ಬೆಂಗಳೂರು: ನಗರದಲ್ಲಿ ಜಲಮಂಡಳಿ ವತಿಯಿಂದ ರಸ್ತೆ ಅಗೆದ ಭಾಗಗಳ ಪುನರ್ ಸ್ಥಾಪನೆ ಮಾಡುವ ವೇಳಾಪಟ್ಟಿ ನೀಡಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಹೇಳಿದರು.
ನಗರದಲ್ಲಿನ ರಸ್ತೆ ಮತ್ತು ಇತರೆ ಅಭಿವೃದ್ಧಿ ಕಾರ್ಯಗಳ ಕುರಿತಂತೆ ವಿಕಾಸಸೌಧದ ಕೊಠಡಿ ಸಂಖ್ಯೆ 436 ರಲ್ಲಿ ಮಂಗಳವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಲಮಂಡಳಿ ವತಿಯಿಂದ ಕುಡಿಯುವ ನೀರಿನ ಪೈಪ್ ಲೈನ್ ಹಾಗೂ ಒಳಚರಂಡಿ ಕಾಮಗಾರಿಗಾಗಿ ರಸ್ತೆ ಕತ್ತರಿಸಿ ಕೆಲಸ ಪೂರ್ಣಗೊಂಡ ನಂತರ ರಸ್ತೆ ದುರಸ್ತಿ ಕಾರ್ಯ ಕೈಗೊಂಡಿರುವುದಿಲ್ಲ. ಈ ಸಂಬಂಧ ರಸ್ತೆ ಕತ್ತರಿಸಿದ ಭಾಗವನ್ನು ಪುನರ್ ಸ್ಥಾಪಿಸುವ ಸಲುವಾಗಿ ವೇಳಾಪಟ್ಟಿ ಸಿದ್ಧಪಡಿಸಿ ಅದರ ಅನುಸಾರ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ವಿವಿಧ ಕಡೆ ಸೇರಿದಂತೆ ಸುಮಾರು 7.3 ಕಿ.ಮೀ ಉದ್ದದ ರಸ್ತೆ ಕತ್ತರಿಸಿದ ಭಾಗಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ. ಈ ಪೈಕಿ ಯಾವ್ಯಾವ ರಸ್ತೆಗಳಲ್ಲಿ ರಸ್ತೆ ಪುನರ್ ಸ್ಥಾಪನೆ ಕಾರ್ಯ ನಡೆಸಬೇಕೆಂಬುದರ ಪಟ್ಟಿ ಪಡೆದು ಶೀಘ್ರ ಕೆಲಸ ಪ್ರಾರಂಭಿಸ ಬೇಕು ಎಂದು ಸೂಚಿಸಿದರು.
ರಸ್ತೆ ಗುಂಡಿಗಳನ್ನು ಶೀಘ್ರ ಮುಚ್ಚಿ:
ನಗರದಲ್ಲಿ ರಸ್ತೆ ಗುಂಡಿಗಳನ್ನು ಶೀಘ್ರಗತಿಯಲ್ಲಿ ಮುಚ್ಚಬೇಕು. ಈ ನಿಟ್ಟಿನಲ್ಲಿ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಚುರುಕಾಗಿ ಕೆಲಸ ಮಾಡಬೇಕು. ಮುಚ್ಚಿರುವಂತಹ ಗುಂಡಿಗಳನ್ನು ಸಂಚಾರಿ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಲು ತಿಳಿಸಿದರು.
ಟ್ರಾನ್ಸ್ ಫಾರ್ಮರ್ ಸ್ಥಳಾಂತರಿಸಿ:
ಬೆಸ್ಕಾಂ ವತಿಯಿಂದ ರಸ್ತೆ ಬದಿ, ಪಾದಚಾರಿ ಮಾರ್ಗದಲ್ಲಿರುವ ಟ್ರಾನ್ಸ್ ಫಾರ್ಮರ್ ಗಳನ್ನು ಸ್ಥಳಾಂತರಿಸಬೇಕಿದ್ದು, ಈ ಪೈಕಿ ಎಲ್ಲೆಲ್ಲಿ ಸ್ಥಳಾಂತರಿಸಬೇಂಬುದರ ಪಟ್ಟಿ ಪಡೆದು ಕೂಡಲೆ ಸ್ಥಳಾಂತರ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದರು.
ಸುರಕ್ಷ ಯೋಜನೆ ಅಡಿಯ 75 ಜಂಕ್ಷನ್ ಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ:
ಸುರಕ್ಷ ಯೋಜನೆ ಅಡಿ ನಗರದಲ್ಲಿ 75 ಜಂಕ್ಷನ್ ಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈ ಪೈಕಿ ಎಲ್ಲಾ ಜಂಕ್ಷನ್‌ಗಳನ್ನು ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಬೇಕು. ಈ ಸಂಬಂಧ ಕೂಡಲೆ ಜಂಕ್ಷನ್ ಗಳ ಅಭಿವೃದ್ಧಿಪಡಿಸಿ ಸಂಚಾರ ದಟ್ಟಣೆ ಸರಾಗವಾಗಿ ಸಾಗುವಂತೆ ಮಾಡಬೇಕೆಂದು ಸೂಚಿಸಿದರು.
ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ವೇಗ:
ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ವೇಗ ನೀಡಲಾಗಿದೆ. ಎಲ್ಲಾ ವಲಯಗಳಲ್ಲಿಯೂ ರಸ್ತೆ ಗುಂಡಿಗಳನ್ನು ಗುಣಮಟ್ಟ ಕಾಪಾಡಿಕೊಂಡು ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಡಾ: ಶಿವಶಂಕರ್, ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಡಿಸಿಪಿ (ಪೂರ್ವ) ಸಾಹಿಲ್ ಬಾಗ್ಲಾ, ಮುಖ್ಯ ಅಭಿಯಂತರ ರಾಘವೇಂದ್ರ ಪ್ರಸಾದ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.