ಬೆಂಗಳೂರು: ಇನ್ಸೂರೆನ್ಸ್ ಪ್ರೀಮಿಯಂ ಮೊತ್ತ ಸ್ವೀಕರಿಸಿದ ಕ್ಷಣದಿಂದಲೇ ವಾಹನವು ರಿಸ್ಕ್ ಕವರ್ ಅಥವಾ ಹಾನಿ ಪರಿಹಾರದ ವ್ಯಾಪ್ತಿಗೆ ಬರುತ್ತದೆ. ಬದಲಿಗೆ ವಿಮೆ ಪಾವತಿಸಿದ ದಿನದ ಮಧ್ಯರಾತ್ರಿಯಿಂದಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಾಹನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಬೀದರ್ ನ ಸುಭಾಷ್ ಎಂಬುವರು ತಮ್ಮ ಮ್ಯಾಕ್ಸಿ ಕ್ಯಾಬ್ ಗೆ 2008ರ ಮೇ 7ರಂದು ಬೆಳಗ್ಗೆ 10 ಗಂಟೆಗೆ ಯುನೈಟೆಡ್ ಇಂಡಿಯಾ ಕಾರ್ಪೊರೇಷನ್ ಲಿಮಿಟೆಡ್ ಕಂಪನಿ ಏಜೆಂಟ್ ಗೆ ಇನ್ಸೂರೆನ್ಸ್ ಪ್ರೀಮಿಯಂ ಪಾವತಿಸಿದ್ದರು. ಅಂದೇ ಮಧ್ಯಾಹ್ನ 1.30ಕ್ಕೆ ವಾಹನ ಅಪಘಾತಕ್ಕೆ ತುತ್ತಾಗಿತ್ತು. ಘಟನೆಯಲ್ಲಿ ಕ್ಯಾಬ್ ನಲ್ಲಿದ್ದ ಸುದರ್ಶನ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಬೀದರ್ ವಿಚಾರಣಾ ನ್ಯಾಯಾಲಯ, ಅಪಘಾತದಲ್ಲಿ ಗಾಯಗೊಂಡಿರುವ ಸುದರ್ಶನ್ ಅವರಿಗೆ ಕ್ಯಾಬ್ ಮಾಲೀಕರೇ 1.7 ಲಕ್ಷ ಪರಿಹಾರ ನೀಡಬೇಕು. ವಿಮೆ 2008ರ ಮೇ 8ರ ಮಧ್ಯರಾತ್ರಿ 12ರಿಂದ ಪ್ರಾರಂಭ ಆಗಿರುವುದರಿಂದ ವಿಮಾ ಕಂಪನಿ ಬಾಧ್ಯವಲ್ಲ ಎಂದು 2012ರ ಜುಲೈ 27ರಂದು ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಪರಿಹಾರ ಮೊತ್ತ ಹೆಚ್ಚಿಸಲು ಹಾಗೂ ಪರಿಹಾರ ಹೊಣೆಯನ್ನು ಕ್ಯಾಬ್ ಮೇಲೆ ಹೊರಿಸಿರುವುದನ್ನು ಪ್ರಶ್ನಿಸಿ ಸುದರ್ಶನ್ ಹೈಕೋರ್ಟ್ ಗೆ ಮೆಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ ವಿಮಾ ಸಂಸ್ಥೆ ಪರ ವಕೀಲರು, ಅಪಘಾತ ಮೇ 7ರ ಮಧ್ಯಾಹ್ನ 1.30ಕ್ಕೆ ಸಂಭವಿಸಿದೆ. ಕ್ಯಾಬ್ ಮಾಲೀಕರು ಬೆಳಗ್ಗೆ 10.30ಕ್ಕೆ ವಿಮೆ ಕಂತು ಪಾವತಿಸಿದ್ದರೂ ಅದರ ಕ್ಲೇಮು ಅರ್ಹತೆ ಮೇ 8ರ ಮಧ್ಯರಾತ್ರಿ 12ಕ್ಕೆ ಶುರುವಾಗುತ್ತದೆ. ಹೀಗಾಗಿ ವಿಮಾ ಸಂಸ್ಥೆ ಪರಿಹಾರ ನೀಡುವ ಜವಾಬ್ದಾರಿ ಹೊಂದಿಲ್ಲ ಎಂದಿದ್ದರು.
ಈ ವಾದವನ್ನು ಅಲ್ಲಗಳೆದಿರುವ ಹೈಕೋರ್ಟ್, ವಿಮೆ ಕಂತು ಹಣ ಪಾವತಿಸಿದ ಕ್ಷಣದಿಂದಲೇ ಹಾನಿ ಪರಿಹಾರ ಪಡೆಯುವ ಹಕ್ಕು ಲಭಿಸುತ್ತದೆ. ವಿಮಾ ಸಂಸ್ಥೆ ಹಣ ಸ್ವೀಕರಿಸಿದ ಕ್ಷಣದಲ್ಲೇ ಹಾನಿ ಪರಿಹಾರ ನೀಡುವ ಒಪ್ಪಂದ ಮಾಡಿಕೊಂಡಿರುತ್ತದೆ. ಹೀಗಾಗಿ ಗಾಯಾಳು ಸುದರ್ಶನ್ ವಿಚಾರಣಾ ನ್ಯಾಯಾಲಯ ನೀಡಬೇಕೆಂದು ಹೇಳಿರುವ ಮೊತ್ತಕ್ಕಿಂತ ಹೆಚ್ಚುವರಿ 30,487 ರೂ. ಪಾವತಿಸಬೇಕು ಎಂದು ವಿಮಾ ಸಂಸ್ಥೆಗೆ ಆದೇಶಿಸಿದೆ.
(M.F.A. NO.31894/2012 (MV)