News

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆಯಿಂದ ಮಹಾನಗರಪಾಲಿಕೆಗಳು ಮೂಲೆಗುಂಪಾಗಿವೆ: ಆರ್‌.ಅಶೋಕ್

Share It

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಿಂದಾಗಿ ಎಲ್ಲ ಐದು ಮಹಾನಗರಪಾಲಿಕೆಗಳು ನೆಗೆದು ಬಿದ್ದುಹೋಗಿವೆ. ಎಲ್ಲ ಅಧಿಕಾರಗಳನ್ನು ಕೇವಲ ಮುಖ್ಯಮಂತ್ರಿಗೆ ನೀಡಲಾಗಿದೆ. ಕೌನ್ಸಿಲ್‌ಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಇದು ಸಂವಿಧಾನ ವಿರೋಧವಾಗಿರುವುದರಿಂದ ಸಭೆಯನ್ನು ಬಹಿಷ್ಕಾರ ಮಾಡಿದ್ದೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಸಭೆಯನ್ನು ತರಾತುರಿಯಲ್ಲಿ ಕರೆಯಲಾಗಿದೆ. ಸಭೆ ಇರುವ ಒಂದು ದಿನದ ಮುನ್ನ ಆಹ್ವಾನ ನೀಡಲಾಗಿದೆ. ಕನಿಷ್ಠ 7 ದಿನಕ್ಕೆ ಮುನ್ನ ಸಭೆಯ ಬಗ್ಗೆ ಹಾಗೂ ಅಜೆಂಡಾ ಬಗ್ಗೆ ಮಾಹಿತಿ ನೀಡಬೇಕಿತ್ತು. ಮಧ್ಯಾಹ್ನ 12 ಗಂಟೆಗೆ ಅಜೆಂಡಾ ಕೊಟ್ಟಿದ್ದು, ಅದನ್ನು ಓದಲು ಸಮಯ ಕೂಡ ಇಲ್ಲ. ಸಂವಿಧಾನದ 74 ನೇ ತಿದ್ದುಪಡಿ ಪ್ರಕಾರ, ಮಹಾನಗರ ಪಾಲಿಕೆಯಲ್ಲಿ ಮೇಯರ್‌ ಹಾಗೂ ಪಂಚಾಯತ್‌ನಲ್ಲಿ ಅಧ್ಯಕ್ಷರೇ ಪ್ರಮುಖರಾಗಿರುತ್ತಾರೆ. ಆದರೆ ಬೆಂಗಳೂರಿನಲ್ಲಿ ಐದು ಪಾಲಿಕೆಯಲ್ಲಿ ಮುಖ್ಯಮಂತ್ರಿಯೇ ಮುಖ್ಯರಾಗುತ್ತಾರೆ. ಮೇಯರ್‌ಗಳ ಅಗತ್ಯವೇ ಇಲ್ಲದಂತೆ ತಿದ್ದುಪಡಿ ತರಲಾಗಿದೆ. ಹಾಗೆಯೇ ಬೆಂಗಳೂರು ಮೂಲಸೌಕರ್ಯಕ್ಕೆ ಎಂಜಿನಿಯರ್‌ಗಳನ್ನು ನೇಮಿಸಿದ್ದು, ಕಾರ್ಪೊರೇಶನ್‌ ಬದಲಾಗಿ ಇವರೇ ಎಲ್ಲ ಕಾಮಗಾರಿಗಳನ್ನು ಮಾಡುತ್ತಾರೆ. ಮುಖ್ಯಮಂತ್ರಿಯೇ ಯೋಜನೆಗಳನ್ನು ಅನುಮೋದನೆ ಮಾಡಿ, ಅವರೇ ಜಾರಿ ಮಾಡುತ್ತಾರೆ. ನಿಯಮದ ಪ್ರಕಾರ, ಪಾಲಿಕೆಯ ಕೌನ್ಸಿಲ್‌ ಯೋಜನೆಗಳನ್ನು ಅನುಮೋದನೆ ಮಾಡಬೇಕು ಎಂದು ಹೇಳಿದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಬ್ರ್ಯಾಂಡ್‌ ಬೆಂಗಳೂರು ಎಂದು ಘೋಷಣೆ ಮಾಡಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ರಿಂಗ್‌ ರಸ್ತೆಯಲ್ಲಿ ರಾಶಿ ಕಸ ಬಿದ್ದಿದೆ. ಎಲ್ಲ ರಸ್ತೆಗಳಲ್ಲಿ ಹಳ್ಳ ಇದೆ. ಇಂತಹ ಸಮಸ್ಯೆಗಳನ್ನು ಇಟ್ಟುಕೊಂಡು ಸಭೆ ಮಾಡಬೇಕಾಗಿರುವುದಿಲ್ಲ. ಈಗಿರುವ ಕಾರ್ಪೊರೇಶನ್‌ನಲ್ಲಿ ಕೌನ್ಸಿಲ್‌ ಸಭೆ ಮಾಡಬಹುದಾಗಿದೆ. ಉಳಿದ ನಾಲ್ಕು ಪಾಲಿಕೆಗಳಲ್ಲಿ ಕೌನ್ಸಿಲ್‌ ಸಭೆ ನಡೆಸಲು ಸಭಾಂಗಣ ಎಲ್ಲೂ ಇಲ್ಲದಾಗಿದೆ. ಚುನಾಯಿತ ಪ್ರತಿನಿಧಿಗಳು ಸಭೆ ಮಾಡಲು ಸ್ಥಳಾವಕಾಶವೇ ಇಲ್ಲದೆ ಐದು ಪಾಲಿಕೆ ಮಾಡಲಾಗಿದೆ ಎಂದರು.

ಅಧಿಕಾರಿ/ನೌಕರರ ಕೊರತೆ:

ಹಿಂದೆ ಬಿಬಿಎಂಪಿಯ ಕಂದಾಯ ವಿಭಾಗದಲ್ಲಿ 858 ಅಧಿಕಾರಿ/ನೌಕರರು ಇದ್ದರು. ಐದು ಭಾಗ ಮಾಡಿದರೆ 1,482 ಅಧಿಕಾರಿ/ನೌಕರರು ಬೇಕಾಗುತ್ತದೆ. ಅಂದರೆ ಇನ್ನೂ ಸುಮಾರು 700 ಅಧಿಕಾರಿಗಳನ್ನು ನೇಮಕ ಮಾಡಬೇಕು. ಆರೋಗ್ಯ ಪರೀಕ್ಷಕರು 198 ಇದ್ದು, ಈಗ 500 ಮಂದಿ ಬೇಕಾಗಿದೆ. ಆರೋಗ್ಯ ವಿಭಾಗದಲ್ಲಿ ಒಟ್ಟು 429 ಮಂದಿ ಇದ್ದು, ಈಗ 1,065 ಮಂದಿಯನ್ನು ನೇಮಕ ಮಾಡಬೇಕಾಗುತ್ತದೆ. ಚುನಾವಣೆಗೆ ಮುನ್ನ ಇಷ್ಟೂ ಜನರನ್ನು ನೇಮಕ ಮಾಡಬೇಕಾಗುತ್ತದೆ. ಹಣಕಾಸು ಇಲಾಖೆಯಲ್ಲಿ 18 ಮಂದಿ ಇದ್ದು, ಇನ್ನೂ 30 ಮಂದಿಯನ್ನು ನೇಮಕ ಮಾಡಬೇಕು. ಒಟ್ಟಾರೆಯಾಗಿ 2818 ಹುದ್ದೆಗಳಿವೆ. 6326 ಹುದ್ದೆಗಳನ್ನು ಹೊಸದಾಗಿ ಸೃಜಿಸಬೇಕಾಗುತ್ತದೆ. ಅಂದರೆ 4 ಸಾವಿರ ಜನರನ್ನು ಹೊಸದಾಗಿ ನೇಮಕ ಮಾಡಬೇಕು. ಇಷ್ಟೊಂದು ಅಧಿಕಾರಿ/ನೌಕರರನ್ನು ಎಲ್ಲಿಂದ ತರಲಿದ್ದಾರೆ ತಿಳಿಯುತ್ತಿಲ್ಲ ಎಂದರು.

ಸಭೆ ಬಹಿಷ್ಕಾರ:

ಬೆಂಗಳೂರಿಗೆ ಮಾರಕವಾದ ಈ ಕ್ರಮವನ್ನು ಹಾಗೂ ಸಭೆಯನ್ನು ಬಹಿಷ್ಕಾರ ಮಾಡಿದ್ದೇವೆ. ಬಿಜೆಪಿಯ ಎಲ್ಲ ಶಾಸಕರೊಂದಿಗೆ ಈ ಕುರಿತು ಚರ್ಚಿಸಲಾಗಿದೆ. ಮುಂದೆ ಕಾನೂನು ಹೋರಾಟ ಕೂಡ ಮಾಡುತ್ತೇವೆ. ಇದು ಬೆಂಗಳೂರಿನ ಜನಪ್ರತಿನಿಧಿಗಳ ಕತ್ತು ಹಿಸುಕುವ ಕಾನೂನು ಬಾಹಿರ ಕ್ರಮವಾಗಿದೆ. ಇದು ಸಂವಿಧಾನ ವಿರೋಧಿ ನಡೆಯಾಗಿರುವುದರಿಂದ ಇಂತಹ ಸಭೆಗೆ ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದರು.


Share It

You cannot copy content of this page