ಬೆಂಗಳೂರು: ನೂತನವಾಗಿ ನಿರ್ಮಾಣವಾಗಿದ್ದ ದೇವಾಲಯದ ಬಳಿ ದೀಪ ಬೆಳಗಲು ಬಂದಿದ್ದ ಪರಿಶಿಷ್ಟ ಜಾತಿಗೆ ಸೇರಿದ್ದ ಜನರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಲ್ಲದೇ ಇಡೀ ಹರಿಜನ ಕಾಲೊನಿಯನ್ನು ಪೆಟ್ರೋಲ್ ಸುರಿದು ಭಸ್ಮ ಮಾಡುವುದಾಗಿ ಬೆದರಿಕೆ ಹಾಕಿದ್ದ ಒಕ್ಕಲಿಗ ಜಾತಿಗೆ ಸೇರಿದ್ದ 9 ಅಪರಾಧಿಗಳಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಆರು ತಿಂಗಳ ಕಠಿಣ ಜೈಲು ಶಿಕ್ಷೆಯನ್ನು ಇಂದು ಹೈಕೋರ್ಟ್ ಎತ್ತಿ ಹಿಡಿಯಿತು.
ಪರಿಶಿಷ್ಟ ಜಾತಿಗೆ ಸೇರಿದವರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದ ಆರೋಪದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಪ್ರಶ್ನಿಸಿ ಮದ್ದೂರು ತಾಲೂಕಿನ ಬಾಣಗಹಳ್ಳಿಯ ಕೆಂಚೆಗೌಡ, ಮಹದೇವ, ನಾಗರಾಜು, ಹೊನ್ನಲಗೆರೆ ಗ್ರಾಮದ ಆನಂದ್, ದೇವರಾಜು, ರವಿ, ಕೆಂಪೇಗೌಡ, ರವಿಕುಮಾರ್ ಮತ್ತು ನಂದೀಶ್ ಎಂಬುವರು ಹೈಕೋರ್ಟ್ ಗೆ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ನ್ಯಾಯಪೀಠ, ಮೇಲ್ಮನವಿದಾರ ಆರೋಪಿಗಳು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳನ್ನು ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಾರೆ. ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ್ದಾರೆ. ಪೂಜೆ ಮಾಡುವುದಕ್ಕಾಗಿ ದೇವಾಲಯ ಪ್ರವೇಶ ಮಾಡುವುದನ್ನು ತಡೆದಿದ್ದಾರೆ. ಈ ಸಂಬಂಧ ಆರೋಪವನ್ನು ತನಿಖಾಧಿಕಾರಿಗಳು ಸಾಬೀತುಪಡಿಸಿದ್ದು, ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಸಾಕ್ಷಾಧಾರಗಳನ್ನು ಪರಿಗಣಿಸಿ ಸೂಕ್ತ ರೀತಿಯಲ್ಲಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಈ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಪ್ರಕರಣ: ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಎಸ್ಐ ಹೊನಲಗೆರೆಯ ಬೇವಿನಮ್ಮ ದೇವಸ್ಥಾನದ ಪ್ರತಿಷ್ಠಾಪನೆ ಕಾರ್ಯಕ್ರಮ ನಿಗದಿಯಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದಲ್ಲಿ ಹಿಂದಿನಿಂದ ನಡೆದು ಬಂದ ಪದ್ಧತಿಯಂತೆ ಮೆಟ್ಟಿಲುಗಳ ಮೇಲೆ ಆರತಿ ತಟ್ಟೆ ಇಟ್ಟು ಪೂಜೆ ಮಾಡುವುದು ಸಾಮಾನ್ಯವಾಗಿತ್ತು.
2010ರ ಜನವರಿ 21ರಂದು ನಡೆದ ಪೂಜಾ ಕಾರ್ಯಕ್ರಮದ ಸಂದರ್ಭದಲ್ಲಿ ಅದೇ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಜನ ಪೂಜೆ ಮಾಡುವುದಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಅಪರಾಧಿಗಳು ನೀವು ಪರಿಶಿಷ್ಟ ಜಾತಿಗೆ ಸೇರಿದವರು, ಮೆಟ್ಟಿಲುಗಳ ಮೇಲೆ ಆರತಿಗಳನ್ನಿಟ್ಟು ಪೂಜೆ ಮಾಡಬೇಡಿ ಎಂದು ತಿಳಿಸಿದ್ದರು. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಆರತಿಗಳನ್ನು ಚೆಲ್ಲಾಡಿದ್ದರು. ದೊಣ್ಣೆಗಳಿಂದ ಹೊಡೆದಾಟ ನಡೆಸಿದ್ದರು. ಹರಿಜನ ಕಾಲೊನಿಯನ್ನು ಪೆಟ್ರೋಲ್ ಹಾಕಿ ಭಸ್ಮ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಈ ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಕೆ.ಎಂ.ದೊಡ್ಡಿ ಪೊಲೀಸರು ಕೋರ್ಟ್ ಗೆ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಮಂಡ್ಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗಳಿಗೆ ತಲಾ 9 ಸಾವಿರ ರೂ ದಂಡ ವಿಧಿಸಿ ಆರು ತಿಂಗಳುಗಳ ಕಾಲ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿತ್ತು. ಅಲ್ಲದೆ, ದಂಡದ ರೂಪದಲ್ಲಿ ವಸೂಲಿ ಮಾಡಿದ ಮೊತ್ತದಲ್ಲಿ ತೊಂದರೆ ಅನುಭವಿಸಿದ್ದ ನಾಲ್ಕು ಮಂದಿಗೆ ತಲಾ 5 ಸಾವಿರ ರೂ ಪರಿಹಾರ ನೀಡಬೇಕು. ಇನ್ನುಳಿದ ಮೊತ್ತವನ್ನು ಸರ್ಕಾರದ ಖಜಾನೆಗೆ ಜಮೆ ಮಾಡಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು ಎಂದು ಈಟಿವಿ ಭಾರತ್ ವರದಿ ಮಾಡಿದೆ.