ಬೆಂಗಳೂರು: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ- 2025ರ ಅವಧಿಯು ಜೂ.22 ರವರೆಗೆ ಕಾಲಾವಕಾಶವನ್ನು ವಿಸ್ತರಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು ಎಂಪಿರಿಕಲ್ ಡಾಟಾ (ವೈಜ್ಞಾನಿಕ ದ್ತತಾಂಶ) ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ (ಉಪ ವರ್ಗೀಕರಣ) ಕುರಿತಾಗಿ ವರದಿ ಸಲ್ಲಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಎಚ್.ಎನ್.ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಲಾಗಿತ್ತು.
ಆಯೋಗವು, ಮಾರ್ಚ್‌ನಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ ಮೇರೆಗೆ ವೈಜ್ಞಾನಿಕವಾದ ದತ್ತಾಂಶವನ್ನು ಸಂಗ್ರಹಿಸಲು ಪರಿಶಿಷ್ಟ ಜಾತಿ ಕುಟುಂಬಗಳ ಸಮಗ್ರ ಸಮೀಕ್ಷೆಯನ್ನು ಏ. 5 ರಿಂದ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಕರ್ನಾಟಕ ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯನ್ನು ಜೂ.8 ರವರೆಗೆ ವಿಶೇಷ ಶಿಬಿರಗಳು ಹಾಗೂ ಆನ್‌ಲೈನ್‌ನಲ್ಲಿ ಸ್ವಯಂ ಘೋಷಣೆಗಳನ್ನು ಒಳಗೊಂಡಂತೆ ಒಟ್ಟು 2 ವಿಧಾನಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗುತ್ತಿದೆ.
ಜೂ. 6 ರವರೆಗೆ ರಾಜ್ಯಾದ್ಯಂತ ನಡೆಸಲಾದ ಸಮೀಕ್ಷೆಯಲ್ಲಿ ಶೇ.90 ರಷ್ಟು ಪ್ರಗತಿಯನ್ನು ಸಾಧಿಸಲಾಗಿದ್ದು, ಉಳಿದಂತೆ ಸುಮಾರು ಶೇ.10ರಷ್ಟು ಪ್ರಗತಿಯನ್ನು ಸಾಧಿಸಬೇಕಾಗಿದೆ. ಕೆಲವು ಪರಿಶಿಷ್ಟ ಜಾತಿಗೆ ಸೇರಿದ ಸಂಘ ಸಂಸ್ಥೆಗಳು ಸಮೀಕ್ಷೆಯ ಅವಧಿಯನ್ನು ಪುನಃ ವಿಸ್ತರಿಸಬೇಕೆಂದು ಮನವಿಯನ್ನು ಸಲ್ಲಿಸಿದೆ. ಆದರೆ, ರಾಜ್ಯದಲ್ಲಿ ಶಾಲೆಗಳು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಸಮೀಕ್ಷೆಗೆ ಗಣತಿದಾರರನ್ನಾಗಿ ನೇಮಕ ಮಾಡಲಾಗಿದ್ದ ಶಿಕ್ಷಕರನ್ನು ಸಮೀಕ್ಷೆ ಕಾರ್ಯದಿಂದ ಬಿಡುಗಡೆಗೊಳಿಸಲಾಗಿದೆ. ಆದ್ದರಿಂದ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಈವರೆಗೂ ಭಾಗವಹಿಸದಿರುವ ಕರ್ನಾಟಕ ರಾಜ್ಯಕ್ಕೆ ಸೇರಿದ ಪರಿಶಿಷ್ಟ ಜಾತಿ ಕುಟುಂಬದವರು ಜೂನ್ ತಿಂಗಳಿಂದ ರಾಜ್ಯದಲ್ಲಿನ 9,400 ನಾಗರೀಕ ಸೇವಾ ಕೇಂದ್ರಗಳಾದ, ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ 198 ಜೆಬಿಎ ವಾರ್ಡ್ ಕಚೇರಿಗಳಿಗೆ ಭೇಟಿ ನೀಡಿ, 2025ನೇ ಜೂ.22 ರವರೆಗೂ ತಮ್ಮ ಮಾಹಿತಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಅಲ್ಲದೇ, ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಈ ಅವಕಾಶವನ್ನು ನೀಡಲಾಗಿದೆ. ಈ ಮಾಹಿತಿಯನ್ನು ನಮೂದಿಸಲು ಸಾರ್ವಜನಿಕರಿಗೆ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ ಸಂಖ್ಯೆಯ ಅವಶ್ಯಕತೆಯಿದೆ.