ಲೇಖನ: ಎಸ್.ಎಚ್. ಮಿಟ್ಟಲಕೋಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಧಾರವಾಡ.
ಪೊಲೀಸರು ಜನ ಸ್ನೇಹಿಯಾಗಿರಬೇಕು ಎನ್ನುವ ಬಗ್ಗೆ, ಈವರೆಗೆ ಬರೀ ಮಾತುಗಳಲ್ಲಿ ಹೇಳಲಾಗುತ್ತಿತ್ತು. ಈಗ ಇಂದಿನ ಪೊಲೀಸ್ ಮಹಾನಿರ್ದೇಶಕರು ಪೊಲೀಸರು ಜನರ ಜೊತೆ ಸೌಜನ್ಯದಿಂದ ವರ್ತಿಸಬೇಕು ಎಂದು ಒಂದು ಸುತ್ತೋಲೆ ಹೊರಡಿಸಿ ಜನರ ಪ್ರಶಂಸೆಗೆ ಕಾರಣ ಆಗಿದ್ದಾರೆ. ಇದು ಒಂದು ಉತ್ತಮ ಹೆಜ್ಜೆ.
ಪೊಲೀಸ್ ಭಾಷೆ ಎಂದು ಯಾವದೇ ಅಧಿಕೃತ ಭಾಷೆ ಇಲ್ಲ. ಇನ್ನು ಪೊಲೀಸು ವರ್ತನೆ ಎಂದರೆ ಅದು ಜನರಿಗೆ ಗೊತ್ತು. ಇದರಿಂದ ಪೊಲೀಸ್ ಭಾಷೆ ಎಂದರೆ ಠಾಣೆಗೆ ಬಂದವರು ಯಾರೇ ಇರಲಿ ಅವರು ದೂರುದಾರ ಅಥವಾ ಆರೋಪಿ ಯಾರೇ ಇದ್ದರೂ ಅವರಿಗೆ ಕೆಟ್ಟ ಕೆಟ್ಟ ಪದ ಬಳಸುವದು. ಇದು ಪೊಲೀಸು ಭಾಷೆ ಮತ್ತು ವರ್ತನೆ.
ಯಾರೇ ಅಪರಾಧ ಮಾಡಿದರೆ ಅವರ ವಿರುದ್ಧ ಪೊಲೀಸರಿಗೆ ದೂರು ಕೊಟ್ಟರೇ ಪೊಲೀಸರು ಒದ್ದು ಒಳಗೆ ಹಾಕುತ್ತಾರೆ ಎನ್ನುವ ಮಾತನ್ನು ಸಾಮಾನ್ಯವಾಗಿ ಬಳಸುತ್ತಾರೆ. ಇದರ ಅರ್ಥ ಪೊಲೀಸರು ಬರೀ ಒದೆಯವವುದನ್ನು ಮಾಡುತ್ತಾರೆ ಎನ್ನುವ ಭಾವನೆ ಜನ ಮಾನಸದಲ್ಲಿ ಗಟ್ಟಿಯಾಗಿ ನೆಲೆ ನಿಂತಿದೆ.
ಪೊಲೀಸರು ಜನ ಸ್ನೇಹಿಯಾಗಿರಬೇಕು ಮತ್ತು ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಹಲವಾರು ಬಾರಿ ಮಂತ್ರಿಗಳು ಭಾಷಣ ಮಾಡುತ್ತಾ ಬಂದಿದ್ದಾರೆ. ಆದರೆ ಅದರ ಪರಿಣಾಮ ಶೂನ್ಯ. ಪೊಲೀಸರು ಜನ ಸ್ನೇಹಿಯಾಗಿರಬೇಕು ಮತ್ತು ಅಪರಾಧಿಗಳಿಗೆ ಸಿಂಹ ಸ್ವಪ್ನ ಆಗಿರಬೇಕು. ಕೆಲವು ಅಧಿಕಾರಿಗಳನ್ನು ಸಿಂಗಂ ಎಂದು ಬಿಂಬಿಸಿದ್ದಾರೆ. ಮುಂದೆ ಅವರು ವಿವಾದಕ್ಕೆ ಒಳಗಾಗಿದ್ದು ಮರೆಯಲಾಗದು.
ಪೊಲೀಸರು ಜನಸ್ನೇಹಿಯಾಗಿರಬೇಕು ಆದರೆ ಜನರು ಕೂಡ ಪೊಲೀಸರ ಜೊತೆ ಸೌಜನ್ಯದಿಂದ ವರ್ತಿಸಬೇಕು. ಸಾಮಾನ್ಯವಾಗಿ ಜನರು ಪೋಲಿಸರ ಜೊತೆ ಹೆದರಿಕೆಯಿಂದದಲೇ ಮಾತನಾಡಿಸುತ್ತಾರೆ. ಆದರೆ ಪೊಲೀಸರು ಸಾಮಾನ್ಯವಾಗಿ ತಮ್ಮ ಪೊಲೀಸ್ ಗತ್ತಿನಲ್ಲಿ ಮಾತಾಡುತ್ತಾರೆ. ಇದನ್ನು ಇಂದಿನ ಪೋಲಿಸ್ ಮಹಾನಿರ್ದೇಶಕರ ಸುತ್ತೋಲೆ ಎಷ್ಟು ಸುಧಾರಿಸುತ್ತದೆ ಎನ್ನುವುದನ್ನು ಕಾಲ ನಿರ್ಧರಿಸುತ್ತದೆ.
ಇನ್ನು ಪೊಲೀಸರ ನೈತಿಕತೆ ಕುಂದಿಸುವ ರಾಜಕಾರಣಿಗಳ ವರ್ತನೆ ಬದಲಾಗಬೇಕು. ಪೊಲೀಸರು ಸಾಮಾನ್ಯರ ಮೇಲೆ ಹುಲಿಯಂತೆ ಎರಗುತ್ತಾರೆ. ಅದರೆ ರಾಜಕಾರಣಿಗಳ ಮುಂದೆ ಇಲಿಯಂತೆ ಆಗುತ್ತಾರೆ. ಇದಕ್ಕೆ ಕಾರಣ ರಾಜಕಾರಣಿಗಳು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಪೊಲೀಸರಿಗೆ ತೊಂದರೆ ಕೊಡುತ್ತಾರೆ ಅನ್ನುವ ಭಯ. ವಿಪರ್ಯಾಸ ಎಂದರೆ ಇದೇ ಪೊಲೀಸರು ಅಧಿಕಾರ ದುರುಪಯೋಗ ಮಾಡಿಕೊಂಡು ಜನರಿಗೆ ತೊಂದರೆ ಕೊಡುತ್ತಾರೆ.
ಸಾಮಾನ್ಯರು ಪೊಲೀಸರ ಅಕ್ರಮ ಕಾರ್ಯ ಪ್ರಶ್ನಿದರೆ ಅವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ಸುಳ್ಳು ಕೇಸು ಹಾಕುತ್ತಾರೆ ಎನ್ನುವ ಭಯ ಸಾಮಾನ್ಯ ಜನರಿಗೆ ಇರುತ್ತದೆ. ಇಲ್ಲಿ ಗಮನಿಸ ಬೇಕಾದ ಸಂಗತಿ ಎಂದರೆ ಪೊಲೀಸರಿಗೆ ಸುಳ್ಳು ಕೇಸು ಹಾಕುವದು ಎಷ್ಟು ಸುಲಭವೋ ಅಷ್ಟು ಸುಲಭ ಜನರಿಗೆ ತಾವು ತಪ್ಪು ಮಾಡಿಲ್ಲ ಎಂದು ರುಜುವಾತು ಪಡಿಸಲು ಆಗುವದಿಲ್ಲ.
ರಾಜಕಾರಣಿಗಳ ವರ್ತನೆ ಈ ಕೆಳಗಿನ ಘಟನೆಗಳಿಂದ ನೋಡೋಣ.
- ಮುಖ್ಯ ಮಂತ್ರಿ ಒಬ್ಬ ಎಸ್ ಪಿ ಹುದ್ದೆಯ ಅಧಿಕಾರಿಗೆ ವೇದಿಕೆಯಲ್ಲಿ ಕಪಾಳಕ್ಕೆ ಹೊಡೆಯಲು ಹೋಗಿದ್ದು.
- ಒಬ್ಬ ಕೇಂದ್ರ ಸಚಿವರು ತಮ್ಮ ಪಕ್ಷದ ಕಾರ್ಯಕರ್ತರ ಮುಂದೆ ಒಬ್ಬ ಪೊಲೀಸ್ ನಿರೀಕ್ಷರಿಗೆ ಬಾಯಿಗೆ ಬಂದಂತೆ ಮಾತಾಡಿ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು.
- ಒಬ್ಬ ಸಚಿವರು ಕೆ.ಎಂ.ಸಿ.ವೈದ್ಯರ ಮೇಲೆ ಹಲ್ಲೆ ಮಾಡಿದ್ದು.
ಈ ಯಾವ ಘಟನೆ ಬಗ್ಗೆ ಯಾವದೇ ಪ್ರಕರಣ ದಾಖಲಿಸಿಲ್ಲ. ಈ ಘಟನೆ ಪೊಲೀಸರ ನೈತಿಕತೆ ಕುಂದಿಸುವದಿಲ್ಲವೆ? ಇದೆ ಕೆಲಸ ಸಾಮಾನ್ಯ ಜನ ಮಾಡಿದ್ದರೇ ಆಗ ಪೊಲೀಸು ಭಾಷೆ ಮತ್ತು ವರ್ತನೆಯ ವಿರಾಟ್ ರೂಪದ ದರ್ಶನ ಆಗುತ್ತಿತ್ತು.
ಆಳುವ ಪಕ್ಷದವರು ಪೊಲೀಸರನ್ನು ಸಮರ್ಥಿಸುತ್ತಾರೆ ಮತ್ತು ವಿರೋಧಿ ಪಕ್ಷವರು ಟೀಕಿಸುತ್ತಾರೆ. ಇದು ಪಕ್ಷಗಳ ಸರ್ಕಾರ ಬದಲಾವಣೆ ಆದಾಗ ತಿರುವು ಮುರುವು ಆಗುತ್ತದೆ. ಹೀಗಾಗಿ ಪೊಲೀಸರು ತಮ್ಮ ಸೇವಾ ದೃಷ್ಟಿಯಿಂದ ಅಳುವ ಪಕ್ಷದ ಅಥವಾ ವಿರೋಧ ಪಕ್ಷ ದ ರಾಜಕಾರಣಿಗಳನ್ನು ಎದುರು ಹಾಕಿಕೊಳ್ಳುವದಿಲ್ಲ.
ಪ್ರಜಾಪ್ರಭುತ್ವದ ವಿಡಂಬನೆ ನೋಡಿ. ಚುನಾಯಿಸುವ ಮತದಾರ ರಾಜ. ಆದರೆ ಅವನನ್ನು ಪೊಲೀಸರು ಯಾವುದೇ ಲೆಕ್ಕಕ್ಕೆ ಇಟ್ಟಿಲ್ಲ. ಮತ ಭಿಕ್ಷೆ ಬೇಡಿ ನೀವೇ ನಮ್ಮ ದೇವರು ಎಂದು ಗೆದ್ದು ಬಂದು ಮತದಾರರನ್ನು ನಿರ್ಲಕ್ಷಿಸುವ ಚುನಾಯಿತರಿಗೆ ಪೊಲೀಸರು ಹೆದರುತ್ತಾರೆ.
ಈ ಮೇಲಿನ ಎಲ್ಲಾ ವಿಶ್ಲೇಷಣೆ ಗಮನಿಸಿದಾಗ ಪ್ರಜಾಪ್ರಭುತ್ವದಲ್ಲಿ ಪೊಲೀಸರು ಶಾಸನ ಪಾಲಿಸಬೇಕು ಶಾಸಕರನ್ನು ಅಲ್ಲ. ಇದು ನಿಜವಾದ ಪ್ರಜಾಪ್ರಭುತ್ವದ ಉದ್ದೇಶ
ಪೊಲೀಸರು ಸಾರ್ವಜನಿಕರ ಜೊತೆ ಸೌಜನ್ಯದಿoದ ವರ್ತಿಸ ಬೇಕು ಸರಿ. ಆದರೆ ಜನ ಮತ್ತು ರಾಜಕಾರಣಿಗಳು ಪೊಲೀಸರ ಜೊತೆ ಸೌಜನ್ಯದಿಂದ ಮತ್ತು ಸಹಕಾರದಿಂದ ವರ್ತಿಸಬೇಕು. ದೂರು ಕೊಡಲು ಹೋದವರ ಮೇಲೆ ಸುಳ್ಳು ಕೇಸು ಹಾಕಿ ತೊಂದರೆ ಕೊಟ್ಟ ಘಟನೆಗಳು ಪೊಲೀಸ್ ಠಾಣೆಗೆ ಅಗತ್ಯ ಇಲ್ಲದ ಹೊರತು ಜನ ಪೊಲೀಸ್ ಠಾಣೆಗೆ ಹೋಗಲು ಹಿಂದೇಟು ಹಾಕುತ್ತಾರೆ. ಇದರಿಂದ ಪೊಲೀಸರಿಗೆ ಜನರ ಸಹಕಾರ ಸಿಗುವುದಿಲ್ಲ. ಇಂದು ಪೊಲೀಸ್ ಮಹಾನಿರ್ದೇಶಕರು ಪೊಲೀಸರು ಜನರ ಜೊತೆ ಸೌಜನ್ಯದಿoದ ವರ್ತಿಸಬೇಕು ಎಂದು ನೀಡಿದ ಸುತ್ತೋಲೆ ಪೊಲೀಸ್ ವ್ಯವಸ್ಥೆಯಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆ ತರಬಹುದು. ಇದು ಕಷ್ಟ ಸಾಧ್ಯವಾದರೂ ಒಂದು ಇತ್ಯಾತ್ಮಕವಾಗಿ ವಿಚಾರ ಮಾಡಿ ಬದಲಾವಣೆ ಬರಲಿ ಎಂದು ಆಶೆ ಮಾಡೋಣ.

