ಲೇಖನ: ಮಂಜೇಗೌಡ ಕೆ.ಜಿ. ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಬೆಂಗಳೂರು: ದುಡಿಯುವ ಸಾಮರ್ಥ್ಯ ಇರುವ ವ್ಯಕ್ತಿ ತನ್ನ ಪತ್ನಿ ಮತ್ತು ಮಗುವಿನ ಪೋಷಣೆ ಮಾಡಲೇಬೇಕು. ಅವರಿಗೆ ಜೀವನಾಂಶ ನೀಡುವುದು ಆತನ ಕರ್ತವ್ಯ. ಒಂದು ವೇಳೆ ಪತಿಗೆ ಕೆಲಸವಿಲ್ಲದಿದ್ದರೆ, ಕೆಲಸ ಹುಡುಕಿಕೊಂಡು ದುಡಿದು ಜೀವನಾಂಶ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಪತ್ನಿ ಹಾಗೂ ಮಗುವಿಗೆ ಜೀವನಾಂಶ ನೀಡುವಂತೆ ಮೈಸೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯಪೀಠ ಈ ತೀರ್ಪು ನೀಡಿದೆ.
ಪತಿ ತನ್ನ ಆರೋಗ್ಯ ಸರಿಯಿಲ್ಲ. ತನಗೆ ಸರಿಯಾದ ಉದ್ಯೋಗವೂ ಇಲ್ಲ. ಕಾಯಿಲೆಯಿಂದ ನರಳುತ್ತಿದ್ದೇನೆ. ನನ್ನ ತಿಂಗಳ ಸಂಪಾದನೆ 15 ಸಾವಿರಕ್ಕಿಂತ ಹೆಚ್ಚಿಲ್ಲ. ಹಾಗಾಗಿ ಹೆಂಡತಿ ಮಗುವಿಗೆ ಜೀವನಾಂಶ ಪಾವತಿಸಲು ಸಾಧ್ಯವಿಲ್ಲ ಎಂದು ಪತಿ ವಾದಿಸಿದ್ದರು. ಪತಿಯ ಈ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.
ಅಲ್ಲದೇ, ದುಡಿಯಲು ಸಮರ್ಥನಿರುವ ಪತಿ ಉದ್ಯೋಗ ಇಲ್ಲ ಎಂದಾದರೆ, ಯಾವುದಾದರೂ ಬೇರೆ ಉದ್ಯೋಗವನ್ನು ಹುಡುಕಿಕೊಳ್ಳಬೇಕು. ಆ ಮೂಲಕ ಪತ್ನಿ ಹಾಗೂ ಮಗುವಿಗೆ ಜೀವನಾಂಶ ನೀಡಲೇಬೇಕು ಎಂದು ತಾಕೀತು ಮಾಡಿದೆ. ಸಿಆರ್‌ಪಿಸಿ ಕಲಂ 125ರಡಿ ಪತ್ನಿಗೆ 6 ಸಾವಿರ, ಮಗುವಿಗೆ 4 ಸಾವಿರ ಜೀವನಾಂಶ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.
(WP 20737/2021)