News

ಒಳಮೀಸಲಾತಿಗೆ ಅಡ್ಡಿಪಡಿಸುತ್ತಿರುವ ಮಹದೇವಪ್ಪ ಮನೆಗೆ ಮುತ್ತಿಗೆ: ಬಸವರಾಜ್ ಕೌತಾಳ್

Share It

ಬೆಂಗಳೂರು: ಪರಿಶಿಷ್ಠ ಜಾತಿಗಳ ಒಳಮೀಸಲಾತಿ ಜಾರಿಗೆ ಅಡ್ಡಿಪಡಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮನೆಗೆ ಅ.10ರ ಬೆಳಗ್ಗೆ 10 ಗಂಟೆಗೆ ಮುತ್ತಿಗೆ ಹಾಕಲಾಗುವುದು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮಿಸಲಾತಿ ಹೋರಾಟ ಸಮಿತಿಯ ಪದಾಧಿಕಾರಿ ಬಸವರಾಜ್ ಕೌತಾಳ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲೆಮಾರಿ ಸಮುದಾಯಗಳನ್ನು ರಾಜಕೀಯವಾಗಿ ಬಲಾಢ್ಯರಾದ ಪ್ರವರ್ಗ-ಸಿ ಗೆ ಸೇರಿಸಿ 79 ವರ್ಷಗಳಿಂದ ಅವರಿಗಾದ ಅನ್ಯಾಯವನ್ನು ಮತ್ತೆ ಮಾಡಿ ಬೀದಿಪಾಲು ಮಾಡಿದ್ದಾರೆ. ಕೊನೆಗೆ ಪರಿಶಿಷ್ಟ ಜಾತಿಗಳನ್ನು 3 ಪ್ರವರ್ಗಗಳನ್ನಾಗಿ ಮಾಡಿ ಪ್ರವರ್ಗ-ಎ ಗೆ ಶೇ.6, ಪ್ರವರ್ಗ- ಬಿ ಗೆ ಶೇ.6, ಪ್ರವರ್ಗ-ಸಿ ಗೆ ಶೇ.5 ಎಂದು ಶೇ.17ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಿದ್ದಾರೆ ಎಂದರು.

ಆ.25ರ ಸರ್ಕಾರದ ಆದೇಶದ ಒಳಸಂಚನ್ನು ವಿಫಲಗೊಳಿಸಲು ಒಳಮೀಸಲಾತಿ ಹೋರಾಟಗಾರರು ಪ್ರಯತ್ನಗಳು ನಡೆಸುತ್ತಿರುವಾಗಲೇ, ಸಮಾಜ ಕಲ್ಯಾಣ ಇಲಾಖೆ ಸಚಿವ, ಇಲಾಖೆಯ ಮುಖ್ಯ ಕಾರ್ಯದರ್ಶಿ ಮಣಿವಣ್ಣನ್, ಆಯುಕ್ತ ರಾಕೇಶ್ ಕುಮಾರ್, ಸಲಹೆಗಾರ ವೆಂಕಟಯ್ಯ ಬಂದ ಕಡತಕ್ಕೆ ಒಪ್ಪಿಗೆ ಸೂಚಿಸಲು ಯಾವ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ. ಒಳಮೀಸಲಾತಿ ಆದೇಶವು ಕೇವಲ ನೇರ ನೇಮಕಾತಿಗೆ ಮಾತ್ರ ಅನ್ವಯಿಸುತ್ತದೆ, ಭಡ್ತಿ ಮತ್ತು ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಗೆ ಅನ್ವಯಿಸುವುದಿಲ್ಲವೆಂದು ಸೆಡ್ಡು ಹೊಡೆದಿದ್ದಾರೆ ಎಂದು ದೂರಿದರು.

ಅಂಬಣ್ಣ ಅರೋಲಿಕರ್ ಮಾತನಾಡಿ, ನೇರ ನೇಮಕಾತಿ, ಭಡ್ತಿ ನೇಮಕಾತಿ ರೋಸ್ಟರ್ ಬಿಂದುಗಳಿಗೆ ಸಂಬಂಧಿಸಿದ ರಾಜ್ಯದ ಆದೇಶಗಳನ್ನು ಉಲ್ಲಂಘಿಸಿ ಸರಕಾರವನ್ನು ದಾರಿತಪ್ಪಿಸುತ್ತಿದ್ದಾರೆ. ಇವರುಗಳು ಸಾರ್ವಜನಿಕ ಸೇವಕರಾಗಲು ಯೋಗ್ಯರಲ್ಲ. ಇಲಾಖೆಯಲ್ಲಿ ಇವರು ಇರುವ ತನಕ ಒಳಮೀಸಲಾತಿ ಕುತ್ತಿಗೆ ಕೊಯ್ಯುವುದಷ್ಟೆ ಅಲ್ಲ, ಮಾದಿಗ ಸಮುದಾಯಗಳ ಅಭಿವೃದ್ಧಿಗೂ ಕಂಟಕ ಪ್ರಾಯವಾಗಿದ್ದಾರೆ. ಪರಿಶಿಷ್ಟ ಜಾತಿ ಉಪಯೋಜನೆಯ ಸಾವಿರಾರು ಕೋಟಿ ರೂ.ಹಣವನ್ನು ದುರಪಯೋಗ ಪಡಿಸಿಕೊಂಡು ಕಾನೂನು ಬಾಹಿರವಾಗಿ ಗ್ಯಾರಂಟಿ ಯೋಜನೆಗೆ ನೀಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಒಳಮೀಸಲಾತಿ ಹೋರಾಟಗಾರರಾದ ಎಸ್.ಮಾರೆಪ್ಪ, ಚಂದ್ರು ತರಹುಣಿಸೆ, ವೇಣುಗೋಪಾಲ್ ಮೌರ್ಯ, ಮಂಜುನಾಥ್ ಮರಾಟ ಉಪಸ್ಥಿತರಿದ್ದರು.


Share It

You cannot copy content of this page