News

ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ; ರಾಜ್ಯ ಸರ್ಕಾರದಿಂದ ತಾತ್ವಿಕ ಒಪ್ಪಿಗೆ

Share It

ಬೆಂಗಳೂರು: ಪರಿಶಿಷ್ಟರ ಒಳಮೀಸಲಾತಿಯಲ್ಲಿ ನ್ಯಾ.ನಾಗಮೋಹನ್‌ದಾಸ್ ನೇತೃತ್ವದ ವರದಿಯಂತೆ ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟು ಮೀಸಲಾತಿ ನೀಡಲು ಮತ್ತು ಪ್ರತ್ಯೇಕ ಅಭಿವೃದ್ಧಿ ನಿಗಮ ಹಾಗೂ ವಿಶೇಷ ಆರ್ಥಿಕ ಪ್ಯಾಕೇಜ್‌ಗೆ ರಾಜ್ಯ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ದೊರಕಿದೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಅಲೆಮಾರಿ ಸಮುದಾಯದ ನಾಯಕರೊಂದಿಗೆ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಧ್ಯಸ್ತಿಕೆಯಲ್ಲಿ ಫಲಪ್ರದವಾಗಿ ಮಾತುಕತೆ ನಡೆದಿದ್ದು, ಸತತ ಎರಡು ವಾರಗಳ ಹೋರಾಟದ ಪ್ರತಿಫಲವಾಗಿ ಅಲೆಮಾರಿ ಹೋರಾಟದಲ್ಲಿ ಹೊಸ ಭರವಸೆ ಕಂಡು ಬಂದಿದೆ. ಪ್ರಕ್ರಿಯೆ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲು ದೀಪಾವಳಿ ಮುಗಿದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ರಣದೀಪ್ ಸುರ್ಜೇವಾಲ, ಬಿ.ಕೆ.ಹರಿಪ್ರಸಾದ್ ಮತ್ತು ಡಾ.ಎಚ್.ಸಿ.ಮಹದೇವಪ್ಪ ಅವರುಗಳ ಸಮ್ಮುಖದಲ್ಲಿ ಅಲೆಮಾರಿ ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಯಲಿದೆ.

ಅಲೆಮಾರಿ ಸಮುದಾಯದ ನಿಯೋಗವು ತನ್ನ ಹಕ್ಕೊತ್ತಯಗಳಾದ ಎ ಕೆಟಗರಿಯಲ್ಲಿ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ, 49 ಅಲೆಮಾರಿ ಸಮುದಾಯಗಗಳಿಗೆ ಸೀಮಿತವಾದ ಪ್ರತ್ಯೇಕ ಅಭಿವೃದ್ಧಿ ನಿಗಮ ಹಾಗೂ ಅಲೆಮಾರಿ ಸಮುದಾಯದ ಅಭಿವೃದ್ಧಿಗೆ ಪರಿಣಾಮಕಾರಿ ಪ್ಯಾಕೇಜ್ ಬೇಕು ಎಂಬ ಹಕ್ಕೊತ್ತಾಯಗಳ ಕುರಿತು ಪ್ರಸ್ತಾವನೆಗಳಿಗೆ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯಿಸಿ, ಇಂದು ದಿಲ್ಲಿಗೆ ಬರಬೇಕಿದ್ದ ರಾಹುಲ್ ಗಾಂಧಿ ಅವರ ತಾಯಿಗೆ ಆರೋಗ್ಯ ಏರುಪೇರಾಗಿದ್ದರಿಂದ ಶಿಮ್ಲಾಗೆ ಹೋಗಿದ್ದಾರೆ. ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದ್ದಾರೆ. ತಡಮಾಡದೆ ಪರಿಹಾರದ ಕುರಿತು ಚರ್ಚಿಸೋಣ. ಸಮಸ್ಯೆ ಬಗೆಹರಿಯದಿದ್ದರೆ ರಾಹುಲ್ ಗಾಂಧಿ ಜೊತೆ ಸಭೆ ನಿಗಧಿ ಮಾಡೋಣ ಎಂದು ಹೇಳಿದರು. ಕೆ.ರಾಜು, ಗುರುದೀಪ್ ಸಪ್ಪಾಲ್, ವೇಣುಗೋಪಾಲ್, ಸುರ್ಜೇವಾಲ ಜಿ. ಹಾಗೂ ಡಾ.ಎಚ್.ಸಿ.ಮಹದೇವಪ್ಪ ಅವರೊಡನೆ ಕಾನ್ಫೆರೆನ್ಸ್ ಕಾಲ್ ಮೂಲಕ ಫೋನ್‌ನಲ್ಲಿ ಕೂಲಂಕುಷವಾಗಿ ಚರ್ಚಿಸಿದರು.

ಅಲೆಮಾರಿ ಸಮುದಾಯಕ್ಕೆ ಶೇ.1 ರಷ್ಟು ಪ್ರತ್ಯೇಕ ಮೀಸಲಾತಿ ನೀಡಲು ರಾಜ್ಯ ಸರ್ಕಾರದ ತಾತ್ವಿಕ ಒಪ್ಪಿಗೆ ಇದೆ. ಇದರ ಪ್ರಕ್ರಿಯೆ ಹೇಗೆ ಎನ್ನುವ ಕುರಿತು ಮಾತ್ರ ಸಭೆಯಲ್ಲಿ ಚರ್ಚಿಸಬೇಕಿದೆ. ವಿಶೇಷ ಪ್ಯಾಕೇಜ್ ಮತ್ತು 49 ಅಲೆಮಾರಿ ಸಮುದಾಯಗಗಳಿಗೇ ಸೀಮಿತವಾದ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನೂ ಮಾಡಲು ಸರಕಾರ ಬದ್ಧವಿದೆ. ಇವೆಲ್ಲವುಗಳ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಎಐಸಿಸಿ ಕಡೆಯಿಂದ ನಾನು , ಕೆ.ರಾಜು, ಸುರ್ಜೇವಾಲ ಅವರು ರಾಜ್ಯ ಸರ್ಕಾರದ ಜೊತೆ ದೀಪಾವಳಿ ನಂತರದ ಮೊದಲ ವಾರದಲ್ಲೇ ಸಭೆ ನಿಗಧಿ ಮಾಡಲಿದ್ದೇವೆ ಎಂದು ಬಿ.ಕೆ.ಹರಿಪ್ರಸಾದ್ ಭರವಸೆ ನೀಡಿದರು.

ಮಾತುಕತೆಯಲ್ಲಿ ಅಲೆಮಾರಿ ಸಮುದಾಯ ಮುಖಂಡರಾದ ಎ.ಎಸ್.ಪ್ರಭಾಕರ್, ಮಂಜುನಾಥ್ ದಾಯತ್ಕರ್, ಬಸವರಾಜ್ ನಾರಯಣಕರ್, ಚಾವಡಿ ಲೋಕೇಶ್, ಮಂಡ್ಯ ರಾಜಣ್ಣ, ಸಂದೀಪ್ ಕುಮಾರ್ ದಾಸರ್, ಶರಣಪ್ಪ ಚನ್ನದಾಸರ್, ಸಿಂದೋಳು ಸಮುದಾಯದ ಹನುಮಂತು, ಒಳ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಕರಿಯಪ್ಪ ಗುಡಿಮನಿ, ಕರ್ನಾಟಕ ಜನಶಕ್ತಿಯ ಅಧ್ಯಕ್ಷ ನೂರ್ ಶ್ರೀಧರ್ ಹಾಗೂ ಎದ್ದೇಳು ಕರ್ನಾಟಕದ ತಾರಾ ರಾವ್, ಕೆವಿಎಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.


Share It

You cannot copy content of this page