ಬೆಂಗಳೂರು: ನಗರದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಮೊದಲ ಬಾರಿಗೆ ಮಾಣಿಕ್ ಷಾದಲ್ಲಿ ಪರೇಡ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿದೆ.
ಬಿಬಿಎಂಪಿ, ಬೆಂಗಳೂರು ಪೋಲಿಸ್ ಇಲಾಖೆ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ಸ್ವಾಾತಂತ್ರ್ಯೋತ್ಸವದ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಆ.15 ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ವರ್ಷ ಅಂದಾಜು ಎಂಟು ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.
ಮಂಗಳವಾರ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಳೆ ಬಂದರೆ ತೊಂದರೆಯಾಗದಂತೆ ಶಾಮಿಯಾನ, ವೇದಿಕೆಯ ನಿರ್ಮಾಣ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ತೆರೆದ ಜೀಪಿನಲ್ಲಿ ಪರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಲಿದ್ದಾರೆ. ಈ ವರ್ಷ ಪ್ರಪ್ರಥಮ ಬಾರಿಗೆ ಎರಡು ಸಾವಿರ ಜನರಿಗೆ ಇ-ಪಾಸ್ ವ್ಯವಸ್ಥೆ ಮಾಡಲಾಗಿದೆ. ಈ ಪಾಸ್ ಅನ್ನು ಸೇವಾಸಿಂಧು ಪೋರ್ಟಲ್ ಮೂಲಕ ಪಡೆದು, ಗೇಟ್ ನಂಬರ್ 5ರ ಮೂಲಕ ಪ್ರವೇಶ ಪಡೆಯಬಹುದಾಗಿದೆ ಎಂದರು.
ಬೆಂಗಳೂರು ನಗರ ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಮಾತನಾಡಿ, ಸಿಟಿ ಪೋಲಿಸ್ ವತಿಯಿಂದ ವಿಶೇಷವಾಗಿ ಸಿಸಿಟಿವಿ, ಡಾಗ್ ಸ್ವ್ಕಾಡ್ ಸೇರಿದಂತೆ ಎಲ್ಲಾ ಸೆಕ್ಟರ್‌ನಿಂದಲೂ ಬಿಗಿ ಬಂದೋಬಸ್ತ್ ಮಾಡಿದ್ದೇವೆ. ಪಾರ್ಕಿಂಗ್ ಜಾಗ ಕಡಿಮೆಯಿದೆ. ಜನರು ಪಬ್ಲಿಕ್ ಟ್ರಾನ್ಸ್ಪೋರ್ಟ್ ಬಳಸಬೇಕು. ಕೆಲವೊಂದು ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇ-ಪಾಸ್ ತೆಗೆದುಕೊಂಡವರು ಬೆಳಗ್ಗೆ 8:30ರ ಒಳಗೆ ಪ್ರವೇಶಿಸಬೇಕು. ತಡವಾಗಿ ಬರಬಾರದು. ಮೈದಾನದಲ್ಲಿ ಎರಡು ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆ ಕಾರ್ಯಕ್ಕೆೆ ನಿಯೋಜಿಸಲಾಗಿದೆ. ಮೈದಾನದ ಸುತ್ತ ಭದ್ರತೆ ಮತ್ತು ಸುರಕ್ಷತೆಗಾಗಿ ಈಗಾಗಲೇ ಸಿಸಿ ಕ್ಯಾಮೆರಾ ವ್ಯವಸ್ಥೆಯಿದ್ದು, ಈ ಸಮಾರಂಭಕ್ಕಾಗಿ 100 ಸಿಸಿಟಿವಿಗಳನ್ನು ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗಿದೆ. ಕೆಎಸ್‌ಆರ್‌ಪಿ ಸೇರಿದಂತೆ ವಿವಿಧ ಪೋಲಿಸ್ ಇಲಾಖೆಯ 35 ತುಕಡಿಗಳಲ್ಲಿ 1,150 ಮಂದಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಸಿಗರೇಟ್, ಬೆಂಕಿ ಪಟ್ಟಣ, ಕರಪತ್ರಗಳು, ಬಣ್ಣದ ದ್ರಾವಣ, ವೀಡಿಯೋ ಮತ್ತು ಸ್ಟಿಲ್ ಕ್ಯಾಮೆರಾಗಳು, ನೀರಿನ ಬಾಟಲ್‌ಗಳು ಹಾಗೂ ಕ್ಯಾನ್‌ಗಳು, ಶಸ್ತ್ರಾಸ್ತ್ರಗಳು ಹರಿತವಾದ ವಸ್ತು ಹಾಗೂ ಚಾಕು ಚೂರಿ, ಕಪ್ಪು ಕರವಸ್ತ್ರಗಳು, ತಿಂಡಿ ತಿನಿಸು ಮದ್ಯದ ಬಾಟಲ್, ಮಾದಕ ವಸ್ತುಗಳು, ಪಟಾಕಿ ಮತ್ತು ಸ್ಫೋಟಕ ವಸ್ತುಗಳನ್ನು ತರುವ ಹಾಗಿಲ್ಲ ಎಂದು ಮಾಹಿತಿ ನೀಡಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಮಾತನಾಡಿ, ಈ ಬಾರಿ ವಿಶೇಷವಾಗಿ ಸರ್ಕಾರದ ಪಂಚ ಗ್ಯಾರಂಟಿ ಬಗ್ಗೆ ಪ್ರದರ್ಶನವನ್ನು ವಿದ್ಯಾರ್ಥಿಗಳು ನಡೆಸಿಕೊಡಲಿದ್ದಾರೆ. ಪೋಲಿಸ್ ಬ್ಯಾಂಡ್ ಗಳ ಪ್ರದರ್ಶನ ಸೇರಿದಂತೆ ಮೂರು ಕಾರ್ಯಕ್ರಮಗಳು ಇರಲಿವೆ. ಇ-ಪಾಸ್ ಅನ್ನು ಸೇವಾಸಿಂಧೂ ಪೋರ್ಟಲ್‌ನಲ್ಲಿ ಕೇವಲ 100 ಜನ ತೆಗೆದುಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ತೆಗೆದುಕೊಳ್ಳಬೇಕು. ಉಳಿದ ಪಾಸ್‌ಗಳನ್ನು ಫಿಜಿಕಲ್ ಆಗಿ ಎಸಿ, ಡಿಜಿ ಆಫೀಸ್ ಮೂಲಕ ಪಡೆಯಬಹುದು ಎಂದರು.