ಬೆಂಗಳೂರು: ಜುಲೈ 12 ರಂದು ರಾಜ್ಯಾದ್ಯಂತ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 3.11 ಲಕ್ಷ ದಾವೆ ಸೇರಿ ಒಟ್ಟು 58.67 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ಈ ಕುರಿತಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಹಿರಿಯ ನ್ಯಾಯಮೂರ್ತಿ ವಿ.ಕಾಮೇಶ್ವರರಾವ್ ಅವರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಲೋಕಾ ಅದಾಲತ್ ನಲ್ಲಿ ಸಂಬಂಧಿಸಿದವರಿಗೆ ₹2,878 ಕೋಟಿ ಪರಿಹಾರ ಕೊಡಿಸಲಾಗಿದೆ. 1,756 ವೈವಾಹಿಕ ಪ್ರಕರಣಗಳನ್ನು ಪರಿಹರಿಸಲಾಗಿದೆ. 331 ದಂಪತಿಗಳು ತಮ್ಮ ಕಲಹ ಮರೆತು ಸಂಧಾನದ ಮೂಲಕ ಮತ್ತೆ ಒಂದಾಗಿ ಸಹಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಕೆಎಸ್‌ಎಲ್‌ಎಸ್‌ಎದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನ್ಯಾ. ರಾವ್ ಮಾಹಿತಿ ನೀಡಿದ್ದಾರೆ.
ರಾಜ್ಯವ್ಯಾಪಿ ನಡೆದ ಅದಾಲತ್‌ನಲ್ಲಿ ಒಟ್ಟು 1,022 ಪೀಠಗಳು ಕಾರ್ಯನಿರ್ವಹಿಸಿದ್ದು, ಹೈಕೋರ್ಟ್‌ನ ಪೀಠಗಳಲ್ಲಿ 1,182 ಪ್ರಕರಣಗಳು ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿದ್ದ 3,11,177 ಪ್ರಕರಣಗಳು ಹಾಗೂ 55,56,255 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಮುಂದಿನ ರಾಷ್ಟ್ರೀಯ ಲೋಕ್ ಅದಾಲತ್ ಸೆಪ್ಟೆಂಬರ್ 13ರಂದು ರಾಜ್ಯಾದ್ಯಂತ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇತ್ಯರ್ಥಪಡಿಸಿದ ಪ್ರಕರಣಗಳ ವಿವರ:
4,015 ಆಸ್ತಿ ವಿಭಾಗ ದಾವೆ (ಪಾರ್ಟಿಷನ್ ಸೂಟ್) ಇತ್ಯರ್ಥ; 4,961 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳು ಇತ್ಯರ್ಥ; ಸಂತ್ರಸ್ತರಿಗೆ ₹290 ಕೋಟಿ ಪರಿಹಾರ ಕೊಡಿಸಲಾಗಿದೆ.
13,542 ಚೆಕ್ ಬೌನ್ಸ್ ಪ್ರಕರಣಗಳು ವಿಲೇವಾರಿ, ₹572 ಕೋಟಿ ಪರಿಹಾರ ಪಾವತಿ.
456 ಎಲ್‌ಎಸಿ ಅಮಲ್ದಾರಿ ಪ್ರಕರಣಗಳ ಇತ್ಯರ್ಥ, ₹64 ಕೋಟಿ ಪರಿಹಾರ
375 ಗ್ರಾಹಕ ವ್ಯಾಜ್ಯಗಳ ಇತ್ಯರ್ಥ, ₹406 ಕೋಟಿ ಪರಿಹಾರ
5 ವರ್ಷಕ್ಕೂ ಹಳೆಯ 2,377, 10 ವರ್ಷಕ್ಕೂ ಹಳೆಯ 275 ಹಾಗೂ 15 ವರ್ಷಕ್ಕೂ ಹಳೆಯ 38 ಪ್ರಕರಣ ಸೇರಿ ಒಟ್ಟು 2,689 ಹಳೆಯ ಪ್ರಕರಣಗಳು ಇತ್ಯರ್ಥ
ಸಂಧಾನದ ಮೂಲಕ ಬೆಂಗಳೂರಿನ 8ನೇ ಹೆಚ್ಚುವರಿ ಮೆಟ್ರೊಪಾಲಿಟನ್ ಕೋರ್ಟ್‌ನಲ್ಲಿದ್ದ 28 ವರ್ಷ ಹಾಗೂ 27 ವರ್ಷಗಳಷ್ಟು ಹಳೆಯದಾದ ಕ್ರಿಮಿನಲ್ ಪ್ರಕರಣಗಳ ವಿಲೇವಾರಿ.
ಬೆಂಗಳೂರು ನಗರ ಜಿಲ್ಲೆಯಲ್ಲಿ₹1.75 ಕೋಟಿ ಮೊತ್ತದ ಒಂದು ಮೋಟಾರು ವಾಹನ ಅಪರಾಧ ಪರಿಹಾರ, ₹6.56 ಕೋಟಿ ಮೊತ್ತದ ಒಂದು ಹಾಗೂ ₹5.15 ಕೋಟಿ ಮೊತ್ತದ ಮತ್ತೊಂದು ಚೆಕ್ ಅಮಾನ್ಯ ಪ್ರಕರಣಗಳ ಇತ್ಯರ್ಥ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ₹40.66 ಕೋಟಿ ಪರಿಹಾರದ ಅಸಲು ದಾವೆ ಇತ್ಯರ್ಥ.