ಬೆಂಗಳೂರು: ನಿರುದ್ಯೋಗ ಸಮಸ್ಯೆ ನಮ್ಮ ದೇಶದ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಹರಿಯಾಣ, ಬಿಹಾರ್, ರಾಜಸ್ಥಾನ ರಾಜ್ಯಗಳಲ್ಲಿ ಈ ಸಮಸ್ಯೆ ಅತಿ ಹೆಚ್ಚಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಅತಿ ಕಡಿಮೆ ನಿರುದ್ಯೋಗ ಸಮಸ್ಯೆ ಕಂಡು ಬರುತ್ತಿದ್ದು, ಇದರ ಪ್ರಮಾಣ ಕೇವಲ ಶೇಕಡಾ 2.5 ರಷ್ಟಿದೆ ಎಂದು ವಿಧಾನ ಪರಿಷತ್ ಸದ್ಯಸ ಎಂ ನಾಗರಾಜ್ ಯಾದವ್ ಹೇಳಿದರು.
ಗುರುವಾರ ನೃಪತುಂಗ ವಿಶ್ವವಿದ್ಯಾಲಯ, ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ ಬೃಹತ್ ಜಾಬ್ ಮೇಳ “ಪ್ರಗತಿ ಪಥ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿಲಿಕಾನ್ ಬೆಂಗಳೂರು ದೇಶದ ಅತಿ ದೊಡ್ಡ ಉದ್ಯೋಗ ನೀಡುವ ನಗರವಾಗಿ ಹೊರಹೊಮ್ಮಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಅತಿ ಕಡಿಮೆ ಪ್ರಮಾಣದ ನಿರುದ್ಯೋಗಳಿದ್ದಾರೆ, ಆದರೆ ಕೆಲವೇ ಕೆಲವು ಜನರು ಉದ್ಯೋಗಗದಿಂದ ವಂಚಿತರಾದರೂ ರಾಜ್ಯ ಹಿಂದುಳಿಯುವ ಸನ್ನಿವೇಶ ಎದುರಾಗುತ್ತದೆ. ಯಾವುದೇ ಕಾರಣಕ್ಕೂ ನಿರುದ್ಯೋಗಕ್ಕೆ ಅವಕಾಶ ನೀಡದೆ ಶಿಕ್ಷಕ ವರ್ಗ ಮತ್ತು ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ನೃಪತುಂಗ ವಿಶ್ವವಿದ್ಯಾಲಯದಲ್ಲಿ ನೆಡೆಯುತ್ತಿರುವ ಬೃಹತ್ ಉದ್ಯೋಗ ಮೇಳ ಸಾವಿರಾರು ವಿದ್ಯಾರ್ಥಿಗಳಿಗೆ ನಿರುದ್ಯೋಗಿಗಳಿಗೆ ಅವಕಾಶದ ಬಾಗಿಲನ್ನು ತೆರೆದದ್ದು, ಯಶಸ್ವೀ ಉದ್ಯೋಗಿಯಾಗಿ ನೂರಾರು ವರ್ಷ ಹಳೆಯ ಹೆಮ್ಮೆಯ ಶಿಕ್ಷಣ ಸಂಸ್ಥೆಯ ಹೆಸರನ್ನು ಇನ್ನಷ್ಟು ಪ್ರಚಲಿತಗೊಳಿಸಬೇಕು ಎಂದು ನಾಗರಾಜ್ ಯಾದವ್ ನುಡಿದರು.
ಈ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ. ರಾಮಕೃಷ್ಣ ರೆಡ್ಡಿ, ಉದ್ಯೋಗ ವಿನಿಮಯ ಕೇಂದ್ರದ ಉಪ ನಿರ್ದೇಶಕ ಸಿ.ಜಗನ್ನಾಥ್, ವಿಶ್ವವಿದ್ಯಾಲಯದ ಕುಲಪತಿ ಫಜೀಹಾ ಸುಲ್ತಾನ, ಕುಲಸಚಿವರು(ಆಡಳಿತ) ಕೆ.ಎ ಉಮಾ, ಕುಲಸಚಿವರು(ಪರೀಕ್ಷಾ ವಿಭಾಗ) ಎ.ಸಿ ಮಂಜುಳಾ, ರೋಟರಿ ಸಂಸ್ಥೆಯ ನಿರ್ದೇಶಕರುಗಳಾದ ಆರ್.ವಿ ಶ್ರೀಹರಿ ಮತ್ತು ಎನ್ ರವಿಶಂಕರ್ ಉಪಸ್ಥಿತರಿದ್ದರು.