ಬೆಂಗಳೂರು: ವಕೀಲರಲ್ಲದವರು ತಮ್ಮ ವಾಹನಗಳ ಮೇಲೆ ವಕೀಲರ ಲೋಗೋ ಲಗತ್ತಿಸಿದ್ದರೆ, ಅಂತಹ ವಾಹನಗಳ ಸಂಖ್ಯೆ ಮತ್ತು ಪೋಟೋವನ್ನು ಕಳುಹಿಸಿಕೊಡುವಂತೆ ಸಾರ್ವಜನಿಕರು ಹಾಗೂ ವಕೀಲರಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮನವಿ ಮಾಡಿದೆ.
ಈ ಕುರಿತಂತೆ ವಕೀಲರ ಪರಿಷತ್ ಅಧ್ಯಕ್ಷ ಎಸ್ ಎಸ್ ಮಿಟ್ಟಲಕೋಡ ಅವರು ಪ್ರಕಟಣೆ ಹೊರಡಿಸಿದ್ದು, ರಾಜ್ಯದಲ್ಲಿ ವಕೀಲರಲ್ಲದವರು ಹಾಗೂ ವಾಣಿಜ್ಯ ವಾಹನಗಳಿಗೆ ವಕೀಲರ ಲೋಗೊ ಲಗತ್ತಿಸಿಕೊಂಡು, ತಾವು ವಕೀಲರು ಎಂದು ಸಾರ್ವಜನಿಕರಿಗೆ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ.
ಇಂತಹವರಿಂದಾಗಿ ವಕೀಲರ ಸಮುದಾಯದ ಹೆಸರು ದುರುಪಯೋಗವಾಗುತ್ತಿದೆ ಹಾಗೂ ವಕೀಲ ವೃತ್ತಿಗೆ ಅವಮಾನ ಮಾಡುತ್ತಿದ್ದಾರೆ. ಆದ್ದರಿಂದ ವಕೀಲರಲ್ಲದವರು ತಮ್ಮ ವಾಹನಗಳ ಮೇಲೆ ವಕೀಲರ ಚಿಹ್ನೆ ಅಳವಡಿಸಿಕೊಂಡಿದ್ದರೆ, ಅಂತಹ ವಾಹನಗಳ ಸಂಖ್ಯೆ/ಫೋಟೊವನ್ನು ಪರಿಷತ್ತಿನ ಅಧಿಕೃತ ಇ-ಮೇಲ್ ವಿಳಾಸ Kar_barcouncil@yahoo.com ಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಜತೆಗೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.