ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಪ್ರವೇಶ ಪ್ರಕ್ರಿಯೆ ಮಾರ್ಗಸೂಚಿಗಳನ್ನೊಳಗೊಂಡ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
ಎಲ್‌ಕೆಜಿ ತರಗತಿಗೆ ಕನಿಷ್ಟ ವಯೋಮಿತಿ 4 ವರ್ಷ ಗರಿಷ್ಟ ವಯೋಮಿತಿ 6 ವರ್ಷ ನಿಗದಿಪಡಿಸಲಾಗಿದ್ದು, 1ನೇ ತರಗತಿಗೆ ಕನಿಷ್ಟ 6 ವರ್ಷ ಗರಿಷ್ಟ 8 ವರ್ಷವೆಂದು ನಿಗದಿ ಪಡಿಸಲಾಗಿದೆ. ಜೂನ್ 1ನೇ ತಾರೀಕಿಗೆ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು 1 ನೇ ತರಗತಿಗೆ ದಾಖಲಿಸಬಹುದಾಗಿದೆ. ಒಂದು ಬಾರಿಯ ಕ್ರಮವಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿರುವ ಹಾಗೂ ಜೂ. 1ರಂದು 5 ವರ್ಷ 5 ತಿಂಗಳು ಪೂರ್ಣಗೊಂಡಿರುವ ಮಕ್ಕಳನ್ನು 2025-26ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ 1ನೇ ತರಗತಿಗೆ ದಾಖಲಿಸಬಹುದು ಎಂದು ಆದೇಶಿಸಲಾಗಿದೆ. ಈ ಕ್ರಮ ಆರ್‌ಟಿಇ ಅಡಿ 1ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ಮಕ್ಕಳಿಗೂ ಜಾರಿಯಲ್ಲಿರಲಿದ್ದು, ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.
ಆರ್‌ಟಿಇ ದಾಖಲಾತಿ ಪ್ರಕ್ರಿಯೆಯ ಪರಿಷ್ಕೃತ ವೇಳಾಪಟ್ಟಿ ಹೀಗಿದೆ:
ಅನುದಾನಿತ ಶಾಲೆಗಳೂ ಸೇರಿದಂತೆ 1ನೇ ತರಗತಿಗೆ 5 ವರ್ಷ 5 ತಿಂಗಳು ಪೂರ್ಣಗೊಳಿಸಿರುವ ಮಕ್ಕಳಿಗೆ ಆರ್‌ಟಿಇ ಅಡಿ ದಾಖಲಾತಿ ಕೋರಿ ಪೋಷಕರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಮೇ 28 ರವರೆಗಿನ ಅವಧಿಯನ್ನು ನಿಗಧಿಪಡಿಸಲಾಗಿದೆ. ಇಐಡಿ ಮೂಲಕ ಸಲ್ಲಿಸಿದ ಅರ್ಜಿಗಳ ದತ್ತಾಂಶದ ನೈಜತೆ ಪರಿಶೀಲನೆಯು ಕೂಡ ಮೇ 28 ರವರೆಗೆ ನಡೆಯಲಿದೆ.
ವಿಶೇಷ ಪ್ರವರ್ಗಗಳು ಮತ್ತು ಕ್ರಮಬದ್ದವಲ್ಲದ ಅರ್ಜಿಗಳ ಪರಿಶೀಲನೆಯು ಕೂಡ ಇದೇ ಸಮಯದಲ್ಲಿ ನಡೆಯಲಿದೆ. ಲಾಟರಿ ಪ್ರಕ್ರಿಯೆಗೆ ಮೂಲಕ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಮೇ 29 ರಂದು ಪ್ರಕಟಣೆಗೊಳ್ಳಲಿದೆ. ಮೇ 30 ರಂದು ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಯಲಿದ್ದು, ಮೇ 31 ರಿಂದ ಜೂ.6ರವರೆಗೆ ಶಾಲೆಗಳ ದಾಖಲಾತಿ ಪ್ರಾರಂಭವಾಗಲಿದೆ.
ಶಾಲೆಗಳಲ್ಲಿ ದಾಖಲಾದ ಮೊದಲ ಸುತ್ತಿನ ಮಕ್ಕಳ ವಿವರಗಳನ್ನು ಮೇ 31 ರಿಂದ ಜೂ.9ರವರೆಗೆ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗಲಿದೆ. ಆನ್‌ಲೈನ್ ಲಾಟರಿ ಮೂಲಕ ಜೂ.16ರಂದು ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಜರುಗಲಿದೆ. ಜೂ.17 ರಿಂದ 21ರವರೆಗೆ ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿ ಆರಂಭವಾಗಲಿದೆ. ಶಾಲೆಗಳಲ್ಲಿ ದಾಖಲಾದ ಎರಡನೇ ಸುತ್ತಿನ ಮಕ್ಕಳ ವಿವರಗಳನ್ನು ಜೂ.17 ರಿಂದ 25ರವರೆಗೆ ತಂತ್ರಾಂಶದಲ್ಲಿ ಅಳವಡಿಸಲಾಗಲಿದೆ.