ಬೆಂಗಳೂರು: ಸಂಕೀರ್ಣವಾದ ಬದುಕು ಮತ್ತು ಸಾಮಾಜಿಕ ಸವಾಲುಗಳ ಮಧ್ಯೆ ಸಾಮಾಜಿಕ ಚರಿತ್ರೆಯನ್ಮು ರೂಪಿಸುವಲ್ಲಿ ಪ್ರಕಾಶಕರ ಪಾತ್ರ ಬಹುಮುಖ್ಯವಾದುದು ಎಂದು ಬಹುಮುಖಿ ಚಿಂತಕ ಡಾ ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ಪ್ರಕಾಶಕರ ಸಂಘದ ನೂತನ ಆಡಳಿತ ಮಂಡಳಿ ರೂಪಿಸಿರುವ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ತತ್ವಜ್ಞಾನಿ ನೀಶೆ ಹೇಳುವ ಹಾಗೆ ನಮ್ಮನ್ನು ಪ್ರಭಾವಿಸುವ ಸಂಗತಿಗಳಲ್ಲಿ ರಾಜಕೀಯ, ಧರ್ಮ, ಸಾಹಿತ್ಯ ಮುಖ್ಯವಾದವು. ಇವತ್ತು ಯಾವುದು ಧರ್ಮ ಮತ್ತು ಯಾವುದು ರಾಜಕೀಯ ಎನ್ನುವ ಗುರುತು ಸಿಗದ ಹಾಗಾಗಿದೆ. ಆದರೆ ಸಾಹಿತ್ಯ ಮಾತ್ರ ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಂಡಿದೆ. ಹೀಗಾಗಿ ನಮ್ಮ ಸಾಂಸ್ಕೃತಿಕ ಚಹರೆಗಳು ಉಳಿದುಕೊಳ್ಳಲು ಸಾಹಿತ್ಯ ಬಹುಮುಖ್ಯವಾದದ್ದು. ಸದ್ಯದ ಸನ್ನಿವೇಶದಲ್ಲಿ ರಾಜಕೀಯ ಶಕ್ತಿಗಳು ಸ್ವಾಯತ್ತ ಸಂಸ್ಥೆಗಳನ್ಮು ನಿಷ್ಕ್ರಿಯಗೊಳಿಸುವ ಅಥವಾ ನಾಶಮಾಡುವ ಪ್ರಯತ್ನಗಳನ್ನು ಮಾಡುತ್ತಿವೆ. ಇದಕ್ಕೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಒಂದು ಉದಾಹರಣೆ ಎಂದರು.
ನಮ್ಮ ಪರಂಪರೆಯಲ್ಲಿ ಕವಿರಾಜಮಾರ್ಗ ರೂಪಿಸಿದ ಕವಿ ಮತ್ತು ರಾಜ ಕೂಡಿ ನಿರ್ಮಿಸಿದ ಮಾರ್ಗ ಮಾದರಿಯಾದುದು ಅಂಥ ಮಾರ್ಗವನ್ನು ರೂಪಿಸುವುದನ್ನು ಪ್ರಕಾಶಕರು ಮಾಡುತ್ತಿದ್ದಾರೆ. ಕೋಟ್ಯಂತರ ರೂಪಾಯಿಗಳ ಬಜೆಟ್ ಇರುವ ಸರ್ಕಾರಕ್ಕೆ ಪುಸ್ತಕ ಸಂಸ್ಕೃತಿ ಬೆಳೆಸಲು ವರ್ಷಕ್ಕೆ ಹತ್ತು ಕೋಟಿ ದೊಡ್ಡದಲ್ಲ. ಸರ್ಕಾರದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ಅವರು ಮನಸ್ಸು ಮಾಡಿದರೆ ಪ್ರಕಾಶಕರ ಮತ್ತು ಲೇಖಕರ ಸಮಸ್ಯೆಯನ್ನು ಬಗೆಹರಿಸಬಹುದು. ನಾವೆಲ್ಲರೂ ಕಟ್ಟುವ ಗ್ರಂಥಾಲಯ ಕರದಲ್ಲಿಯೆ ಪುಸ್ತಕ ಸಂಸ್ಕೃತಿಯನ್ನು ವ್ಯವಸ್ಥಿತಗೊಳಿಸಬಹುದು. ಅಧಿಕಾರ ಸ್ವೀಕಾರಕ್ಕಿಂತ ಮುಂಚೆ ಸಿದ್ಧರಾಮಯ್ಯ ಅವರು ತೆರಳಿದ್ದು ಸಾಹಿತಿಗಳ ಮನೆಗೆ ಎಂದು ಕೇಳಿದ್ದೇನೆ. ಸಾಹಿತ್ಯದ ಒಲವಿರುವ ಮುಖ್ಯಮಂತ್ರಿಗಳು ಈ ಕಡೆ ಮನಸ್ಸು ಮಾಡಬೇಕು ಎಂದು ಮನವಿ ಮಾಡಿದರು.
ಎಲ್ಲರೂ ಹಿರಿಯರನ್ನು ಕಿವಿ ಹಿಂಡಿ ತಿದ್ದುವವರು ಎನ್ನುತ್ತಾರೆ ಆದರೆ ಇವತ್ತು ಕಿವಿಹಿಂಡಿ ಕೆಲಸಮಾಡಿಸಬೇಕಾದ ಜವಾಬ್ದಾರಿ ಕಿರಿಯರ ಮೇಲಿದೆ. ಯಾಕೆಂದರೆ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ತುರ್ತು ಅವರಿಗಿದೆ. ಕರ್ನಾಟಕದಲ್ಲಿ ಅನೇಕ ಪ್ರಕಾಶನ ಸಂಸ್ಥೆಗಳು ಒಳ್ಳೆಯ ಮನಸ್ಸುಗಳನ್ನು ವಿಚಾರಗಳನ್ನು ಕಾಪಿಟ್ಟಿವೆ. ಪ್ರಕಾಶಕರು ಲೇಖಕರನ್ನು ಮುನ್ನಲೆಗೆ ತಂದು ಹಿನ್ನೆಲೆಯಲ್ಲಿ ಉಳಿದಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ಚರಿತ್ರೆ ಪ್ರಕಾಶಕರ ಚರಿತ್ರೆಯಿಲ್ಲದೆ ಅಪೂರ್ಣವಾಗಿದೆ. ಡಾ ವಸುಂಧರಾ ಭೂಪತಿಯವರು ಅಧ್ಯಕ್ಷರಾಗಿರುವ ಈ ಸಂಸ್ಥೆ ಮೊದಲು ಪ್ರಕಾಶಕರನ್ನು ಒಳಗೊಂಡ ಸಾಂಸ್ಕೃತಿಕ ಚರಿತ್ರೆಯನ್ನು ದಾಖಲುಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಪ್ರಕಾಶಕರ ಸಂಘದ ಚಿನ್ನದಹಬ್ಬದ ಲಾಂಚನ ಲೋಕಾರ್ಪಣೆಗೊಳಿಸಿ ಮಾತನಾಡಿದ ಹೊಸತು ಪತ್ರಿಕೆಯ ಸಂಪಾದಕ ಸಿದ್ಧನಗೌಡ ಪಾಟೀಲ್ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೊಂದಿರುವ ಶಾಖೆಗಳಿಗಿಂತ ಹೆಚ್ಚು ಶಾಖೆಗಳನ್ನು ಕರ್ನಾಟಕ ಪ್ರಕಾಶಕರ ಸಂಘ ಹೊಂದಲು ಸಾಧ್ಯವಿದೆ. ಯಾಕೆಂದರೆ ಇದರಲ್ಲಿ ಸಾಹಿತಿಗಳು ಪ್ರಕಾಶಕರು ಓದುಗರು ಮುದ್ರಕರ ಸಮುದಾಯವಿದೆ. ಅವರೆಲ್ಲರನ್ನು ಒಟ್ಟಿಗೆ ಬೆಸೆಯುವ ಸಮಸಮಾಜ ನಿರ್ಮಾಣ ಮಾಡುವ ಕೆಲಸವನ್ನು ಪ್ರಕಾಶಕರ ಸಂಘ ಮಾಡಬೇಕಿದೆ ಎಂದರು.
ಹಿಂದೆ ಕನ್ನಡದ ಮೊದಲ ಕಾದಂಬರಿಕಾರರು ವಾಗ್ದೇವಿಯಂಥ ಕಾದಂಬರಿಯಲ್ಲಿ ಮಠಮಾನ್ಯಗಳ ಧರ್ಮದ ಅನಾಚರಗಳನ್ನು ಕುರಿತು ಬರೆದಿದ್ದರು. ಬಸವರಾಜಕಟ್ಟಿಮನಿಯಂಥವರು ಜರತ್ಕಾರಿಜಗದ್ಗುರುದಂಥ ಕಾದಂಬರಿಗಳನ್ನು ಬರೆದರು. ಆಗ ಪ್ರಭುತ್ವ ಸಹಿಸಿಕೊಳ್ಳುವ ಶಕ್ತಿಹೊಂದಿತ್ತು. ಇನ್ನು ಮುಂದೆ ಇಂಥ ಸಹಿಷ್ಣತೆಯ ವಾತಾವರಣ ನಿರೀಕ್ಷಿಸುವುದು ಕಷ್ಟ ಎಂದರು.
ಈಚೆಗೆ ಅನೇಕ ಹೊಸಲೇಖಕರು ಪ್ರಕಾಶಕರು ಬರುತ್ತಿದ್ದಾರೆ. ಹಾಗೆ ನೋಡಿದರೆ ಕನ್ನಡ ಭಾಷೆ ಮತ್ತು ವಿಶಿಷ್ಟ ಶೈಲಿಯನ್ನು ತಿದ್ದಿ ತೀಡಿ ಬೆಳೆಸುತ್ತಿರುವವರು ಪ್ರಕಾಶಕರು ಮತ್ತು ಮುದ್ರಕರಾಗಿದ್ದಾರೆ. ಹೀಗಾಗಿ ಸರ್ಕಾರಗಳು ಇಂಥ ಸಾಮೂಹಿಕ ಪ್ರಯತ್ನಗಳನ್ನು ಮುಕ್ತವಾಗಿ ಬೆಂಬಲಿಸಬೇಕು ಪ್ರೋತ್ಸಾಹಿಸಬೇಕು ಎಂಬ ಕಳಕಳಿ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಿಜಯ ಕರ್ನಾಟಕ ಪುರವಣಿ ಸಂಪಾದಕಿ ವಿದ್ಯಾರಶ್ಮಿಪೆಲತ್ತಡ್ಕ ಮಾತನಾಡಿ, ಪ್ರಕಾಶಕರು ಮತ್ತು ಪತ್ರಕರ್ತರು ಈ ಸಮಾಜದಲ್ಲಿ ಪಾಪದ ಜೀವಿಗಳಾಗಿ ಕಾಣುತ್ತಾರೆ. ಪ್ರಶಸ್ತಿ ಬಂದರೆ ಲೇಖಕರಿಗೆ ಬರುತ್ತದೆ. ಆದರೆ ಪ್ರಕಾಶಕರು ಯಾವುದೇ ಫಲಾಪೇಕ್ಷೆ ಇಲ್ಲದೆ ಪುಸ್ತಕದ ಹೂರಣವನ್ನು ತಿದ್ದಿತೀಡಿ ಆಕಾರನೀಡಿ ಹೊತ್ತು ಮಾರುತ್ತಾರೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತಾರೆ ಇಂಥ ಪ್ರಯತ್ನಗಳನ್ನು ಬೆಂಬಲಿಸಬೇಕಿದೆ. ಇವತ್ತು ಫೇಸ್ ಬುಕ್ ಮಧ್ಯವಯಸ್ಕರ ಮಾಧ್ಯಮವಾಗಿದೆ. ಇನ್ಸ್ಟಾಗ್ರಾಮ್ ಯುವಜನರ ಮೆಚ್ಚಿನ ತಾಣವಾಗಿದೆ. ಇಂಥ ವೇದಿಕೆಗಳಲ್ಲಿ ಪುಸ್ತಕಗಳನ್ನು ಪರಿಚಯಿಸುವ ಪ್ರಯತ್ನವನ್ನು ಪ್ರಕಾಶಕರು ಮಾಡಬೇಕಿದೆ.ಪತ್ರಕರ್ತರು ಮಾಧ್ಯಮ ಗೋಷ್ಠಿಗಳಿಗಿಂತ ಭಿನ್ನವಾದ ಸ್ಟೋರಿಗಳನ್ನು ಮಾಡಿ ಸಮಾಜಮುಖಿ ಚಟುವಟಿಕೆಗಳಿಗೆ ಪಾತ್ರರಾಗುತ್ತಾರೋ ಹಾಗೆಯೇ ಪ್ರಕಾಶಕರು ಕೂಡ ಹೊಸವಿಷಯಗಳನ್ನು ಕೊಟ್ಟು ಬರೆಸುವ ಅನುವಾದಿಸುವ ಮೂಲಕ ಹೊಸ ಕಾಣಿಕೆಗಳನ್ನು ಕೊಡಬಹುದಾಗಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಮಾತನಾಡಿ ನಾವು ಕೊಡುವ ಗ್ರಂಥಾಲಯ ಕರವನ್ನು ನೇರವಾಗಿ ಗ್ರಂಥಾಲಯ ಇಲಾಖೆಗೆ ಪಾವತಿಯಾಗುವಂತೆ ಮಾಡಿದರೆ ಯಾವ ಅನುದಾನವಿಲ್ಲದೆ ಗ್ರಂಥಾಲಯ ಇಲಾಖೆ ಪುಸ್ತಕಗಳನ್ನು ಖರೀದಿಸಬಹುದು. ನಮ್ಮ ದಿನನಿತ್ಯದ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಪುಟವಾರು ಬೆಲೆ ನಿಗದಿಮಾಡಿ ಎಂಟು ವರ್ಷಗಳಾಗಿವೆ ಪರಿಷ್ಕಾರವನ್ನೇ ಮಾಡಿಲ್ಲ ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.

