News

ನಗರದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ; ಸಂಚಾರ ಅಸ್ತವ್ಯಸ್ತ

Share It

ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಸುರಿದ ಧಾರಾಕಾರ ಮಳೆಯಿಂದ ನಗರದ ಹಲವೆಡೆಗಳಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತವಾಗಿದೆ.

ಕೆ.ಆರ್ ಮಾರುಕಟ್ಟೆ, ಕಾರ್ಪೋರೇಷನ್ ಸರ್ಕಲ್, ಶಾಂತಿನಗರ, ಆರ್.ಆರ್ ನಗರ, ಟೌನ್‌ಹಾಲ್, ಮೆಜೆಸ್ಟಿಕ್, ಉತ್ತರಹಳ್ಳಿ, ಶೇಷಾದ್ರಿಪುರ, ದಾಸರಹಳ್ಳಿ, 8ನೇ ಮೈಲಿ, ಮಾದಾವರ, ಮಲ್ಲೇಶ್ವರ, ಶಿವಾಜಿನಗರ, ಜಯನಗರ, ಚಾಮರಾಜಪೇಟೆ, ವಿಜಯನಗರ, ಮತ್ತಿಕೆರೆ, ಯಶವಂತಪುರ, ನಾಗರಬಾವಿ, ಜ್ಞಾನಭಾರತಿ, ಫ್ರೇಜರ್ ಟೌನ್ ಸೇರಿದಂತೆ ಹಲವು ಕಡೆಗಳಲ್ಲಿ ಭಾರೀ ಮಳೆ ಸುರಿದಿದ್ದು, ಮಳೆಯಿಂದಾಗಿ ನಗರದ ಹಲವು ಭಾಗಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಮಾದನಾಯಕನಹಳ್ಳಿ ಸುತ್ತಮುತ್ತಲಿನಲ್ಲಿ ಆಲಿಕಲ್ಲು ಮಳೆಯಾಗಿದೆ. ಇನ್ನು ಹಲವು ಕಡೆಗಳಲ್ಲಿ ಭಾರೀ ಮಳೆಯಿಂದ ರಸ್ತೆಗಳು ಜಲಾವೃತವಾಗಿದ್ದು, ಕೆಲ ಕಡೆಗಳಲ್ಲಿ ನೀರು ನಿಂತು ರಸ್ತೆಗಳು ಕೆರೆಯಂತಾಗಿದೆ.

ಮರಬಿದ್ದು ಆಟೋ ಚಾಲಕ ದುರ್ಮರಣ:

ಕತ್ರಿಗುಪ್ಪೆಯಲ್ಲಿ ಸುರಿದ ಭಾರೀ ಮಳೆಗೆ ರಸ್ತೆಗೆ ಬೃಹತ್ ಮರವೊಂದು ಮುರಿದು ಆಟೋ ಮೇಲೆ ಬಿದ್ದ ರಭಸಕ್ಕೆ ಚಾಲಕನು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇಟ್ಟಮಡು ಮೂಲದ ನಿವಾಸಿ ಮಹೇಶ್(45) ಮೃತಪಟ್ಟ ಆಟೋ ಚಾಲಕ ಎಂದು ತಿಳಿದುಬಂದಿದೆ. ಕತ್ರಿಗುಪ್ಪೆಯ ಎಂಎಂ ಬಾರ್ ಮುಂದೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬನಶಂಕರಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮರ ಬಿದ್ದ ರಭಸಕ್ಕೆ ಆಟೋದಲ್ಲೇ ಸಿಲುಕಿಕೊಂಡಿದ್ದ ಮಹೇಶ್ ಮೃತದೇಹವನ್ನು ಮರ ಕಡಿದು ಹೊರ ತೆಗೆಯಲು ಬೆಸ್ಕಾಂ ಹಾಗೂ ಬಿಬಿಎಂಪಿ ಸಿಬ್ಬಂದಿಯು ಹರಸಾಹಸ ಪಡುವಂತಾಯಿತು. ಹೊರ ತೆಗೆದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆ:

ಹಂಪಿನಗರ 55, ನಾಯಂಡಹಳ್ಳಿ 46, ವಿದ್ಯಾಪಿಠ 46, ರಾಜರಾಜೇಶ್ವರಿನಗರ 44, ಹೊರಮಾವು 31, ಹೆರೋಹಳ್ಳಿ 30, ಪುಲಿಕೇಶಿನಗರ 27, ಕೆಂಗೇರಿ 25, ಗೊಟ್ಟಿಗೆರೆ 24, ಬಾಣಸವಾಡಿ ಪಶ್ಚಿಮ 24, ಬಸವೇಶ್ವರನಗರ 21, ಪಟ್ಟಾಭಿರಾಮನಗರ 18, ನಾಗಪುರ 17, ಆಂಜಾನಪುರ 17, ಹೊರಮಾವು 16, ಕೋರಮಂಗಲ 15, ಸಂಪಂಗಿರಾಮನಗರ 14, ನಂದಿನಿಲೇಔಟ್​ 14, ರಾಜಾಜಿನಗರದಲ್ಲಿ 13 ಮಿಮೀ ಮಳೆಯಾಗಿದೆ.


Share It

You cannot copy content of this page