ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹರು ಕಾಷನ್ ಡೆಪಾಸಿಟ್ ಪಾವತಿ ಮತ್ತು ಆಯ್ಕೆ/ಇಚ್ಛೆಗಳನ್ನು ಬದಲಿಸಿಕೊಳ್ಳಲು/ತೆಗೆದುಹಾಕಲು ಆಗಸ್ಟ್ 26ರ ಮಧ್ಯಾಹ್ನ 1ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳನ್ನು ರದ್ದುಪಡಿಸಿಕೊಳ್ಳಲು ಕೂಡ ಆಗಸ್ಟ್ 26ರಂದು ಬೆಳಿಗ್ಗೆ 11 ಗಂಟೆವರೆಗೆ ಅವಕಾಶ ನೀಡಲಾಗಿದೆ. ಎರಡನೇ ಸುತ್ತಿನ ಅಣಕು/ ತಾತ್ಕಾಲಿಕ ಸೀಟು ಹಂಚಿಕೆಯ ಫಲಿತಾಂಶವನ್ನು ಆಗಸ್ಟ್ 29ರ ಮಧ್ಯಾಹ್ನ 1ಗಂಟೆಯ ನಂತರ ಪ್ರಕಟಿಸಲಾಗುತ್ತದೆ. ಅಂತಿಮ ಫಲಿತಾಂಶದ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಅವರು ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.
ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರ್ನರಿ, ಫಾರ್ಮಸಿ, ಬಿ.ಎಸ್. ಸಿ ನರ್ಸಿಂಗ್, ಯೋಗಾ- ನ್ಯಾಚುರೋಪತಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್ ಇತ್ಯಾದಿ ಯುಜಿಸಿಇಟಿ ಕೋರ್ಸ್ ಗಳಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶದ ನಂತರ ಅಭ್ಯರ್ಥಿಗಳು ಛಾಯ್ಸ್- 1 ಅಥವಾ ಛಾಯ್ಸ್-4 ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಉಳಿದ ಛಾಯ್ಸ್ – 2 ಮತ್ತು 3 ಅಯ್ಕೆ ಲಭ್ಯ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.