Law

ಪೊಲೀಸ್ ತನಿಖೆಗೆ ಮ್ಯಾಜಿಸ್ಟ್ರೇಟ್ ‘ಆದೇಶ’ ಕಡ್ಡಾಯ: ಹೈಕೋರ್ಟ್

Share It

ನಾನ್ ಕಾಗ್ನಿಸಬಲ್ ಅಪರಾಧ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ ಆದೇಶವಿಲ್ಲದೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಮಾಡುವಂತಿಲ್ಲ ಹಾಗೂ ಮ್ಯಾಜಿಸ್ಟ್ರೇಟ್ ‘ಅನುಮತಿ’ಯು ತನಿಖೆಗೆ ‘ಆದೇಶ’ ಎನ್ನಿಸಿಕೊಳ್ಳುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಇದೇ ವೇಳೆ, ನಾನ್ ಕಾಗ್ನಿಸಬಲ್ ಅಪರಾಧ ಪ್ರಕರಣಗಳಲ್ಲಿ ತನಿಖೆ ಮುಂದುವರೆಸಲು ನ್ಯಾಯಾಲಯದ ಸಮ್ಮತಿ ಕೋರಿ ಪೊಲೀಸರು ಮನವಿ ಸಲ್ಲಿಸಿದಾಗ ಮ್ಯಾಜಿಸ್ಟ್ರೇಟ್ ಕೋರ್ಟ್ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ರೂಪಿಸಿದೆ.

ಪೊಲೀಸರು ದಾಖಲಿಸಿರುವ ಎಫ್ಐಆರ್ ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ರದ್ದುಗೊಳಿಸುವಂತೆ ಕೋರಿ ಬೆಂಗಳೂರಿನ ಹರಿರಾಜ್ ಶೆಟ್ಟಿ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ತೀರ್ಪು ನೀಡಿದೆ.

ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ ತನಿಖೆಗೆ ‘ಆದೇಶ’ ಪಡೆದಿಲ್ಲ. ಬದಲಿಗೆ ‘ಅನುಮತಿ’ ಪಡೆದಿದ್ದಾರೆ. ಮ್ಯಾಜಿಸ್ಟ್ರೇಟ್ ‘ತನಿಖೆಗೆ ಅನುಮತಿಸಲಾಗಿದೆ’ ಎಂದಿದ್ದಾರೆ. ‘ತನಿಖೆಗೆ ಅನುಮತಿಸಲಾಗಿದೆ’ ಎಂಬುದು ಸಿಆರ್ಪಿಸಿ ಸೆಕ್ಷನ್ 155(1) ಹಾಗೂ 155(2) ರ ಅವಶ್ಯಕತೆಗಳನ್ನು ಪೂರೈಸಿದಂತಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿದಾರರ ವಿರುದ್ಧ ದಾಖಲಿಸಿದ್ದ ಎಫ್ಐಆರ್ ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್ ನ ಪ್ರಕ್ರಿಯೆಯನ್ನು ರದ್ದುಪಡಿಸಿದೆ.

ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಸರಿಸಬೇಕಾದ ಮಾರ್ಗಸೂಚಿ:

ನಾನ್ ಕಾಗ್ನಿಸಬಲ್ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ತನಿಖೆ ಮುಂದುವರೆಸಲು ಕೋರಿ ಮನವಿ ಸಲ್ಲಿಸಿದಾಗ ಮ್ಯಾಜಿಸ್ಟ್ರೇಟ್ ಇನ್ನು ಮುಂದೆ ‘ತನಿಖೆಗೆ ಅನುಮತಿಸಲಾಗಿದೆ’ ಎನ್ನುವಂತಿಲ್ಲ. ಇಂತಹ ಅನುಮೋದನೆಯು ಸಿಆರ್ಪಿಸಿ ಸೆಕ್ಷನ್ 155 ರಡಿ ಹಾಗೂ ಕಾನೂನು ದೃಷ್ಟಿಯಲ್ಲಿ ತನಿಖೆಗೆ ‘ಆದೇಶ’ವಲ್ಲ.

ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಮುಂದೆ ಇಂತಹ ಮನವಿ ಬಂದಾಗ ಅದು ಅಂಚೆ ಮೂಲಕ ಅಥವಾ ಮುದ್ದಾಂ ಮೂಲಕ ಬಂದಿದೆಯೇ ಎಂಬುದನ್ನು ಪರಿಗಣಿಸಿ, ಪ್ರತ್ಯೇಕ ಆರ್ಡರ್ ಶೀಟ್ ಜತೆಗೆ ತಮ್ಮ ಮುಂದೆ ಇರಿಸುವಂತೆ ಕಚೇರಿಗೆ ನಿರ್ದೇಶಿಸಬೇಕು. ವಿನಂತಿಯ ಮೇರೆಗೆ ಯಾವುದೇ ‘ಆದೇಶ’ ನೀಡಬಾರದು. ಪ್ರಕರಣದ ಮುಂದಿನ ವಿಚಾರಣೆಯಲ್ಲೂ ಈ ಆದೇಶದ ಪ್ರತಿ ಮುಂದುವರೆಸಬೇಕು.

ಮನವಿ ಸಲ್ಲಿಸಿದಾಗ ಪೊಲೀಸ್ ಠಾಣೆಯ ಎಸ್ಎಚ್ಒ ಮನವಿಯಲ್ಲಿ ಮಾಹಿತಿದಾರರನ್ನು ಉಲ್ಲೇಖಿಸಿದ್ದಾರೆಯೇ ಎಂಬುದನ್ನು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಪರೀಕ್ಷಿಸಬೇಕು.

ನಂತರವೇ ಮ್ಯಾಜಿಸ್ಟ್ರೇಟ್ ತಮ್ಮ ನ್ಯಾಯಾಂಗ ವಿವೇಚನೆ ಬಳಸಿ ಮನವಿಯಲ್ಲಿನ ಅಂಶಗಳನ್ನು ಪರೀಕ್ಷಿಸಿ, ಪ್ರಕರಣವು ಪೊಲೀಸ್ ತನಿಖೆಗೆ ಯೋಗ್ಯವೇ ಇಲ್ಲವೇ ಎಂಬುದನ್ನು ನಿರ್ಣಯಿಸಬೇಕು ಹಾಗೂ ಈ ಕುರಿತು ದಾಖಲಿಸಬೇಕು. ತನಿಖೆಗೆ ಯೋಗ್ಯವೆನ್ನಿಸದಿದ್ದರೆ ಮನವಿ ತಿರಸ್ಕರಿಸಬೇಕು. ಪೊಲೀಸ್ ತನಿಖೆಗೆ ಯೋಗ್ಯವಿದೆ ಹಾಗೂ ಅದಕ್ಕೆ ಸಾಕಷ್ಟು ಆಧಾರವಿದೆ ಎನ್ನಿಸಿದರೆ ಮಾತ್ರವೇ ನಾನ್ ಕಾಗ್ನಿಸಬಲ್ ಅಪರಾಧ ಪ್ರಕರಣದ ತನಿಖೆಗೆ ‘ಆದೇಶ’ ನೀಡಬೇಕು.

(WP 14076/2021)


Share It

You cannot copy content of this page