ಪಾದಚಾರಿ ಮೇಲ್ಸೇತುವೆ ಇಲ್ಲದೆ ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ ಮೃತಪಟ್ಟರೆ ಅಥವಾ ಗಾಯಗೊಂಡರೆ ಸಂತ್ರಸ್ತರು ಪರಿಹಾರಕ್ಕೆ ಅರ್ಹರು ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮೇಲ್ಸೇತುವೆ ಇಲ್ಲದ ರೈಲ್ವೆ ನಿಲ್ದಾಣದಲ್ಲಿ ಹಳಿ ದಾಟಿ ಹೊರಬರುವ ವೇಳೆ ಪ್ರಯಾಣಿಕರು ರೈಲಿಗೆ ಸಿಲುಕಿದರೆ ಅವರು ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗದು. ಹೀಗಾಗಿ ಪರಿಹಾರಕ್ಕೆ ಅರ್ಹರು ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣದ ಹಿನ್ನೆಲೆ: ಉದ್ಯೋಗ ಹರಸಿ ಮನೋಹರ್ ಎಂಬುವರು ಮಹಾರಾಷ್ಟ್ರದ ಗೊಂಡಿಯಾದಿಂದ ರೆವ್ರಾಲ್ ಗೆ ಪ್ಯಾಸೆಂಟರ್ ರೈಲಿನ ಮೂಲಕ ಪ್ರಯಾಣಿಸಿದ್ದರು. ಮೇಲ್ಸೇತುವೆ ಇಲ್ಲದ ಹಿನ್ನೆಲೆಯಲ್ಲಿ ಹಳಿ ದಾಟಿ ನಿಲ್ದಾಣದಿಂದ ಹೊರಬರುವ ವೇಳೆ ರೈಲು ಢಿಕ್ಕಿಯಾಗಿ ಮೃತಪಟ್ಟಿದ್ದರು. ಇದೇ ವೇಳೆ ಕೆಲ ಪ್ರಯಾಣಿಕರು ಕೂಡ ಗಾಯಗೊಂಡಿದ್ದರು.
ಈ ಪ್ರಕರಣದಲ್ಲಿ ಪರಿಹಾರ ಕೋರಿ ಮನೋಹರ್ ಪತ್ನಿ ಮತ್ತು ಮಕ್ಕಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ರೈಲ್ವೆ ಪರಿಹಾರ ನ್ಯಾಯಮಂಡಳಿ ಪರಿಹಾರ ನಿರಾಕರಿಸಿತ್ತು. ಪ್ರಯಾಣಿಕರು ಟಿಕೆಟ್ ಪಡೆದು ಪ್ರಯಾಣಿಸಿದ್ದರೂ, ಹಳಿ ಮೇಲೆ ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ. ಹೀಗಾಗಿ ಪರಿಹಾರ ನೀಡಲಾಗದು ಎಂದಿತ್ತು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ತೀರ್ಪು: ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಭಯ್ ಅಹುಜ ಅವರಿದ್ದ ಏಕಸದಸ್ಯ ಪೀಠ, ಪ್ರಯಾಣಿಕರು ಮೇಲ್ಸೇತುವೆ ಇಲ್ಲದ ಕಾರಣ ವಿಧಿಯಿಲ್ಲದೆ ಹಳಿ ದಾಟಿ ನಿಲ್ದಾಣದಿಂದ ಹೊರಬರುವ ವೇಳೆ ಅಪಘಾತಕ್ಕೆ ತುತ್ತಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ತೋರಿದ್ದರು ಎನ್ನಲಾಗದು.
ಇನ್ನು ಮೃತ ವ್ಯಕ್ತಿ ಮನೋಹರ್ ಅಧಿಕೃತವಾಗಿ ಟಿಕೆಟ್ ಪಡೆದು ಉದ್ಯೋಗ ಹರಸಿ ಹಳ್ಳಿಯಿಂದ ಪ್ರಯಾಣ ಮಾಡಿದ್ದಾರೆ. ಮೆಲ್ಸೇತುವೆ ಇಲ್ಲದ ಕಾರಣ ಹಳಿ ದಾಟಿ ಹೊರಬರುವ ವೇಳೆ ಅಪಘಾತಕ್ಕೆ ಸಿಲುಕಿದ್ದಾರೆ. ಹೀಗಾಗಿ ಮೃತ ವ್ಯಕ್ತಿ ಅಸಡ್ಡೆಯಿಂದ ಹಳಿ ದಾಟುತ್ತಿದ್ದರು ಎಂಬ ವಾದವನ್ನು ಒಪ್ಪಲಾಗದು ಎಂದು ಅಭಿಪ್ರಾಯಪಟ್ಟು ರೈಲ್ವೆ ಪರಿಹಾರ ಮಂಡಳಿಯ ಆದೇಶವನ್ನು ರದ್ದುಪಡಿಸಿದೆ.