ರ‍್ಯ ಹೋರಾಟಗಾರರು ಅಂದಿನ ಸಂದರ್ಭದಲ್ಲಿ ಹೋರಾಟವನ್ನು ಮುನ್ನಡೆಸಿದರು, ಅನ್ಯಾಯವನ್ನು ಕಂಡಾಗ ಪ್ರಶ್ನಿಸುವಂತಹ ವ್ಯಕ್ತಿಗಳಾಗಿ ಹೋರಾಟವನ್ನು ಕಟ್ಟಿ ಬೆಳೆಸಿದರು, ಅವರಿಂದ ಸ್ಪೂರ್ತಿಯನ್ನು ಪಡೆದು ಈ ಕಾಲೇಜುಗಳನ್ನು ಉಳಿಸಿಕೊಳ್ಳುವ ಸಲುವಾಗಿ ಹೋರಾಟ ಸಮಿತಿಯನ್ನು ರಚಿಸಿ, ಹೋರಾಟವನ್ನು ಮುಂದುವರೆಸಬೇಕು ಎಂದು ಕರೆ ನೀಡಿದರು.
ಈ ವೇಳೆ ಆರ್ ಸಿ ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.