ಬೆಂಗಳೂರು: ಬೆಂಗಳೂರು ಮತ್ತು ಧಾರವಾಡದ ನಿಮ್ಹಾನ್ಸ್‌ನಲ್ಲಿ ಸಹಾಯವಾಣಿ ಆರಂಭಿಸಿ ಮೂರು ವರ್ಷ ಕಳೆದಿದ್ದು, ಇದರಿಂದ 1 ಲಕ್ಷ ಜನ ಇದರ ನೆರವು ಪಡೆದುಕೊಂಡಿದ್ದಾರೆ.
ಸಣ್ಣ-ಪುಟ್ಟ ವಿಷಯಗಳಿಗೆ ಮನನೊಂದು ಕೆಟ್ಟ ಆಲೋಚನೆಗೊಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ಹೋಗಲಾಡಿಸಲು ಕುಟುಂಬದಲ್ಲಿ ಹಿರಿಯರೊಂದಿಗೆ ಮುಕ್ತವಾಗಿ ತಮ್ಮ ನೋವುಗಳನ್ನು ಹಂಚಿಕೊಂಡರೆ ಮನೋವೈದ್ಯರ ಅವಶ್ಯಕತೆ ಇರುವುದಿಲ್ಲ ಎಂದು ತಜ್ಞರು ಅಭಿಪ್ರಾಪಟ್ಟಿದ್ದಾರೆ.
ಇತ್ತೀಚೆಗೆ ಮಕ್ಕಳ ಆತ್ಮಹತ್ಯೆ ಪ್ರಕರಣಗಳು ಅಧಿಕಗೊಳ್ಳುತ್ತಿದೆ. ಹೆಚ್ಚು ಮಕ್ಕಳು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಸಣ್ಣ ವಿಷಯಗಳಿಗೆ ಮನನೊಂದು ಜೀವ ಕಳೆದುಕೊಳ್ಳುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ಇದಕ್ಕಾಗಿ ಕಾರ್ಯಪಡೆಯನ್ನು ರಚಿಸಿದೆ. ಪ್ರತಿ ಶಾಲೆಯಲ್ಲಿ ಒಬ್ಬರು ಮನೋವೈದ್ಯರನ್ನು ನೇಮಿಸಿಕೊಳ್ಳುವುದು ಅಗತ್ಯ ಎಂದು ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಅದರಂತೆ, ಕರ್ನಾಟಕದಲ್ಲಿ ಬೆಂಗಳೂರು ಮತ್ತು ಧಾರವಾಡದ ನಿಮ್ಹಾನ್ಸ್‌ನಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ.
ಕೊರೊನಾ ಕಳೆದ ಮೇಲೆ ಯುವ ಪೀಳಿಗೆಯಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಶೇ.15 ರಷ್ಟು ಪ್ರಕರಣಗಳು ಆತ್ಮಹತ್ಯೆಯ ಹಂತ ತಲುಪಿವೆ. ಸಹಾಯವಾಣಿಗೆ ರಾತ್ರಿ ವೇಳೆಯೇ ಹೆಚ್ಚಿನ ಕರೆಗಳು ಬರುತ್ತಿವೆ. ಒಬ್ಬ ವಿದ್ಯಾರ್ಥಿ ಆತ್ಮಹತ್ಯೆಗೆ ರೈಲ್ವೆ ಹಳಿಯವರೆಗೆ ಹೋಗಿ ಸಹಾಯವಾಣಿಗೆ ಕರೆಮಾಡಿ ಮನೆಗೆ ಹಿಂತಿರುಗಿದ ಘಟನೆ ನಡೆದಿವೆ. ಆದ್ದರಿಂದ ಐಪಿಎಸ್ ಸೇರಿದಂತೆ ಹಲವು ತರಬೇತಿ ಸಂಸ್ಥೆಗಳು, ಐಐಟಿಗಳಲ್ಲಿ ಶೈಕ್ಷಣಿಕ ಒತ್ತಡ ತಡೆದುಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಅಧಿಕಗೊಳ್ಳುತ್ತಿದೆ. ಅದಕ್ಕಾಗಿ ಈಗ ಪ್ರತಿ ಸಂಸ್ಥೆಯಲ್ಲೂ ಮನೋವೈದ್ಯರ ಸಲಹೆ ಪಡೆಯುವ ವ್ಯವಸ್ಥೆ ಮಾಡಲಾಗುತ್ತಿದೆ.
ಈ ಸಮಸ್ಯೆ ಬಗೆಹರಿಸಬೇಕೆಂದರೆ ನಮ್ಮ ಪೂರ್ವಿಕರ ಪದ್ಧತಿಯನ್ನು ಪರಿಶೀಲಿಸುವುದು ಅಗತ್ಯವಾಗಿದ್ದು, ಕುಟುಂಬದ ಕಲ್ಪನೆ ಭಾರತೀಯರು ಇಡೀ ವಿಶ್ವಕ್ಕೆ ನೀಡಿದ ಕಲ್ಪನೆಯಾಗಿದೆ. ಬೇರೆ ಯಾವ ದೇಶದಲ್ಲೂ ಇದು ಇಲ್ಲವಾಗಿದೆ. ಈಗ ತಂದೆ-ತಾಯಿ ಇಬ್ಬರೂ ಉದ್ಯೋಗಸ್ಥರಾದರೆ ಅವರಿಗೆ ಮಕ್ಕಳೊಂದಿಗೆ ಸಂವಹನ ನಡೆಸಲು ಸಮಯವೇ ಸಿಗುವುದಿಲ್ಲ. ಹಿಂದೆ ಅಜ್ಜ-ಅಜ್ಜಿಯರು ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಅಲ್ಲಿ ಮಾನಸಿಕ ನೆಮ್ಮದಿ ಮಕ್ಕಳಿಗೆ ಸಿಗುತ್ತಿತ್ತು. ಹೀಗಾಗಿ ಮಕ್ಕಳಲ್ಲಿ ಖಿನ್ನತೆ, ಆತ್ಮಹತ್ಯೆ ಮನೋಭಾವ ಬರಲು ಅವಕಾಶವೇ ಇರಲಿಲ್ಲ. ಈಗ ಮಕ್ಕಳ ಪೋಷಕರು ಕಾರು-ಬಂಗಲೆ ಹಿಂದೆ ಬಿದ್ದಿದ್ದು, ಮಕ್ಕಳ ಚಿಂತ ಅವರಿಗಿಲ್ಲದಂತಾಗಿದೆ. ಹೀಗಾಗಿ ಮಕ್ಕಳು ಮಾನಸಿಕವಾಗಿ ಅನಾಥರಾಗಿ ಆತ್ಮಹತ್ಯೆಯ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ. ಇಂಥ ಸಂದರ್ಭ ಬರಬಾರದು ಎಂದು ಸುಪ್ರೀಂ ಕೋರ್ಟ್ ಶಾಲೆಗಳಲ್ಲಿ ಮನೋವೈದ್ಯರ ಸಲಹೆ ಪಡೆಯುವುದು ಅಗತ್ಯ ಎಂದು ಹೇಳಿದೆ.