News

ಕಟ್ಟಡ ನಿರ್ಮಾಣಕ್ಕೆ ಲಂಚ: ಬಿಬಿಎಂಪಿ ಮಾಜಿ ಸದಸ್ಯನ ಶಿಕ್ಷೆ ರದ್ದು

Share It

ಬೆಂಗಳೂರು: ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲು 2 ಲಕ್ಷ ರೂ. ಲಂಚ ಪಡೆದ ಆರೋಪದ ಮೇರೆಗೆ ಗಣೇಶ ಮಂದಿರ ವಾರ್ಡ್‌ನ ಮಾಜಿ ಪಾಲಿಕೆ ಸದಸ್ಯ ಎಲ್‌ ಗೋವಿಂದರಾಜುಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಧಿಸಿದ್ದ ನಾಲ್ಕು ವರ್ಷಗಳ ಶಿಕ್ಷೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಶಿಕ್ಷೆ ರದ್ದು ಕೋರಿ ಗೋವಿಂದರಾಜು ಮತ್ತು ಶಿಕ್ಷೆಯ ಪ್ರಮಾಣ ಹೆಚ್ಚಳ ಮಾಡಬೇಕು ಎಂದು ಕೋರಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ಜಿ ಉಮಾ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ. ಅಲ್ಲದೆ, ”ಪ್ರಕರಣ ಸಂಬಂಧ ನಡೆದ ತನಿಖಾ ಪ್ರಕ್ರಿಯೆಯಲ್ಲಿ ಕೆಲವು ದೋಷಗಳಿದ್ದು, ಆರೋಪ ಸಾಬೀತುಪಡಿಸುವಲ್ಲಿ ಹಾಗೂ ಪೂರಕ ಸಾಕ್ಷ್ಯಾಧಾರಗಳನ್ನು ಒದಗಿಸಲು ಲೋಕಾಯುಕ್ತ ಪೊಲೀಸರು ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ತಿಳಿಸಿದೆ.

ಘಟನೆ ಸಂಬಂಧ ಪಂಚನಾಮೆಯನ್ನು ಬೆಳಗ್ಗೆ 10.30ಕ್ಕೆ ಮಾಡಿರುವುದಾಗಿ ಹೇಳಲಾಗಿದೆ. ಆದರೆ, ದೂರುದಾರರಿಂದ ಸ್ವೀಕರಿಸಿದ್ದ 2 ಲಕ್ಷ ರೂ.ಗಳ ಪ್ಯಾಕೆಟ್‌ನಲ್ಲಿದ್ದ ಕರೆನ್ಸಿ ನೋಟುಗಳ ಸರಣಿ ಸಂಖ್ಯೆಗಳನ್ನು ತನಿಖಾಧಿಕಾರಿಗಳು ಗುರುತಿಸಿಲ್ಲ. ಹಣ ವಶಕ್ಕೆ ಪಡೆದ ಬಳಿಕ ಲೋಕಾಯುಕ್ತ ಕಚೇರಿಯಲ್ಲಿ ಮಧ್ಯಾಹ್ನ 12.45 ರಿಂದ 1 ಗಂಟೆ ಸಂದರ್ಭದಲ್ಲಿ ಮಹಜರ್‌ ಬರೆಯಲು ಆರಂಭಿಸಲಾಗಿದೆ ಎಂಬ ಅಂಶ ಗೊತ್ತಾಗಲಿದ್ದು, ಲೊಕಾಯುಕ್ತ ಪೊಲೀಸರ ತನಿಖಾ ಪ್ರಕ್ರಿಯೆ ಅತ್ಯಂತ ಕಳಪೆಯಾಗಿದೆ. ಹಾಗಾಗಿ, ಅದನ್ನು ಪರಿಗಣಿಸಲು ಸಾಧ್ಯವಾಗುವುದಿಲ್ಲ, ಎಂದು ಪೀಠ ತಿಳಿಸಿದೆ.

ಅರ್ಜಿದಾರ ಗೋವಿಂದರಾಜುಗೆ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯ, ಈ ಎಲ್ಲಆಸ್ಪಷ್ಟ ಸಂಗತಿಗಳ ಕುರಿತಂತೆ ಯಾವುದೇ ವಿವರಣೆ ನೀಡಿಲ್ಲ. ಆದರೂ, ಆರೋಪಿಯನ್ನು ಅಪರಾಧಿ ಎಂದು ಘೋಷಿಸುವುದಕ್ಕೆ ಮುಂದಾಗಿದ್ದು, ಅದಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಆದ್ದರಿಂದ ಆರೋಪಿ ಸಲ್ಲಿಸಿರುವ ಅರ್ಜಿ ಪುರಸ್ಕರಿಸುತ್ತಿದ್ದು, ಶಿಕ್ಷೆ ರದ್ದು ಮಾಡಲಾಗುತ್ತಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಅಲ್ಲದೆ, ಶಿಕ್ಷೆ ಪ್ರಮಾಣ ಹೆಚ್ಚಳ ಮಾಡಬೇಕು ಎಂದು ಕೋರಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಅರ್ಜಿ ವಜಾಗೊಳಿಸಿರುವ ನ್ಯಾಯಪೀಠ, ಅರ್ಜಿದಾರ ಆರೋಪಿಯ ವಿರುದ್ಧದ ತಪ್ಪನ್ನು ಅನುಮಾನ ಮೀರಿ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ಯಶಸ್ವಿಯಾಗಿಲ್ಲ. ಹೀಗಿರುವಾಗ, ಆರೋಪಿ ಪ್ರಕರಣದಿಂದ ಖುಲಾಸೆಗೆ ಅರ್ಹವಾಗಿದ್ದು, ಶಿಕ್ಷೆ ಹೆಚ್ಚಳ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ: ದೂರುದಾರ ಉದಯ್‌ ಕುಮಾರ್‌ ಕತ್ರಿಗುಪ್ಪೆಯಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸುತ್ತಿದ್ದರು. ಗೋವಿಂದರಾಜು ಸದಸ್ಯರಾದ ಬಳಿಕ ಕಟ್ಟಡದ ನಕ್ಷೆ ಮತ್ತು ಬೈಲಾ ಉಲ್ಲಂಘಿಸಲಾಗಿದೆ ಎಂದು ಹೇಳಿ ನಿರ್ಮಾಣ ಸ್ಥಗಿತಕ್ಕೆ ಆದೇಶಿಸಲಾಗಿತ್ತು. ಕಾಮಗಾರಿ ಮುಂದುವರಿಯಬೇಕಾದರೆ ಲಂಚ ನೀಡಬೇಕು ಎಂದು ಅವರ ಆಪ್ತರು ಬೇಡಿಕೆ ಇಟ್ಟಿದ್ದರು. ಇದರಿಂದಾಗಿ ದೂರುದಾರರು ಗೋವಿಂದರಾಜುಗೆ 2 ಲಕ್ಷ ರೂ.ಗಳನ್ನು ನೀಡಿದ್ದಲ್ಲದೆ, ಲೋಕಾಯುಕ್ತರಿಗೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದ ನಂತರ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಆರೋಪಿಗೆ ನಾಲ್ಕು ವರ್ಷ ಶಿಕ್ಷೆ ಹಾಗೂ 90 ಸಾವಿರ ರೂ. ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.


Share It

You cannot copy content of this page