ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ಹಿನ್ನೆಲೆ ಕಾಲ್ತುಳಿತಕ್ಕೆ ಸಿಲುಕಿ 11 ಮಂದಿ ಮೃತಪಟ್ಟಿರುವ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಾಗಿವೆ.
ಮೃತರ ಪೋಷಕರು ನೀಡಿದ ದೂರನ್ನು ಆಧರಿಸಿ ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ. ಈ ದುರಂತದ ಬಗ್ಗೆ ರಾಜ್ಯ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದು, ಮ್ಯಾಜಿಸ್ಟ್ರೇಟ್ ತನಿಖಾ ವರದಿ ಬಂದ ಬಳಿಕ ಪೊಲೀಸರು ಆ ವರದಿಯಲ್ಲಿ ಅವಘಡಕ್ಕೆ ಕಾರಣಗಳನ್ನು ಗುರುತಿಸಿ, ತಪ್ಪಿತಸ್ಥರ ವಿರುದ್ಧ ಎಫ್.ಐ.ಆರ್ ದಾಖಲಿಸಿ ತನಿಖೆ ಕೈಗೊಳ್ಳಲಿದ್ದಾರೆ.
ಎಲ್ಲ 11 ಮಂದಿಯೂ ಉಸಿರುಗಟ್ಟಿ ಸಾವು:
ಕಾಲ್ತುಳಿತದ ದುರಂತಕ್ಕೊಳಗಾದ 11 ಮಂದಿಯೂ ಉಸಿರುಗಟ್ಟಿ ಸಾವನ್ನಪ್ಪಿರುವುದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಗೊತ್ತಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 5 ಮೃತರು, ಬೌರಿಂಗ್ ಆಸ್ಪತ್ರೆಯಲ್ಲಿ 6 ಸೇರಿ ಒಟ್ಟು 11 ಮೃತರ ಮರಣೋತ್ತರ ಪರೀಕ್ಷೆಯಲ್ಲಿ ನೂಕು ನುಗ್ಗಲಿಂದ ಉಸಿರುಗಟ್ಟಿ ಮೃತಪಟ್ಟಿರುವುದು ಪತ್ತೆಯಾಗಿದೆ. ಮತ್ತಷ್ಟು ಮಂದಿಗೆ ದೇಹದ ಕೆಲ ಮೂಳೆಗಳ ಮುರಿತ ಉಂಟಾಗಿದೆ. ಈ ಎಲ್ಲ ಮರಣೋತ್ತರ ಪರೀಕ್ಷೆಗಳ ಬಳಿಕ ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಕುಟುಂಬಸ್ಥರು ಮೃತದೇಹಗಳನ್ನು ತಮ್ಮ ಊರುಗಳಿಗೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.