ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣದಲ್ಲಿ ನಗರ ಪೊಲೀಸ್ ಆಯಕ್ತರಾಗಿದ್ದ ಬಿ.ದಯಾನಂದ್ ಅಮಾನತುಗೊಂಡ ಬೆನ್ನಲ್ಲೇ ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಹಿನ್ನಲೆಯಲ್ಲಿ ಶುಕ್ರವಾರ ಸೀಮಂತ್ ಕುಮಾರ್ ಸಿಂಗ್ ನಗರದ 39ನೇ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬಿಹಾರದ ರಾಂಚಿ ಮೂಲದ ಸೀಮಂತ್ ಕುಮಾರ್ ಸಿಂಗ್ 1970ರಲ್ಲಿ ಜನಿಸಿದ್ದು, 1996ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಈ ಹಿಂದೆ ರಾಜ್ಯದ ವಿವಿಧ ಜಿಲ್ಲೆೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಕೆಎಸ್‌ಆರ್‌ಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಸೀಮಂತ್ ಕುಮಾರ್ ಸಿಂಗ್‌ರನ್ನು ಕೆಲ ತಿಂಗಳ ಹಿಂದಷ್ಟೇ ಬಿಎಂಟಿಎಫ್ ಎಡಿಜಿಪಿಯನ್ನಾಗಿ ನೇಮಿಸಲಾಗಿತ್ತು.
ಪೊಲೀಸ್ ಆಯುಕ್ತರ ಅಮಾನತು ಸರಿಯಲ್ಲ:
ನಗರ ಪೊಲೀಸ್ ಆಯುಕ್ತರ ಹುದ್ದೆ ತುಂಬಾ ಪ್ರಭಾವಿ. ಇದರಿಂದಲೇ ಒಂದು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ನಗರವನ್ನು ನಿರ್ವಹಿಸಬೇಕಿದೆ. ಈ ಹಿನ್ನಲೆಯಲ್ಲಿ ನಗರ ಪೊಲೀಸ್ ಆಯುಕ್ತರನ್ನು ಅಮಾನತುಗೊಳಿಸಿರುವುದು ಸರಿಯಲ್ಲ. ಸರ್ಕಾರದ ನಿರ್ಲಕ್ಷ್ಯಕ್ಕೆ ಪೊಲೀಸರ ತಲೆದಂಡ ತಪ್ಪು. ಹೀಗಾಗಿ ಕೂಡಲೇ ಬಿ.ದಯಾನಂದ್ ಅವರ ಅಮಾನತು ಆದೇಶ ಹಿಂಪಡೆಯಬೇಕು ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್ ಎಕ್ಸ ಮೂಲಕ ಒತ್ತಾಯಿಸಿದ್ದಾರೆ.