Law

ಪೊಲೀಸ್ ಠಾಣೆಯಲ್ಲಿ ವಿಡಿಯೋ ರೆಕಾರ್ಡಿಂಗ್ ತಪ್ಪಲ್ಲ: ಹೈಕೋರ್ಟ್

Share It

ಅಧಿಕೃತ ರಹಸ್ಯಗಳ ಕಾಯ್ದೆ (Official Secrets Act) ಅಡಿ ಪೊಲೀಸ್ ಠಾಣೆಯು ನಿಷೇಧಿತ ಪ್ರದೇಶವಲ್ಲ. ಹೀಗಾಗಿ ಪೊಲೀಸ್ ಠಾಣೆಯೊಳಗೆ ವಿಡಿಯೊ ಚಿತ್ರೀಕರಣ ಮಾಡುವುದು ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠವು ಅಭಿಪ್ರಾಯಪಟ್ಟಿದೆ.

ಠಾಣೆಯೊಳಗೆ ವೀಡಿಯೊ ರೆಕಾರ್ಡಿಂಗ್ ಮಾಡಿದ್ದಕ್ಕಾಗಿ ಪೊಲೀಸರು ಅಧಿಕೃತ ರಹಸ್ಯಗಳ ಕಾಯ್ದೆ ಅಡಿ ದಾಖಲಿಸಿರುವ ಎಫ್ಐಆರ್ ನ್ನು ರದ್ದುಪಡಿಸುವಂತೆ ಕೋರಿ ರವೀಂದ್ರ ಉಪಾಧ್ಯಾಯ ಎಂಬುವರು ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಮನೀಶ್ ಪಿತಳೆ ಹಾಗೂ ನ್ಯಾ. ವಾಲ್ಮಿಕಿ ಮೆನೆಜಿಸ್ ಅವರಿದ್ದ ಪೀಠ, ಅಧಿಕೃತ ರಹಸ್ಯಗಳ ಕಾಯ್ದೆ ವ್ಯಾಖ್ಯಾನದ ಪ್ರಕಾರ ಪೊಲೀಸ್ ಠಾಣೆ ನಿಷೇಧಿತ ಸ್ಥಳವಲ್ಲ. ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 2(8) ರಲ್ಲಿ ವ್ಯಾಖ್ಯಾನಿಸಿರುವ ನಿಷೇಧಿತ ಸ್ಥಳ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆಯು ಬರುವುದಿಲ್ಲ.

ಹೀಗಾಗಿ ಅರ್ಜಿದಾರರ ವಿರುದ್ಧ ಈ ಕಾಯ್ದೆ ಅಡಿ ದಾಖಲಿಸಿರುವ ಎಫ್ಐಆರ್ ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಅನ್ನು ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2018ರ ಮಾರ್ಚ್‌ನಲ್ಲಿ ರವೀಂದ್ರ ಉಪಾಧ್ಯಾಯ ಎಂಬುವವರು ನೆರೆ ಮನೆಯ ವ್ಯಕ್ತಿಯೊಂದಿಗಿನ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಪತ್ನಿಯೊಂದಿಗೆ ವಾದ್ರಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಈ ವೇಳೆ ನೆರೆ ಮನೆ ವ್ಯಕ್ತಿ ಕೂಡ ಪ್ರತಿ ದೂರು ದಾಖಲಿಸಿದ್ದರು.

ಈ ವೇಳೆ ಠಾಣೆಯಲ್ಲಿ ನಡೆಯುವ ಮಾತುಕತೆಯನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದರು. ಮೊಬೈಲ್ ನಲ್ಲಿ ಚಿತ್ರೀಕರಿಸುವುದು ತಿಳಿದ ಪೊಲೀಸರು ರವೀಂದ್ರ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಿದ್ದರು.

ನಂತರ ಎಫ್ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ರವೀಂದ್ರ ಉಪಾಧ್ಯಾಯ ಹೈಕೋರ್ಟ್ ಮೆಟ್ಟಿಲೇರಿದ್ದರು.


Share It

You cannot copy content of this page