News

ಅದ್ದೂರಿಯಾಗಿ ಸಾಗಿದ ಬೆಂಗಳೂರಿನ ಐತಿಹಾಸಿಕ ಬಂಡಿದೇವರ ಉತ್ಸವ

Share It

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಜಯಂತಿಯ ಪ್ರಯುಕ್ತ ಐತಿಹಾಸಿಕ ʼಬೆಂಗಳೂರು ಬಂಡಿದೇವರ ಉತ್ಸವʼ ಎರಡನೇ ದಿನದಂದು ನಗರದ ಹೃದಯಭಾಗದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. 

ಕಾರ್ಯಕ್ರಮದಲ್ಲಿ ವಿಶೇಷವಾಗಿ ರೈತಾಪಿ ವರ್ಗದವರನ್ನು ಪ್ರತಿನಿಧಿಸುವ ಬೆಂಗಳೂರಿನ ಸುತ್ತಮುತ್ತಲಿನಿಂದ ಸುಮಾರು 20ಕ್ಕೂ ಹೆಚ್ಚು ಅಲಂಕೃತವಾದ ಎತ್ತಿನಬಂಡಿಗಳು ಕಂಡುಬಂದವು. ಬಂಡಿಯಲ್ಲಿ ಕೆಂಪೇಗೌಡರ ಪೂರ್ವಿಕರಾದ ಕೆಂಪಣ್ಣಸ್ವಾಮಿ ಹಾಗೂ ಶ್ರೀ ವೀರಣ್ಣ ಸ್ವಾಮಿ ಉತ್ಸವ ಮೂರ್ತಿಗಳನ್ನಿಟ್ಟು ಪೂಜಿಸಿ, ನಂತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮೆರವಣಿಗೆಯು ಆರಂಭಗೊಂಡಿತು. ಹಡ್ಸನ್ ಸರ್ಕಲ್, ಕಬ್ಬನ್ ಪಾರ್ಕ್ ಸೆಂಟ್ರಲ್ ಲೈಬ್ರರಿ, ಹೈಕೋರ್ಟ್ ಆವರಣ ಮತ್ತು ಗೋಪಾಲ್ ಗೌಡ ಸರ್ಕಲ್ ಮೂಲಕ ಸಾಗಿ, ವಿಧಾನಸೌಧದ ಬಳಿಯ ಕೆಂಪೇಗೌಡರ ಪ್ರತಿಮೆಯ ಬಳಿ ಮೆರವಣಿಗೆಯು ಸಾಗಿತು. ಸುಮಾರು 2000 ಜನ ಈ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. 

ಬಂಡಿದೇವರ ಉತ್ಸವವು ನಮ್ಮ ಬೇರುಗಳೊಂದಿಗೆ ಸಂಪರ್ಕಿಸುವ ಆಚರಣೆಯಾಗಿವೆ. ಮುಂಚೆ ಹಳ್ಳಿಗಳಲ್ಲಿ ಈ ಆಚರಣೆಯಿತ್ತು. ಈಗ ನಗರ ಭಾಗದಲ್ಲಿ ಈ ಆಚರಣೆ ಆರಂಭಗೊಂಡಿರುವುದು ನಿಜಕ್ಕೂ ಸಂತಸದ ವಿಷಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಈ ವೇಳೆ ಮಾಜಿ ಸಚಿವ ಹಾಗೂ ಮಹಾಲಕ್ಷ್ಮಿಪುರ ಶಾಸಕ ಗೋಪಾಲಯ್ಯ, ಹಿರಿಯ ಐಆರ್‌ಎಸ್‌ ಅಧಿಕಾರಿ ಹಾಗೂ ಉತ್ಸವ ಸಮಿತಿಯ ಗೌರವಾಧ್ಯಕ್ಷ ಜಯರಾಮ್‌ ರಾಯಪುರ, ಬೆಂಗಳೂರು ಬಂಡಿದೇವರ ಉತ್ಸವ ಸಮಿತಿಯ ಅ‍ಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ, ಕಾರ್ಯದರ್ಶಿ ಎಂ. ಅಮರೇಶ್‌, ಸಮಿತಿಯ ಉಪಾಧ್ಯಕ್ಷ ನಾಗರಾಜ್‌ (ನಿವೃತ್ತ ಎಸ್‌ಪಿ), ಹಿರಿಯ ಉಪಾಧ್ಯಕ್ಷ ಗೋವಿಂದೇಗೌಡ, ಕೆಂಪೇಗೌಡ ಸಂಶೋಧನಾ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಜೆ. ನಾಗರಾಜ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Share It

You cannot copy content of this page