ಬೆಂಗಳೂರು: 2025-2026 ನೇ ಸಾಲಿನ ಸಿಇಟಿ ಫಲಿತಾಂಶ ಅಧಿಕೃತವಾಗಿ ಪ್ರಟಗೊಂಡಿದ್ದು, ಪರೀಕ್ಷೆ ಬರೆದ 3,11,991 ವಿದ್ಯಾರ್ಥಿಗಳ ಪೈಕಿ 2,75,677 ಮಂದಿ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಅರ್ಹರಾಗಿದ್ದಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಬೈವೇಶ್ ಜಯಂತಿ ಮೊದಲ ರ‍್ಯಾಂಕ್ ಪಡೆದಿದ್ದರೆ, ಸಾಥಿವಿಕ್ ಬಿ.ಬಿರಾದರ್ ಎರಡನೇ ರ‍್ಯಾಂಕ್ ಪಡೆದಿದ್ದಾರೆ ಇನ್ನು ಪಶು ವೈದ್ಯಕೀಯ ವಿಭಾಗದಲ್ಲಿ ಹರೀಶ್ ರಾಜ್ ಮೊದಲ ರ‍್ಯಾಂಕ್ ಮತ್ತು ಆತ್ರೇಯ ವೆಂಕಟಾಚಲಂ ಎರಡನೇ ರ‍್ಯಾಂಕ್ ಗಳಿಸಿದ್ದಾರೆ.
ಪರೀಕ್ಷೆಯಲ್ಲಿ ಫೇಸ್ ರೆಕಗ್ನಿಷನ್ ತಂತ್ರಜ್ಞಾನ ಬಳಸಿಕೊಳ್ಳಲಾಗಿತ್ತು. ಪರೀಕ್ಷೆಯ ದಿನ ವೆಬ್ ಕಾಸ್ಟಿಂಗ್ ನಡೆಸಿ ಯಾವುದೇ ಗೊಂದಲವಾಗದಂತೆ ನೋಡಿಕೊಳ್ಳಲಾಗಿತ್ತು. ಇದರಿಂದ ಫಲಿತಂಶ ಕೂಡ ಸುಸೂತ್ರವಾಗಿ ಪ್ರಕಟಗೊಂಡಿದೆ. ಇನ್ನು ಇಂದು ಹೊರಬಿದ್ದಿರುವ ಫಲಿತಾಂಶದಲ್ಲಿ ಭೌತಶಾಸ್ತ್ರ ವಿಷಯಕ್ಕೆ 1 ಗ್ರೆಸ್ ಮಾರ್ಕ್ಸ್, ರಸಾಯನಾಶಸ್ತ್ರದ 2 ಪ್ರಶ್ನೆಗಳಿಗೆ 2 ಸರಿ ಉತ್ತರ, ಜೀವಶಾಸ್ತ್ರದಲ್ಲಿ 1 ಪ್ರಶ್ನೆಗೆ 2 ಸರಿ ಉತ್ತರ ಎಂದು ಪ್ರಕಟಿಸಲಾಗಿದೆ.
ಎಂಜಿನಿಯರಿಂಗ್ ಪ್ರವೇಶಕ್ಕೆ ಪ್ರಕಟವಾಗಿರುವ ರ್ಯಾಂಕ್ ಲಿಸ್ಟ್ ನಲ್ಲಿ ಮೊದಲ ಮೂರು ಸ್ಥಾನಗಳನ್ನು ಬೆಂಗಳೂರಿನ ವಿದ್ಯಾರ್ಥಿಗಳು ಪಡೆದಿದ್ದಾರೆ. ಅದರಲ್ಲೂ ಬಾಲಕರೇ ಮೊದಲ 10 ಸ್ಥಾನಗಳನ್ನು ಪಡೆದಿರುವುದು ವಿಶೇಷವಾಗಿದೆ. ಪಶುವೈದ್ಯಕೀಯ ವಿಭಾಗದಲ್ಲಿ ಕೂಡ ಮೊದಲ 10 ರ್ಯಾಂಕ್ ಗಳನ್ನು ಬಾಲಕರು ಪಡೆದಿದ್ದಾರೆ. ಮೊದಲ ಎರಡು ಸ್ಥಾನ ಬೆಂಗಳೂರಿನ ಪಾಲಾಗಿದ್ದರೆ. ಮೂರನೇಯ ಸ್ಥಾನ ಮಂಗಳೂರಿನ ಪಾಲಾಗಿದೆ. ಇನ್ನು ಕೃಷಿ ವಿಶ್ವವಿದ್ಯಾಲಗಳಲ್ಲಿನ ಬಿಟೆಕ್ ಪ್ರವೇಶಕ್ಕೆ ಪ್ರಕಟವಾಗಿರುವ ಫಲಿತಾಂಶದಲ್ಲಿ ಕೂಡ ಬಾಲಕರೇ ಮೇಲುಗೈ ಸಾಧಿಸಿದ್ದು, ಮೊದಲ ಮೂರು ಸ್ಥಾನಗಳು ಕರಾವಳಿ ಕರ್ನಾಟಕದ ಪಾಲಾಗಿದೆ.
ಫಲಿತಾಂಶದ ಕುರಿತು ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನೆಡೆಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ ಸುಧಾಕರ್, ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸುವ 2025 ನೇ ಸಾಲಿನ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಪರಿಷ್ಕೃತ ಸರಿ ಉತ್ತರಗಳನ್ನು ಆಧರಿಸಿ ಮೆರಿಟ್ ಪಟ್ಟಿಯನ್ನು ತಯಾರಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿರುವ ದ್ವಿತೀಯ ಪಿಯುಸಿ, ಮೊದಲ ಎರಡು ಪರೀಕ್ಷೆಗಳ ಪೈಕಿ ಅತಿ ಹೆಚ್ಚು ಅಂಕಗಳನ್ನು ಗಣನೆಗೆ ತಗೆದುಕೊಂಡು ಫಲಿತಾಂಶವನ್ನು ನೀಡಲಾಗಿದೆ. ರಾಜ್ಯದಲ್ಲಿ ವ್ಯಾಸಂಗ ಮಾಡಿದ್ದ ಸಿ.ಬಿ.ಎಸ್.ಸಿ, ಐ.ಸಿ.ಎಸ್.ಸಿ ಬೋರ್ಡ್ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಅಂಕಗಳನ್ನು ಕೂಡ ಈ ಬಾರಿ ಆನ್ಲೈನ್ ಮೂಲಕ ನೇರವಾಗಿ ಪಡೆದು ರ್ಯಾಂಕ್ ನೀಡಲಾಗಿದೆ. ವಿದ್ಯಾರ್ಥಿಗಳ ಎಲ್ಲ ಓ.ಎಂ.ಆರ್ ಶೀಟ್ ಗಳನ್ನು ಕೆ.ಇ.ಎ ವೆಬ್ ಸೈಟ್ ಗೆ ಅಪ್ಲೋಡ್ ಮಾಡಲಾಗಿದೆ ಎಂದರು.
ಆಪ್ಟನ್ ಎಂಟ್ರಿಗೆ ದತ್ತಾಂಶ ಸಿದ್ದವಾಗಿದ್ದು, ಈ ಸಂಬಂಧ ಕಾಲ್ ಸೆಂಟರ್ ಗಳನ್ನು ಸಹ ಉನ್ನತೀಕರಣ ಮಾಡಲಾಗಿದೆ. 10 ಫೋನ್ ಲೈನ್ ಮೂಲಕ ಸಿಬ್ಬಂದಿಗಳು ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಕರೆಗಳನ್ನು ಸ್ವೀಕರಿಸಿ ಪರಿಹಾರ ನೀಡಲಿದ್ದಾರೆ. ವಾರದ ಎಲ್ಲ ದಿನ ಈ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ ಎಂದು ಡಾ ಎಂ.ಸಿ ಸುಧಾಕರ್ ಮಾಹಿತಿ ನೀಡಿದರು.