ಬೆಂಗಳೂರು: 2024-25ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್. ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 22 ವಿದ್ಯಾರ್ಥಿಗಳು 625 ಕ್ಕೆ 625 ತಗೆದು ಇತಿಹಾಸ ನಿರ್ಮಿಸಿದ್ದಾರೆ.
ಪರೀಕ್ಷೆ ಬರೆದಿದ್ದ ಒಟ್ಟು 8,42,173 ವಿದ್ಯಾರ್ಥಿಗಳ ಪೈಕಿ 5,24,984 ಮಂದಿ ತೇರ್ಗಡೆಯಾಗಿದ್ದಾರೆ. ಶೇ.62.34ರಷ್ಟು ಫಲಿತಾಂಶ ಬಂದಿದೆ ಬಾಲಕಿಯರೇ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. ಮೊದಲ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿದ್ದು ಅಲ್ಲಿ ಶೇ. 91.12 ಫಲಿತಾಂಶ ಬಂದಿದೆ. ಕಲಬುರಗಿ ಜಿಲ್ಲೆ ಶೇ.42.43 ಫಲಿತಾಂಶ ಪಡೆಯುವ ಮೂಲಕ ಕೊನೆ ಸ್ಥಾನ ಪಡೆದಿದೆ.
ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳ ಪೈಕಿ 329 ಶಾಲೆಗಳು ಶೇ.100ರಷ್ಟು ಫಲಿತಾಂಶ ಬಂದರೆ 6 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ. 539 ಅನುದಾನಿತ ಶಾಲೆಗಳು ಶೇ.100ರಷ್ಟು ರಿಸಲ್ಟ್ ಪಡೆದಿದ್ದರೆ, 108 ಶಾಲೆಗಳು ಸೊನ್ನೆಗೆ ತೃಪ್ತಿಪಟ್ಟುಕೊಂಡಿವೆ. ಒಟ್ಟಾರೆ 921 ಶಾಲೆಗಳು ಗರಿಷ್ಠ ಅಂಕ ಸಾಧಿಸಿದರೆ 144 ಶಾಲೆಗಳ ರಿಸಲ್ಟ್ ಝೀರೋ ಆಗಿದೆ. ಇನ್ನು 3,90,311 ವಿದ್ಯಾರ್ಥಿಗಳ ಪೈಕಿ 2,26,637 ಮಂದಿ ವಿದ್ಯಾರ್ಥಿಗಳು ಪಾಸ್ ಆಗಿದ್ಧಾರೆ. 4,00,579 ವಿದ್ಯಾರ್ಥಿನಿಯರ ಪೈಕಿ 2,96,438 ಮಂದಿ ತೇರ್ಗಡೆಯಾಗಿದ್ದಾರೆ. ಶೇ.74ರಷ್ಟು ಬಾಲಕಿಯರು ಹಾಗೂ ಶೇ.58.07ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. ಉತ್ತಮ ಫಲಿತಾಂಶ ಬಯಸುವ ಹಾಗೂ ತೇರ್ಗಡೆಯಾಗದ ವಿದ್ಯಾರ್ಥಿಗಳಿಗಾಗಿ ಎರಡನೇ ಪರೀಕ್ಷೆಯನ್ನ ಮೇ.26 ರಿಂದ ಜೂ.2ರವರೆಗೆ ನಡೆಯಲಿದೆ, ಪರೀಕ್ಷೆ-3 ಅನ್ನು ಜೂ.23ರಿಂದ 30ರವರೆಗೆ ನಿಗದಿಪಡಿಸಲಾಗಿದೆ.
ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತಾನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇ.53ರಷ್ಟು ಫಲಿತಾಂಶ ಬಂದಿತ್ತು. ಪರೀಕ್ಷಾ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ರಾಜ್ಯದಲ್ಲಿ 13 ಸಾವಿರ ಶಿಕ್ಷಕರನ್ನ ನೇಮಿಸಿ ವಿಶೇಷ ತರಗತಿಗಳನ್ನ ನಡೆಸಿದ್ದರ ಫಲವಾಗಿ ಈ ಭಾರಿ ಒಟ್ಟಾರೆ ಶೇ. 62.34ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸುವ ರೆಗ್ಯುಲರ್ ವಿದ್ಯಾರ್ಥಿಗಳಿಗೆ, ಪುನಾರವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ವಿಧಿಸಲಾಗಿದೆ. ಆದರೆ ಮೊದಲ ಬಾರಿಗೆ ಪರೀಕ್ಷೆ ಬರೆದು ತೇರ್ಗಡೆಯಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದರು.
ಕಳೆದ ಬಾರಿ ಇಬ್ಬರು ವಿದ್ಯಾರ್ಥಿಗಳು ಮಾತ್ರ ಗರಿಷ್ಠ ಅಂಕ ಪಡೆದಿದ್ದರು. ಈ ಸಲ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. 970 ವಿದ್ಯಾರ್ಥಿಗಳು 620ರಿಂದ 625ರವರೆಗೆ ಅಂಕ ಪಡೆದಿದ್ದಾರೆ. ಕಳೆದ ಸಾಲಿನಲ್ಲಿ ಈ ಸಂಖ್ಯೆ 152 ಆಗಿತ್ತು. ಉತ್ತೀರ್ಣರಾದ ವಿದ್ಯಾರ್ಥಿಗಳ ಪೈಕಿ ಶೇ.75ರಷ್ಟು ವಿದ್ಯಾರ್ಥಿಗಳು ಶೇ.60ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. 5936 ಸರ್ಕಾರಿ ಶಾಲೆಗಳು ಶೇ.62.7, 3583 ಅನುದಾನಿತ ಶಾಲೆಗಳು ಶೇ.58.97 ಹಾಗೂ 6364 ಅನುದಾನರಹಿತ ಶಾಲೆಗಳ ಫಲಿತಾಂಶ ಶೇ.75.59ರಷ್ಟಿದೆ ಎಂದು ಮಾಹಿತಿ ನೀಡಿದರು.