ಬೆಂಗಳೂರು: ನಗರದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶದಿಂದ, ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ನೇತೃತ್ವದಲ್ಲಿ ಬುಧವಾರ ಸರ್ವಜ್ಞನಗರ ವಿಭಾಗ ವ್ಯಾಪ್ತಿಯಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು.
ವೇಮನಾ ಸರ್ಕಲ್ (ಬಾಣಸವಾಡಿ) ಯಿಂದ ಐ.ಟಿ.ಸಿ ಬ್ರಿಡ್ಜ್ ವರೆಗೆ 2.7 ಕಿಲೋಮೀಟರ್ ವ್ಯಾಪ್ತಿಯಲ್ಲಿ ನಡೆದ ಈ ಅಭಿಯಾನದಲ್ಲಿ ಒಟ್ಟು 157 ಪೌರಕಾರ್ಮಿಕರು, 5 ಟ್ರ್ಯಾಕ್ಟರ್‌ಗಳು ಹಾಗೂ 1 ಜೆಸಿಬಿ ಯಂತ್ರಗಳನ್ನು ಬಳಸಿ ವ್ಯಾಪಕ ಹೂಳು ಮತ್ತು ಕಸ ತೆರವು ಕಾರ್ಯಗಳನ್ನು ಅಭಿಯಾನದ ಮೂಲಕ ತೆರವುಗೊಳಿಸಲಾಯಿತು. 6 ಟನ್ ತ್ಯಾಜ್ಯ ಹಾಗೂ 4.5 ಟನ್ ಕಟ್ಟಡ ಭಗ್ನಾವಶೇಷಗಳು ಸೇರಿ ಒಟ್ಟು 10.5 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ.
ನಗರದ ಸ್ವಚ್ಛತೆ ಕಾಪಾಡಲು ಪ್ರತಿದಿನವೂ ನಗರ ಪಾಲಿಕೆಯ ಸಿಬ್ಬಂದಿ ತಂಡ ಶ್ರಮಿಸುತ್ತಿದ್ದು, ಸಾರ್ವಜನಿಕರು ಸಹ ಈ ಪ್ರಯತ್ನಕ್ಕೆ ಕೈಜೋಡಿಸಬೇಕು ಎಂದು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ವಿನಂತಿಸಿದರು.
ಈ ಕಾರ್ಯದಲ್ಲಿ ಸರ್ವಜ್ಞನಗರ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು, ಕಿರಿಯ ಆರೋಗ್ಯ ಪರಿವೀಕ್ಷಕರು, ಪೌರಕಾರ್ಮಿಕರು ಹಾಗೂ ಮೇಲ್ವಿಚಾರಕರು ಸಕ್ರಿಯವಾಗಿ ಪಾಲ್ಗೊಂಡರು.