ಬೆಂಗಳೂರು: ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಹೋರಾಟವನ್ನು ದ್ವಿಗುಣಗೊಳಿಸಬೇಕೆಂಬ ವಿಷಯದಲ್ಲಿ ಕೇಂದ್ರ ಗೃಹ ಸಚಿವ ಮತ್ತು ಪಕ್ಷದ ರಾಷ್ಟ್ರೀಯ ಮುಖಂಡ ಅಮಿತ್ ಶಾ ಅವರು ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು.
ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದು ನಾನು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್.ಅಶೋಕ್, ಅರವಿಂದ ಬೆಲ್ಲದ್ ಜೊತೆಗೂಡಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇವೆ. ರಾಜ್ಯ ರಾಜಕಾರಣ, ಪ್ರಸ್ತುತ ಬೆಳವಣಿಗೆಗಳ ಕುರಿತು ಚರ್ಚಿಸಿದ್ದೇವೆ ಎಂದು ವಿವರಿಸಿದರು.
ಅಲ್ಪಸಂಖ್ಯಾತರ ಓಲೈಕೆ ನಿಟ್ಟಿನಲ್ಲಿ ರಾಜ್ಯ ಸರಕಾರ ತೀರ್ಮಾನ ತೆಗೆದುಕೊಳ್ಳುತ್ತಿದೆ. ನಿನ್ನೆ ವಸತಿ ಇಲಾಖೆಯಡಿ ಅಲ್ಪಸಂಖ್ಯಾತರಿಗೆ ಶೇ 10 ಇದ್ದ ಮೀಸಲಾತಿಯನ್ನು ಶೇ 15ಕ್ಕೆ ಏರಿಸಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಔರ್ ಸಬ್ ಕಾ ಪ್ರಯಾಸ್’ ಆಧಾರದ ಮೇಲೆ ದೇಶದ ಹಿಂದೂಗಳು, ಅಲ್ಪಸಂಖ್ಯಾತರು ಸೇರಿ ಎಲ್ಲರಿಗೂ ನ್ಯಾಯ ಕೊಡುತ್ತಿದ್ದಾರೆ. ಮೋದಿಜೀ ಅವರು ಕೊಟ್ಟ ಕಿಸಾನ್ ಸಮ್ಮಾನ್ ಯೋಜನೆಯು ರೈತರಿಗೆ 6 ಸಾವಿರ ಜಮಾ ಆಗುತ್ತಿದ್ದು, ಇದು ಕೇವಲ ಹಿಂದೂಗಳಿಗೆ ಮಾತ್ರ ಅಲ್ಲ. ರೈತಾಪಿ ವರ್ಗದ ಎಲ್ಲ ಸಮುದಾಯ, ಧರ್ಮದವರಿಗೆ ಅದು ಜಮಾ ಆಗುತ್ತಿದೆ ಎಂದು ಹೇಳಿದರು.
ಮೋದಿ ಅವರ ಬೇಟಿ ಬಚಾವೊ, ಬೇಟಿ ಪಡಾವೊ ಕಾರ್ಯಕ್ರಮವು ಕೇವಲ ಹಿಂದೂ ಹೆಣ್ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಖಂಡಿತವಾಗಿ ಭಗವಂತ ಒಳ್ಳೆಯದು ಮಾಡಲು ಸಾಧ್ಯವಿಲ್ಲ, ಬಿಜೆಪಿ ಹೋರಾಟ ಒಂದು ಕಡೆ ಇದ್ದರೆ, ಮುಖ್ಯಮಂತ್ರಿಗಳ ನಡವಳಿಕೆ ಅವರ ಸ್ಥಾನಕ್ಕೆ ಅಪಮಾನ ಮಾಡುವಂತಿದೆ ಎಂದು ಬಿ.ವೈ. ವಿಜಯೇಂದ್ರ ಆಕ್ಷೇಪಿಸಿದರು.