ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸದೆ ಮದ್ಯ ವ್ಯಸನಕ್ಕೆ ಒಳಗಾದ ಪತಿಯ ನಡವಳಿಕೆ ಕೂಡ ಹಿಂದೂ ವಿವಾಹ ಕಾಯ್ದೆಯ ಅಡಿ ವಿಚ್ಛೇದನಕ್ಕೆ ಕಾರಣವಾಗುವ ‘ಕ್ರೌರ್ಯ’ ವ್ಯಾಪ್ತಿಯಲ್ಲಿ ಪರಿಗಣಿಸಲ್ಪಡುತ್ತದೆ ಎಂದು ಛತ್ತೀಸ್ಗಢ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇದೇ ಕಾರಣಕ್ಕಾಗಿ ವಿಚ್ಚೇದನ ಕೋರಿ ಪತ್ನಿ ಸಲ್ಲಿಸಿದ್ದ ಮನವಿ ಪುರಸ್ಕರಿಸಿರುವ ಹೈಕೋರ್ಟ್, ವಿಚ್ಚೇದಿತ ಪತ್ನಿಗೆ ಮಾಸಿಕ 15 ಸಾವಿರ ರೂಪಾಯಿ ಜೀವನಾಂಶ ಪಾವತಿಸುವಂತೆ ಪತಿಗೆ ಆದೇಶಿಸಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಕುಟುಂಬದ ಜವಾಬ್ದಾರಿ ನಿಭಾಯಿಸದೆ ಅತಿಯಾದ ಮದ್ಯಪಾನ ಮಾಡುವ ಪತಿ ಮನೆಯ ಸ್ಥಿತಿಯನ್ನು ಹದಗೆಡಿಸುತ್ತಾನೆ. ಪತಿಯ ಈ ನಡವಳಿಕೆಯು ಸಹಜವಾಗಿಯೇ ಪತ್ನಿ ಹಾಗೂ ಮಕ್ಕಳನ್ನು ಹಿಂಸೆಗೊಳಪಡಿಸುತ್ತದೆ.
ದಾಂಪತ್ಯದಿಂದ ಮಕ್ಕಳು ಜನಿಸಿದಾಗ ಪತಿಯ ಹೊಣೆಗಾರಿಕೆ ಹೆಚ್ಚಾಗುತ್ತದೆ. ಅದರಲ್ಲೂ ಪತ್ನಿಯು ಗೃಹಿಣಿಯಾಗಿದ್ದರೆ ಪತಿಯು ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು ಎಂದು ನ್ಯಾ. ಗೌತಮ್ ಭಾದುರಿ ಹಾಗೂ ನ್ಯಾ. ಸಂಜಯ್ ಎಸ್ ಅಗರ್ವಾಲ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: 2006 ರಲ್ಲಿ ವಿವಾಹವಾಗಿದ್ದ ದಂಪತಿಗೆ 13 ವರ್ಷದ ಮಗಳು ಹಾಗೂ 10 ವರ್ಷದ ಮಗನಿದ್ದು, ಪತಿ ಮದ್ಯ ವ್ಯಸನಿಯಾಗಿದ್ದ. ಪತಿಯ ವಿಪರೀತ ಮದ್ಯ ವ್ಯಸನಕ್ಕೆ ಬೇಸತ್ತ ಪತ್ನಿ ಮಾನಸಿಕ ಕ್ರೌರ್ಯದ ಅಡಿಯಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯಲ್ಲಿ, ಪತಿ ಕುಡಿತಕ್ಕೆ ದಾಸನಾಗಿದ್ದು ಮದ್ಯಪಾನಕ್ಕಾಗಿ ಮನೆಯ ವಸ್ತುಗಳನ್ನು ಮಾರಾಟ ಮಾಡಿದ್ದಾನೆ. ಮನೆ ಖರ್ಚಿಗೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಹಣ ನೀಡುತ್ತಿಲ್ಲ. ಪಾನಮತ್ತನಾಗಿ ಬಂದು ತನ್ನ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಕ್ಕಳ ಜೊತೆ ತವರು ಮನೆಗೆ ಹೋಗುವಂತೆ ಬಲವಂತ ಮಾಡಿದ್ದಾನೆ. ಹೀಗಾಗಿ ವಿಚ್ಚೇದನ ಕೊಡಿಸಬೇಕು ಎಂದು ಕೋರಿದ್ದರು.
ಅರ್ಜಿ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಕೇವಲ ಮದ್ಯಪಾನದಿಂದ ಮಾನಸಿಕ ಕ್ರೌರ್ಯ ಉಂಟಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಮನವಿ ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಪತ್ನಿ ಛತ್ತೀಸ್ಗಢ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನವಿ ಆಲಿಸಿದ ಹೈಕೋರ್ಟ್, ಪತಿಯ ಮದ್ಯ ವ್ಯಸನದಿಂದ ಮನನೊಂದು ಪತ್ನಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗ ಮದ್ಯಪಾನ ಬಿಡುವುದಾಗಿಯೂ ಹಾಗೂ ತನ್ನ ನಡವಳಿಕೆ ಸರಿಪಡಿಸಿಕೊಳ್ಳುವುದಾಗಿಯೂ ಹೇಳಿ ಅರ್ಜಿ ಹಿಂಪಡೆಯುವಂತೆ ಮಾಡಿದ್ದಾನೆ. ನಂತರವೂ ತನ್ನ ನಡವಳಿಕೆಯನ್ನು ಬದಲಾಯಿಸಿಕೊಂಡಿಲ್ಲ. ಎರಡನೇ ಬಾರಿ ಅರ್ಜಿ ಸಲ್ಲಿಸಿದಾಗ ವಿಚಾರಣೆಗೆ ಪತಿ ಹಾಜರಾಗಿಲ್ಲ. ಪತ್ನಿಯ ಆರೋಪಗಳನ್ನು ಪಾಟಿ ಸವಾಲಿಗೆ ಒಳಪಡಿಸಿಲ್ಲ. ಬದಲಿಗೆ ಪತ್ನಿಯಿಂದ ತನಗೂ ಬೆದರಿಕೆ ಇದೆಯೆಂದು, ತನ್ನ ಮೇಲೆ ಸಹ ಕ್ರೌರ್ಯ ನಡೆದಿದೆಯೆಂದು ತಿಳಿಸಿದ್ದಾನೆ.
ಪತ್ನಿಯ ಆರೋಪಗಳನ್ನು ಪಾಟಿಸವಾಲಿಗೆ ಒಳಪಡಿಸದೇ ಇರುವುದರಿಂದ ಆಕೆ ಮಾಡಿರುವ ಆರೋಪಗಳನ್ನು ನಿಜವಾಗಿ ಪರಿಗಣಿಸಬೇಕಾಗುತ್ತದೆ. ಪ್ರಕರಣದ ವಾಸ್ತವಾಂಶಗಳು ಸಹ ಇದನ್ನು ಸ್ಪಷ್ಟಪಡಿಸುತ್ತವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ವಿಚ್ಚೇದನ ನೀಡಿ ಆದೇಶಿಸಿದೆ. ಇದೇ ವೇಳೆ ಮಕ್ಕಳ ಶೈಕ್ಷಣಿಕ ವೆಚ್ಚ ಮತ್ತು ಪಾಲನೆ ಪೋಷಣೆಗಳನ್ನು ಪರಿಗಣಿಸಿ ಪತ್ನಿಗೆ ಮಾಸಿಕ ₹ 15,000 ನೀಡಬೇಕೆಂದು ಪತಿಗೆ ಹೈಕೋರ್ಟ್ ಆದೇಶಿಸಿದೆ.
FA(MAT) No.4/2022

