ಬೆಂಗಳೂರು: ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದಾಗಿದೆ ಎಂದು ಬಮುಲ್ ಅಧ್ಯಕ್ಷ ಹಾಗೂ ನಿಕಟಪೂರ್ವ ಸಂಸದ ಡಿ.ಕೆ. ಸುರೇಶ್ ಹೇಳಿದರು.
ಮಂಗಳವಾರ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ನಿನ್ನೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮಹತ್ವದ್ದಾಗಿದೆ. ಇ.ಡಿ ಸಂಸ್ಥೆಯ ಹಸ್ತಕ್ಷೇಪ, ಕಾರ್ಯವೈಖರಿ ಹಾಗೂ ಎಲ್ಲೆ ಮೀರಿ ವರ್ತನೆ ಮಾಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಕಳೆದ ಎರಡು ವರ್ಷಗಳಿಂದ ಸುಪ್ರೀಂ ಕೋರ್ಟ್ ಈ ವಿಚಾರವಾಗಿ ಚಾಟಿ ಬೀಸುತ್ತಲೇ ಇದೆ. ರಾಜಕೀಯ ಪ್ರೇರಿತ ದಾಳಿ ಮಾಡಿ ವಿರೋಧ ಪಕ್ಷಗಳನ್ನು ಬಗ್ಗುಬಡಿಯಲು ಕೇಂದ್ರ ಸರ್ಕಾರ ಇ.ಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿಯಾದರೂ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಬಿಟ್ಟು, ಅಭಿವೃದ್ಧಿ ರಾಜಕಾರಣ ಮಾಡಲಿ. ದೇಶದ ಅಭಿವೃದ್ಧಿ, ಯುವಕರ ಭವಿಷ್ಯ ನಿರ್ಮಾಣ ಮಾಡುವ ಬಗ್ಗೆ, ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಚಿಂತನೆ ಮಾಡಲಿ ಎಂದು ಕುಟುಕಿದರು.
ರಾಜಕೀಯದಲ್ಲಿ ಎಲ್ಲವನ್ನು ಸಹಿಸಲು ಸಿದ್ಧರಾಗಿರುತ್ತಾರೆ. ಕೆಲವರು ಇದನ್ನು ಅಸ್ತ್ರವಾಗಿ ಬಳಸಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಸದೆಬಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಷಡ್ಯಂತ್ರ ಆಗಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನ್ಯಾಯಕ್ಕೆ ಗೌರವ ಸಿಕ್ಕಂತಾಗಿದೆ. ನಮ್ಮ ಮೇಲಿನ ಇ.ಡಿ ಪ್ರಕರಣ ವಜಾವಾಗಿದ್ದರೂ ಸಿಬಿಐಗೆ ಪತ್ರ ಬರೆಯುವುದು, ಸಿಬಿಐ ಆದಾಯ ತೆರಿಗೆಗೆ ಪತ್ರ ಬರೆಯುವುದು ಹೀಗೆ ಪ್ರತಿ ಹಂತದಲ್ಲೂ ಯಾವುದಾದರೂ ಪ್ರಕರಣದ ಸುಳಿಯಲ್ಲಿ ಸಿಲುಕಿಸಿ ಸದೆಬಡಿಯುವ ಪ್ರಯತ್ನ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಇಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿಲ್ಲ. ಸರಿ, ತಪ್ಪು ತೀರ್ಮಾನ ಮಾಡಲು ತನಿಖೆ ನಡೆಯುತ್ತಿಲ್ಲ. ಎಲ್ಲಾದರೂ ಒಂದು ಕಡೆ ತಪ್ಪಿಸಿಕೊಂಡರೆ, ಮತ್ತೊಂದು ಕಡೆ ಸಿಲುಕಿಸುವ ಪ್ರವೃತ್ತಿ ಬೆಳೆಸಿಕೊಂಡು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ದೂರಿದರು.
ಅನುಮಾನಗಳ ನಿವಾರಣೆಗೆ ಎಸ್ಐಟಿ ರಚನೆ:
ಧರ್ಮಸ್ಥಳ ಶ್ರೀಕ್ಷೇತ್ರವನ್ನು ರಾಜ್ಯದ ಬಹುತೇಕ ಮಂದಿ ನಂಬಿ ಪೂಜೆ, ಹರಕೆ ಮಾಡಿಕೊಂಡು ಬಂದಿದ್ದಾರೆ. ಕೆಲವು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಾ ಬಂದಿದೆ. ಈ ವಿಚಾರದಲ್ಲಿ ಜನರ ಅನುಮಾನಗಳನ್ನು ನಿವಾರಣೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ಇದರಿಂದ ಶ್ರೀಕ್ಷೇತ್ರಕ್ಕೂ ಒಳ್ಳೆಯದು. ಕೆಲವರು ಇದನ್ನು ಹಿಂದೂ ವಿರೋಧಿ ನೀತಿ ಎಂಬ ರೀತಿ ಬಿಂಬಿಸುತ್ತಿದ್ದಾರೆ. ಇದು ಹಿಂದೂ ವಿರೋಧಿ ನೀತಿ ಅಲ್ಲ. ಇದು ಹಿಂದೂಗಳ ಪರವಾದ ನೀತಿ. ಹಿಂದೂಗಳಿಗೆ ಅನ್ಯಾಯ ಆಗಿದ್ದರೆ ಅದನ್ನು ಸರಿಪಡಿಸಬೇಕಾಗಿದೆ. ಈ ಜವಾಬ್ದಾರಿ ಮಾತನಾಡುತ್ತಿರುವವರು ಸೇರಿದಂತೆ ಎಲ್ಲರ ಮೇಲಿದೆ. ಇದು ರಾಜಕೀಯ ಕೆಸರೆರೆಚಾಟದಿಂದ ಹೊರಗೆ ಬರಬೇಕು. 40 ವರ್ಷಗಳಿಂದ ಪ್ರತಿ ವರ್ಷ ನಾನು ಶ್ರೀಕ್ಷೇತ್ರಕ್ಕೆ ಹೋಗಿ ಮಂಜುನಾಥನ ದರ್ಶನ ಪಡೆಯುತ್ತೇನೆ. ಇಲ್ಲಿ ನಂಬಿಕೆ ಎಂಬುದು ಬಹಳ ಮುಖ್ಯ. ಇಲ್ಲಿ ಯಾರು ತಪ್ಪು ಮಾಡಿದ್ದಾರೆ, ಯಾರಿಂದ ತಪ್ಪಾಗಿದೆ ಎಂದು ಯಾರಿಗೂ ಗೊತ್ತಿಲ್ಲ. ಶ್ರೀಕ್ಷೇತ್ರದ ಹೆಸರಿನಲ್ಲಿ ಏನಾದರೂ ಅಪಮಾನ ಆಗಿದ್ದರೆ ಇದನ್ನು ಸರಿಪಡಿಸುವ ಜವಾಬ್ದಾರಿ ಇದರ ಉಸ್ತುವಾರಿಗಳ ಮೇಲೆ ಇದೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಅಥವಾ ಅಪಮಾನ ಮಾಡುವ ಪ್ರಶ್ನೆಯಲ್ಲ. ಶ್ರೀಕ್ಷೇತ್ರ ಯಾವುದೇ ಒಂದು ಕುಟುಂಬದ ಆಸ್ತಿಯಲ್ಲ. ಇದನ್ನು ಒಂದು ಕುಟುಂಬ ನೋಡಿಕೊಳ್ಳುತ್ತಿದ್ದರೂ ಎಲ್ಲಾ ಭಕ್ತರಿಗೂ ಸೇರಿದ ಸ್ವತ್ತಾಗಿದೆ. ಶ್ರೀ ಮಂಜುನಾಥನಿಗೆ ಅಪಮಾನವಾದರೆ ನಮಗೂ ಅಪಮಾನವಾದಂತೆ ಎಂದು ತಿಳಿಸಿದರು.