ಬೆಂಗಳೂರು: ವಸತಿ ಇಲಾಖೆಯ ವಿವಿಧ ಮನೆ ಹಂಚಿಕೆ ಯೋಜನೆಗಳಲ್ಲಿ ಶೇ 15ರಷ್ಟು ಮುಸಲ್ಮಾನರಿಗೆ ಹಂಚಿಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿರ್ಧಾರದಿಂದ ಸಾಮಾನ್ಯ, ಎಸ್‍ಸಿ, ಎಸ್‍ಟಿ, ಒಬಿಸಿ ಮೀಸಲಾತಿಗೆ ಧಕ್ಕೆ ಆಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ಷೇಪಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ವಸತಿ ಯೋಜನೆಗಳಡಿ ಮುಸ್ಲಿಮರಿಗೆ ಶೇ 15 ಮೀಸಲಾತಿ ನೀಡಿದೆ. ಯಾವುದೇ ಮಾದರಿಯ ಧರ್ಮಾಧಾರಿತ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದು ಸಂವಿಧಾನವಿರೋಧಿ ಎಂದೂ ತಿಳಿಸಿದೆ. ಇದೊಂದು ಅಸಾಂವಿಧಾನಿಕ, ಸಂವಿಧಾನವಿರೋಧಿ ತೀರ್ಮಾನ ಎಂದು ಟೀಕಿಸಿದರು.
ಸಿದ್ದರಾಮಯ್ಯ ಮತ್ತು ಕಂಪನಿಯು ಗುತ್ತಿಗೆಯಲ್ಲಿ ಶೇ 4 ಮೀಸಲಾತಿ ನೀಡಲು ನಿರ್ಧರಿಸಿತ್ತು. ಇದು ದೇಶದಲ್ಲಿ ಎಲ್ಲೂ ಇಲ್ಲದ ದುಸ್ಸಾಹಸವಾಗಿತ್ತು. ಈಗ ವಸತಿ ಯೋಜನೆಗಳಡಿ ಶೇ 15ರಷ್ಟು ಮೀಸಲಾತಿ ನೀಡಲು ನಿರ್ಧಾರ ಮಾಡಿದೆ. ವಸತಿ ಯೋಜನೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಹಣ ಬರುತ್ತದೆ ಎಂದು ವಿವರಿಸಿದರು.
ಸರ್ಕಾರವು ತುಷ್ಟೀಕರಣದ ರಾಜಕಾರಣದಲ್ಲಿ ಇತರ ಸಮುದಾಯಗಳಿಗೆ ಅನ್ಯಾಯ ಮಾಡಿ, ಸಂವಿಧಾನವಿರೋಧಿ, ಧರ್ಮಾಧಾರಿತ ಮೀಸಲಾತಿಯನ್ನು ಕೊಡುತ್ತಿದ್ದಾರೆ. ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಅಗತ್ಯ ವಿಷಯಗಳನ್ನು ಪರಿಶೀಲಿಸಿ ಕಾನೂನಿನ ಹೋರಾಟದ ಸಂಬಂಧ ಚಿಂತನೆ ಮಾಡುತ್ತೇವೆ ಎಂದು ಪ್ರಲ್ಹಾದ್ ಜೋಶಿ ಪ್ರಕಟಿಸಿದರು.