ನವದೆಹಲಿ: ಗುಡುಗು ಸಹಿತ ಸುರಿದ ಭಾರಿ ಮಳೆಗೆ ಶುಕ್ರವಾರ ವಿಮಾನ ನಿಲ್ದಾಣದಲ್ಲಿ 200ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದ್ದು, ಮೂರು ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ ಎಂದು ದೆಹಲಿ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಮಾಹಿತಿ ನೀಡಿದೆ.
ಪ್ರತಿಕೂಲ ಹವಾಮಾನವು ವಿಮಾನಗಳ ಸಂಚಾರದ ಮೇಲೆ ಪರಿಣಾಮ ಬೀರಿದ್ದು, ಮಳೆಯಿಂದಾಗಿ ವಿಮಾನ ಸಂಚಾರಕ್ಕೆ ಅಡಚಣೆಯಾಗಿದೆ. ಹಾಗಾಗಿ, ನಿಗದಿತ ವೇಳೆಯಲ್ಲಿ ವಿಮಾನಗಳ ಹಾರಾಟ ನಡೆಸಲು ಸಾಧ್ಯವಾಗಿಲ್ಲ. ಇದರಿಂದ ಪ್ರಯಾಣಿಕರಿಗೆ ಆಗಿರುವ ತೊಂದರೆಗೆ ವಿಷಾದಿಸುತ್ತೇವೆ ಮತ್ತು ಸಮಸ್ಯೆಯನ್ನು ಬಗೆಹರಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದೆ.
ಪರಿಸ್ಥಿತಿಯು ಸಹಜ ಸ್ಥಿತಿಗೆ ಮರಳುವ ಸಾದ್ಯತೆ ಇದೆ ಎಂದು ಇಂಡಿಗೊ, ಸ್ಪೈಸ್‌ಜೆಟ್ ಮತ್ತು ಏರ್ ಇಂಡಿಯಾ ವಿಮಾನಯಾನ ಕಂಪನಿಗಳು ಎಕ್ಸ್ ಮೂಲಕ ತಿಳಿಸಿವೆ. ಪ್ರತಿದಿನ ಈ ನಿಲ್ದಾಣದಿಂದ 1300ಕ್ಕೂ ಹೆಚ್ಚು ವಿಮಾನಗಳು ದೇಶ ವಿದೇಶಗಳ ವಿವಿಧ ಸ್ಥಳಗಳಿಗೆ ಹಾರಾಟ ನಡೆಸುತ್ತವೆ.