News

ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರದ ಮೇಲೆ ಒಟ್ಟಿಗೆ ಒತ್ತಡ ಹಾಕೋಣ: ಡಿ.ಕೆ. ಶಿವಕುಮಾರ್

Share It

ರಾಯಚೂರು: ಬಿಜೆಪಿ ನಾಯಕರಿಗೆ ಕರ್ನಾಟಕ ರಾಜ್ಯದ ಬಗ್ಗೆ ಕಾಳಜಿ ಹಾಗೂ ಬದ್ಧತೆ ಇದ್ದರೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒಟ್ಟಿಗೆ ಒತ್ತಡ ಹಾಕೋಣ ಬನ್ನಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸವಾಲೆಸೆದರು.

ಬುಧವಾರ ಮಂತ್ರಾಲಯದ ಪಂಚಮುಖಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮತ್ತು ಕಾರ್ಯಕರ್ತರ ಸಭೆ ಉದ್ದೇಶಿಸಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಮಾತನಾಡಿ ಬಿಜೆಪಿ ನಾಯಕರೇ, ನೀವು ನಿಗದಿ ಮಾಡುವ ಸಮಯಕ್ಕೆ ನಾನು ಬರುತ್ತೇನೆ. ಈಗಾಗಲೇ ಸುಮಾರು 10 ಬಾರಿ ಕೇಂದ್ರ ಸಚಿವರು ಹಾಗೂ ಪ್ರಧಾನಿಗಳ ಮುಂದೆ ಗೋಗರೆದಿದ್ದೇನೆ. ಆದರೂ ಅವರುಗಳು ಸಹಾಯ ಮಾಡಿಲ್ಲ. ಕೇಂದ್ರ ಬಜೆಟ್ ನಲ್ಲಿ ಘೋಷಿಸಿದ 5300 ಕೋಟಿ ಇದುವರೆಗೂ ಕೊಟ್ಟಿಲ್ಲ. ಹೀಗಾಗಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎನ್ನುವುದು ಸಾಬೀತಾಗಿದೆ ಎಂದು ಕಿಡಿಕಾರಿದರು.

ನಮ್ಮ ದೇಶದಲ್ಲಿ ರಾಮನ ತಂದೆ ದಶರಥ ಮಹಾರಾಜನಿಗಿಂತ ರಾಮನ ಭಂಟ ಹನುಮಂತನ ದೇವಾಲಯ ಎಲ್ಲಾ ಕಡೆ ಇವೆ. ಆಂಜನೇಯ ಸಮಾಜ ಸೇವಕ, ತ್ಯಾಗಿ. ಸಮಾಜದಲ್ಲಿ ಯಾರು ಸೇವೆ ಮಾಡುತ್ತಾರೋ ಸಮಾಜ ಅವರನ್ನು ಗುರುತಿಸುತ್ತದೆ. ಇದಕ್ಕೆ ಪಂಚಮುಖಿ ಆಂಜನೇಯನೇ ಸಾಕ್ಷಿ. ಹೀಗಾಗಿ ಜನರ ಮಧ್ಯೆ ನಿಷ್ಪಕ್ಷಪಾತವಾಗಿ, ಸೇವಾ ಮನೋಭಾವದಲ್ಲಿ ಕೆಲಸ ಮಾಡಿದರೆ ಸಮಾಜ ನಮ್ಮನ್ನು ಗುರುತುಸುತ್ತದೆ ಎಂದು ನೆರೆದಿದ್ದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದೆ. ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮಾಡಬೇಕು. ನಾನು ಎಂದಿಗೂ ಗುಂಪು ರಾಜಕಾರಣ ಮಾಡಿಲ್ಲ. ಮಾಡಿದ್ದರೆ ಏನೇನೋ ಮಾಡಬಹುದಿತ್ತು. ಕಾಂಗ್ರೆಸ್ ಪಕ್ಷ ಇದ್ದರೆ, ನಾವು ನೀವು ಇರುತ್ತೇವೆ. ದದ್ದಲ್ ಅವರು ಶಾಸಕರು ಹಾಗೂ ಅಧ್ಯಕ್ಷರಾಗಿದ್ದಾರೆ. ಬೋಸರಾಜು ಅವರು ಶಾಸಕರಲ್ಲದಿದ್ದರೂ ಅವರನ್ನು ಸಚಿವರಾನ್ನಾಗಿ ಮಾಡಲಾಗಿದೆ. ಆವರು 45 ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದಾರೆ. ತೆಲಂಗಾಣದಲ್ಲಿ ದುಡಿದಿದ್ದಾರೆ. ಹಗಲು ರಾತ್ರಿ ಪಕ್ಷ ಸಂಘಟನೆ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕಾರಣಕ್ಕೆ ಕಾರ್ಯಕರ್ತರಿಗೆ ಗ್ಯಾರಂಟಿ ಸಮಿತಿ ಸೇರಿದಂತೆ ಅನೇಕ ನಿಗಮ ಮಂಡಳಿಯಲ್ಲಿ ಅಧಿಕಾರ ನೀಡಲಾಗಿದೆ. ಯಾರು ನಿಸ್ವಾರ್ಥದಿಂದ ದುಡಿಯುತ್ತಾರೋ ಅವರನ್ನು ಪಕ್ಷ, ಸಮಾಜ ಗೌರವಿಸುತ್ತದೆ. ನಿಮಗೆ ಯಾವುದೇ ಹುದ್ದೆ ಸಿಕ್ಕಿರಲಿ ಅದನ್ನು ಸಣ್ಣದು, ಚಿಕ್ಕದು ಎಂದು ಭಾವಿಸಬೇಡಿ. ರಾಜಕಾರಣದಲ್ಲಿ ಯಾರು ಯಾವ ಮಟ್ಟಕ್ಕೆ ಬೇಕಾದರೂ ಬೆಳೆಯಬಹುದು ಎಂದು ಸಲಹೆ ನೀಡಿದರು.

ನೀವು ನಿಮ್ಮ ಬೂತ್ ಗಳಲ್ಲಿ ನಾಯಕತ್ವ ವಹಿಸಿಕೊಳ್ಳಬೇಕು. ಬಿ.ಎಲ್.ಎಗಳು ನಮಗೆ ಬೂತ್ ಮಟ್ಟದಲ್ಲಿ ಮುನ್ನಡೆ ತಂದುಕೊಡುತ್ತಾರೆ. ಹೀಗಾಗಿ ಆತನೇ ನಿಜವಾದ ನಾಯಕ. ನಿಮ್ಮ ಹೋರಾಟ ಬಿಜೆಪಿ ಹಾಗೂ ದಳದವರ ಮೇಲೆ ಇರಬೇಕೆ ಹೊರತು ಕಾಂಗ್ರೆಸಿಗರ ಮೇಲಲ್ಲ. ದ್ವೇಷ ಮುಖ್ಯ ಅಲ್ಲ, ಸಂಘಟನೆ ಮುಖ್ಯ. ನಾವು ನಿಮಗೆ ಎಂತಹ ಸಂಘಟನೆ ನೀಡಿದ್ದೀವಿ. ಈ ದೇಶದ ಇತಿಹಾಸದಲ್ಲಿ ಯಾವುದೇ ರಾಜ್ಯ ಸರ್ಕಾರ ಮಾಡದ ಕೆಲಸ ನಾವು ಮಾಡುತ್ತಿದ್ದೇವೆ. ಕರ್ನಾಟಕ ಚುನಾವಣೆಯ ಬಳಿಕ ನಮ್ಮ ಸರ್ಕಾರ ಐದು ಗ್ಯಾರಂಟಿ ನೀಡಿದ್ದು, ಬಿಜೆಪಿ ನಾಯಕರು ಇದನ್ನು ಟೀಕೆ ಮಾಡಿದರು. ಯಡಿಯೂರಪ್ಪ ಆವರು ಒಂದು ಅಕ್ಕಿ ಕಾಳು ಕಡಿಮೆಯಾದರೂ ನಾವು ಸಹಿಸುವುದಿಲ್ಲ ಎನ್ನುತ್ತಿದ್ದರು. ಆದರೆ ಮೊದಲ ಸಂಪುಟ ಸಭೆಯಲ್ಲಿ ಎಲ್ಲಾ ಯೋಜನೆ ಜಾರಿಗೆ ಅನುಮೋದನೆ ನೀಡಲಾಯಿತು ಎಂದು ಹೇಳಿದರು.

ಬಡವರ ಬದುಕಿನ ಬಗ್ಗೆ ಚಿಂತನೆ ನಡೆಸಿ, ಐದು ಗ್ಯಾರಂಟಿ ನೀಡಿದೆವು. ಈ ಯೋಜನೆಗಳಿಂದ ಸರ್ಕಾರ ದಿವಾಳಿಯಾಗುತ್ತದೆ ಎಂದರು. ನಂತರ ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿ ನಮ್ಮ ಯೋಜನೆ ನಕಲು ಮಾಡಿದ್ದಾರೆ. ಈಗ ಬಿಹಾರದಲ್ಲಿ ಮಹಿಳೆಯರಿಗೆ ಒಂದೇ ಬಾರಿಗೆ 10 ಸಾವಿರ ನೀಡುತ್ತಿದ್ದಾರೆ. ಆಮೂಲಕ ನಮ್ಮ ಗ್ಯಾರಂಟಿ ಯೋಜನೆಗಳನ್ನು ಆವರು ನಕಲು ಮಾಡುತ್ತಿದ್ದಾರೆ. ಆ ಮೂಲಕ ಜನರ ಬಳಿ ಹೋಗಲು ಶಕ್ತಿ ತುಂಬಿದ್ದೇವೆ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ನೀರಾವರಿ ಯೋಜನೆ ಮೂಲಕ ನಿಮಗೆ ಸಹಾಯ ಮಾಡಲು ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಅದಕ್ಕೆ ಪ್ರತಿ ವರ್ಷ 20 ಸಾವಿರ ಕೋಟಿ ನೀಡುತ್ತಿದ್ದೇವೆ. 53 ಸಾವಿರ ಕೋಟಿ ಗ್ಯಾರಂಟಿ ಯೋಜನೆಗೆ ವೆಚ್ಚ ಮಾಡಿದ್ದೇವೆ. ಇನ್ನು ಬೇರೆ ಇಲಾಖೆಗಳ ಕಲ್ಯಾಣ ಯೋಜನೆಗಳು ಸೇರಿಸಿದರೆ ಪ್ರತಿ ವರ್ಷ ಕಾಂಗ್ರೆಸ್ ಸ ರ್ಕಾರ 1 ಲಕ್ಷ ಕೋಟಿ ಹಣವನ್ನು ಜನರ ಜೇಬಿಗೆ ಹಾಕುತ್ತಿದೆ. ಆಮೂಲಕ ನಿಮಗೆ ಸರ್ಕಾರ ಶಕ್ತಿ ನೀಡಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಬ್ಯಾಂಕ್ ರಾಷ್ಟ್ರೀಕರಣ, ಆಹಾರ ಭದ್ರತಾ ಕಾಯ್ದೆ, ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ, ಪಿಂಚಣಿ ವ್ಯವಸ್ಥೆ, ನರೇಗಾ ನೀಡಿದೆವು ಬಡವರಿಗೆ ಸಹಾಯ ಮಾಡುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ತಿಳಿಸಿದರು.

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ನಮಗೆ ಅಧಿಕಾರ ಸಿಕ್ಕ ಕಾರಣಕ್ಕೆ ನಾವು ಐದು ಗ್ಯಾರಂಟಿ ನೀಡಿದ್ದೇವೆ. ಕಳೆದ ವರ್ಷ ಟಿಬಿ ಆಣೆಕಟ್ಟು ಗೇಟ್ ಮುರಿದಾಗ ವಿರೋಧ ಪಕ್ಷಗಳ ನಾಯಕರು ಟೀಕೆ ಮಾಡಿದರು. ನಾವು ಒಂದೇ ವಾರದಲ್ಲಿ ಹಗಲಿರುಳು ಶ್ರಮಿಸಿ ಗೇಟ್ ದುರಸ್ಥಿ ಮಾಡಿದೆವು. ಈಗ ಎಲ್ಲಾ ಗೇಟ್ ಗಳ ಬದಲಾವಣೆಗೆ ಆದೇಶ ನೀಡಿದ್ದೇವೆ. ಈ ಆಣೆಕಟ್ಟು ವಿಚಾರವಾಗಿ ಆಂಧ್ರ ಸಿಎಂ ಜೊತೆ ಚರ್ಚೆ ಮಾಡಲು ಮೂರು ಬಾರಿ ಪ್ರಯತ್ನ ಮಾಡಲಾಗಿದೆ. ಆದರೆ ಅವರು ಸಮಯ ನೀಡಿಲ್ಲ. ಈ ಅಣೆಕಟ್ಟಿನಲ್ಲಿ ಹೂಳು ತುಂಬಿರುವ ಪರಿಣಾಮ 30 ಟಿಎಂಸಿ ನೀರು ವ್ಯರ್ಥವಾಗುತ್ತಿದೆ. ಇದನ್ನು ಬಳಸಿಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ಆಂಧ್ರ ಪ್ರದೇಶ ಸಹಕಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕರ್ತರಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇರಬಾರದು. ನೀವೆಲ್ಲರೂ ಒಗ್ಗಟ್ಟಿನಿಂದ ಸಂಘಟನೆ ಮಾಡಬೇಕು. ಯಾವ ಗುಂಪು ಇರಬಾರದು. ಇಲ್ಲಿ ಕೇವಲ ಒಂದೇ ಗುಂಪು ಅದು ಕಾಂಗ್ರೆಸ್ ಗುಂಪು. ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಇರಬೇಕು. 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಅದಕ್ಕೆ ನೀವು ಸಿದ್ಧತೆ ಮಾಡಿಕೊಳ್ಳಬೇಕು. ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಅನೇಕ ಜನರು ಪ್ರಯತ್ನಿಸುತ್ತಿದ್ದಾರೆ. ಹಳ್ಳಿಗಳಲ್ಲೂ ಪಕ್ಷ ಸೇರಲು ಜನ ಮುಂದೆ ಬರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವದ ಮೇಲೆ ನಂಬಿಕೆ ಇಟ್ಟು ಬರುವ ಎಲ್ಲರನ್ನು ಸೇರಿಸಿಕೊಳ್ಳಿ ಎಂದು ಹೇಳಿದರು.

ರಾಹುಲ್ ಗಾಂಧಿ ಆವರು ಭಾರತ ಜೋಡೋ ಯಾತ್ರೆ ಮಾಡಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತಿಲ್ಲ. ರಾಹುಲ್ ಗಾಂಧಿ ನಮಗೆ ಅಷ್ಟು ಶಕ್ತಿ ನೀಡಿದ್ದಾರೆ. ಸೋನಿಯಾ ಗಾಂಧಿ ಆವರು ಎರಡು ಬಾರಿ ಪ್ರಧಾನಮಂತ್ರಿ ಹುದ್ದೆ ತ್ಯಾಗ ಮಾಡಿದ್ದಾರೆ. ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧಿ ಆವರು ಕೂತ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಕೂತಿದ್ದಾರೆ. ಆವರು ಈ ಭಾಗಕ್ಕೆ ಆರ್ಟಿಕಲ್ 371ಜೆ ಕೊಟ್ಟಿದ್ದಾರೆ. ಆಡ್ವಾಣಿ ಇದು ಸಾಧ್ಯವಿಲ್ಲ ಎಂದು ಹೇಳಿದ್ದನ್ನು ಖರ್ಗೆ ಮಾಡಿ ತೋರಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳು ಕೇವಲ ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರವಲ್ಲ, ಎಲ್ಲಾ ಪಕ್ಷದವರಿಗೂ ತಲುಪುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತಿ ವರ್ಷ ಹೆಚ್ಚುವಾರಿಯಾಗಿ 5 ಸಾವಿರ ಕೋಟಿ ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು.


Share It

You cannot copy content of this page