Health News

ನವಜಾತ ಶಿಶುಗಳಿಗೆ ವರದಾನವಾಗುತ್ತಿದೆ ಘೋಷ ಆಸ್ಪತ್ರೆಯ ಹ್ಯೂಮನ್ ಮಿಲ್ಕ್ ಬ್ಯಾಂಕ್

Share It

ಬೆಂಗಳೂರು: ಸ್ತನ್ಯಪಾನವು ನವಜಾತ ಶಿಶುಗಳ ಬೆಳವಣಿಗೆಗೆ ಸಾಕಷ್ಟು ಪೋಷಣೆಯನ್ನು ಒದಗಿಸುತ್ತದೆ. ರೋಗನಿರೋಧಕ ರಕ್ಷಣೆಯ ಜೊತೆಗೆ ತಾಯಿ ಮತ್ತು ಮಗುವಿನ ಜೀವಿತಾವಧಿಯ ಆರೋಗ್ಯ ಪ್ರಯೋಜನಗಳನ್ನು ಪೂರೈಸುವ ನಿಟ್ಟಿನಲ್ಲಿ, ತಾಯಿ ಎದೆ ಹಾಲನ್ನು ನವಜಾತ ಶಿಶುಗಳಿಗೆ ನೀಡುವ ಜೀವ ಸಂಜೀವಿನಿಯಾಗಿ ನಗರದ ಬೌರಿಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತದ ವ್ಯಾಪ್ತಿಯಲ್ಲಿ ಬರುವ ಘೋಷ ಆಸ್ಪತ್ರೆ ಯಶಸ್ವಿಯಾಗಿ ನೀಡುವ ಕಾರ್ಯ ನಿರ್ವಹಿಸುತ್ತಿದೆ.

2023 ಜುಲೈನಲ್ಲಿ ರಾಜ್ಯದ 2ನೇ ಸರ್ಕಾರಿ ವ್ಯವಸ್ಥೆಯ ಹ್ಯೂಮನ್ ಮಿಲ್ಕ್ ಬ್ಯಾಂಕ್ ಉದ್ಘಾಟನೆಗೊಂಡಿತ್ತು. ಸುಮಾರು ಮೂರು ತಿಂಗಳ ಪ್ರಾಯೋಗಿಕ ಕಾರ್ಯಾಚರಣೆಯ ಬಳಿಕ ಅದೇ ವರ್ಷದ ಅಕ್ಟೋಬರ್‌ನಲ್ಲಿ ಪೂರ್ಣ ಪ್ರಮಾಣದ ಕಾರ್ಯಾಚರಣೆ ಪ್ರಾರಂಭಗೊಂಡಿತ್ತು. ಈವರೆಗೆ ಇಲ್ಲಿ 100 ಲೀಟರ್‌ಗಿಂತ ಅಧಿಕ ತಾಯಿ ಎದೆ ಹಾಲನ್ನು ಸಂಗ್ರಹಿಸಿ, ಹಸುಗೂಸುಗಳಿಗೆ ನೀಡಲಾಗಿದೆ. ದಿನಕ್ಕೆ ಬೌರಿಂಗ್ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕ(ಎನ್‌ಐಸಿಯು)ದಲ್ಲಿ ದಾಖಲಾಗುವ ಸರಾಸರಿ 20 ನವಜಾತ ಶಿಶುಗಳಿಗೆ ಈ ಸಂಸ್ಕರಿಸಿದ ಎದೆ ಹಾಲು ಪೂರೈಕೆಯಾಗುತ್ತಿದೆ. ಕಡಿಮೆ ತೂಕವುಳ್ಳ ಶಿಶು, ಅವಧಿಪೂರ್ವ ಶಿಶುಗಳು ತಾಯಿ ಹಾಲಿನ ಅವಶ್ಯಕತೆ ಹೆಚ್ಚಿರುತ್ತದೆ. ಹೆಚ್ಚಾಗಿ ಮೇ ತಿಂಗಳಿನಿಂದ ನವೆಂಬರ್‌ವರೆಗೆ ಹೆಚ್ಚು ಮಕ್ಕಳ ಜನನವಾಗುತ್ತವೆ. ಹಾಗೆಯೇ ಆ ಸಮಯದಲ್ಲಿ ಎದೆ ಹಾಲಿನ ಸಂಗ್ರಹ ಕೂಡ ಜಾಸ್ತಿ ಇರುತ್ತದೆ.

ಶೇ.100 ರಷ್ಟು ತಾಯಂದಿರಿಗೆ ಆಸ್ಪತ್ರೆಯಿಂದ ಕೌನ್ಸಿಲಿಂಗ್ ನಡೆಯುತ್ತಿದ್ದು, ಶೇ. 40 ರಿಂದ 50 ರಷ್ಟು ತಾಯಂದಿರು ಎದೆ ಹಾಲು ದಾನಕ್ಕೆ ಮುಂದಾಗುತ್ತಿದ್ದಾರೆ. ಕಡಿಮೆ ತೂಕವುಳ್ಳ ಶಿಶು, ಅವಧಿಪೂರ್ವ ಶಿಶುಗಳು ಸೇರಿದಂತೆ ಹಾಲಿನ ಅಗತ್ಯವಿರುವ ಶಿಶುಗಳಿಗೆ ಹಾಲು ಉಚಿತವಾಗಿ ವಿತರಿಸುವ ಕಾರ್ಯ ಮಾಡಲಾಗುತ್ತಿದೆ. ಅದರಂತೆ ಪ್ರತಿ ದಿನವೂ ಒಂದು ಮಗುವಿಗೆ 250 ಮಿ.ಲೀ ಹಾಲಿನ ಅಗತ್ಯವಿದ್ದು, ಮಿಲ್ಕ್ ಬ್ಯಾಂಕ್ ನಿಂದ ಸುಮಾರು 1 ರಿಂದ 1.5 ಲೀಟರ್ ಹಾಲನ್ನು ನೀಡುವ ಕಾರ್ಯ ಸರಾಗವಾಗಿ ನಡೆಯುತ್ತಿದೆ. ಎಲ್ಲ ಹಾಲನ್ನು ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಅಡಿಯಲ್ಲಿ ಬರುವ ವಿಶೇಷ ನವಜಾತ ಶಿಶು ಆರೈಕೆ ಘಟಕ (ಎಸ್‌ಎನ್‌ಸಿಯು), ಘೋಷಾ ಆಸ್ಪತ್ರೆ ಮತ್ತು ಬೌರಿಂಗ್ ಆಸ್ಪತ್ರೆಗಳಲ್ಲಿರುವ ಶಿಶುಗಳಿಗೆ ಪೂರೈಸಲಾಗುತ್ತದೆ. ಈ ಪ್ರಕ್ರಿಯೆ ಸುಮಾರು ವರ್ಷಗಳಿಂದ ತಾಯಂದಿರು ಅವಶ್ಯಕತೆ ಇದ್ದಾಗ ಬೇರೆ ಶಿಶುಗಳಿಗೆ ಹಾಲುಣಿಸುವ ಮುಂದುವರೆದ ಭಾಗವಾಗಿದೆ.

ಹ್ಯೂಮೆನ್ ಮಿಲ್ಕ್ ಬ್ಯಾಂಕ್ ಶಿಶು ಆರೈಕೆಯ ಪ್ರಮುಖ ಭಾಗವಾಗಿ ಹೊರಹೊಮ್ಮಿದೆ. ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಸೂಕ್ತವಾದ ಪೋಷಣೆ ನೀಡುವ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚುಸುವ ಅಂಶಗಳು ಎದೆ ಹಾಲಿನಲ್ಲಿದೆ. ಯಾವುದೇ ಇತರೆ ಪ್ರಾಣಿಗಳ ಹಾಲಿಗಿಂತ ತಾಯಿ ಎದೆ ಹಾಲು ಸುಲಭವಾಗಿ ಶಿಶುವಿಗೆ ಜೀರ್ಣವಾಗುತ್ತದೆ. ಕಡಿಮೆ ತೂಕವುಳ್ಳ ಮತ್ತು ಅವಧಿಪೂರ್ವ ಜನಿಸಿದ ಮಕ್ಕಳಿಗೆ ತಾಯಿಯ ಹಾಲು ಅತ್ಯಂತ ಅವಶ್ಯಕ ಎಂದು ಘೋಷ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಅಲ್ತಾಫ್ ಕಮೀಲ್ ಖಾನ್ ಹೇಳಿದ್ದಾರೆ.

ಆರು ತಿಂಗಳು ಸಂಗ್ರಹಿಸಿಟ್ಟುಕೊಳ್ಳುವಷ್ಟು ಸಾಮರ್ಥ್ಯ ಘೋಷ ಆಸ್ಪತ್ರೆಯಲ್ಲಿದ್ದು, ಒಂದೇ ತಿಂಗಳಿನ ಒಳಗಾಗಿ ಸಂಗ್ರಹಿಸಿದ್ದ ಎದೆ ಹಾಲು ಖಾಲಿಯಾಗುತ್ತದೆ. ಎದೆ ಹಾಲು ಪೋಲಾಗುವುದು ಮತ್ತು ಹಾಳಾಗುವ ಪ್ರಶ್ನೆಯೇ ಇಲ್ಲ. ಎದೆ ಹಾಲಿಗೆ ಇನ್ನಷ್ಟು ಬೇಡಿಕೆಯಿದ್ದು, ಹೆಚ್ಚು ದಾನಿಗಳು ಮುಂದೆ ಬಂದರೆ ಅನುಕೂಲವಾಗುತ್ತದೆ ಎಂದು ಘೋಷ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ದೀಪಿಕಾ ಹೇಳಿದ್ದಾರೆ.

ತಾಯಂದಿರಿಗೆ ಕೌನ್ಸಿಲಿಂಗ್ ಹೇಗೆ?

ಘೋಷ ಆಸ್ಪತ್ರೆಯಲ್ಲಿ ಇಬ್ಬರು ಕೌನ್ಸಲರ್ಸ್ ಇದ್ದಾರೆ. ಅವರೇ ತಾಯಂದಿರಿಗೆ ಎದೆ ಹಾಲಿನ ಸಂಗ್ರಹಣೆ ಕುರಿತು ವಿವರಿಸುತ್ತಾರೆ. ದಾನಿಗಳಿಂದ ತಾಯಿಯ ಹಾಲನ್ನು ಸರಿಯಾದ ರೀತಿಯಲ್ಲಿ ಪಡೆದು ಶೇಖರಿಸಲಾಗುತ್ತದೆ. ಹಾಲನ್ನು ಪಡೆಯುವ ಮೊದಲು ತಾಯಿಯ ಅನುಮತಿಯನ್ನು ಪಡೆಯಬೇಕಾಗುತ್ತದೆ. ಅಲ್ಲದೇ, ತಾಯಿಗೆ ಅವಶ್ಯಕತೆಯಿರುವ ರಕ್ತ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಹೆಪಟೈಟಿಸ್-ಬಿ, ಸಿ, ಎಚ್‌ಐವಿ, ಎಚ್‌ಟಿಎಲ್‌ವಿ-1, 2, ಸಿಫಿಲಿಸ್ ಸೇರಿದಂತೆ ಇತರೆ ಸೋಂಕುಗಳು ದಾನ ನೀಡುವ ತಾಯಿಗೆ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ನಂತರ ಅವರಿಂದ ಎದೆ ಹಾಲನ್ನು ಸಂಗ್ರಹಿಸಲಾಗುತ್ತದೆ.


Share It

You cannot copy content of this page