ಬೆಂಗಳೂರು: ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಾಲಯದ ಸನ್ನಿಧಿಯಲ್ಲಿ ಮಲ್ಲೇಶ್ವರ ಗೆಳೆಯರ ಬಳಗ ಹಮ್ಮಿಕೊಂಡಿರುವ 9ನೇ ವರ್ಷದ ಕಡಲೆಕಾಯಿ ಪರಿಷೆಗೆ ಶನಿವಾರ ಮತ್ತು ಭಾನುವಾರ ಅಪಾರ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದ್ದು, ಕಡಲೆ ಕಾಯಿ ಕೊಂಡು ಸಂಭ್ರಮಿಸುತ್ತಿದ್ದಾರೆ.
ಸಚಿವ ರಾಮಲಿಂಗಾರೆಡ್ಡಿ ಚಾಲನೆ:
ಕಾರ್ತಿಕ ಮಾಸದ ಅಂಗವಾಗಿ ಕಾಡು ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಆಯೋಜಿಸಿರುವ 9ನೇ ವರ್ಷದ ಕಡಲೆಕಾಯಿ ಪರಿಷೆಗೆ ಶನಿವಾರ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದರು. ಮೂರು ದಿನಗಳ ಕಾಲ ನಡೆಯುತ್ತಿರುವ ಈ ಪರಿಷೆಗೆ ಜನರು ತಂಡೋಪತಂಡವಾಗಿ ಆಗಮಿಸಿದ್ದು, ಕಡಲೆಕಾಯಿ ಸವಿಯುತ್ತಿದ್ದಾರೆ.
ಅಕ್ಕ ಪಕ್ಕದ ರಾಜ್ಯದ ರೈತರ ಆಗಮನ:
ತಮಿಳುನಾಡು, ಅಂಧ್ರಪ್ರದೇಶದಿಂದ ಕೂಡ ಆಗಮಿಸಿರುವ ರೈತರು ಹಸಿ, ಒಣ, ಉರಿದ ಹಾಗೂ ಬೇಯಿಸಿದ ಕಡಲೆಕಾಯಿಯನ್ನು ತಂದು ಮಾರಾಟ ಮಾಡುತ್ತಿದ್ದು, ಕಣ್ಣು ಹಾಯಿಸಿದ ಕಡೆಗಳೆಲ್ಲಾ ಕಡಲೆಕಾಯಿಯ ರಾಶಿಗಳೆಲ್ಲಾ ಕಾಣುತ್ತಿವೆ. ಈ ಬಾರಿ 400ಕ್ಕೂ ಹೆಚ್ಚು ಮಳಿಗೆಗಳು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ.
ಬಟ್ಟೆ ಹಾಗೂ ಪೇಪರ್ ಬ್ಯಾಗ್‌ಗಳ ಉಚಿತವಾಗಿ ವಿತರಣೆ:
ಪ್ಲಾಸ್ಟಿಕ್ ಮುಕ್ತ ಮಲ್ಲೇಶ್ವರ ಅಭಿಯಾನದ ಅಂಗವಾಗಿ 1 ಲಕ್ಷ ಬಟ್ಟೆ ಹಾಗೂ ಪೇಪರ್ ಬ್ಯಾಗ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಗ್ರಾಮೀಣ ಸೊಗಡಿನ ಹಳ್ಳಿ ಜಾತ್ರೆಗೆ ಮಲ್ಲೇಶ್ವರಂನಲ್ಲಿ ನಡೆಯುತ್ತಿದ್ದು, ನಗರ ನಿವಾಸಿಗಳಿಗೆ ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರಿನ ವಿವಿಧ ಕಡೆಗಳಿಂದ ಜನರು ಆಗಮಿಸಿ ಕಡಲೆಕಾಯಿ, ಕಡ್ಲೆಪುರಿ ಸವಿದು ಸಂಭ್ರಮಿಸುತ್ತಿದ್ದಾರೆ.
