ಬೆಂಗಳೂರು: ಅಪಘಾತದಿಂದ ದೈಹಿಕ ವೈಕಲ್ಯವನ್ನು ಕಾರಣವಾಗಿಟ್ಟುಕೊಂಡು ವೇತನ ಶ್ರೇಣಿ ಬದಲಾವಣೆ ಮಾಡಲಾಗದು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇದೇ ವೇಳೆ ರಸ್ತೆ ಅಪಘಾತದ ಪರಿಣಾಮ ಅಂಗವೈಕಲ್ಯಕ್ಕೆ ಒಳಗಾಗಿದ್ದ ಚಾಲಕನ ಹುದ್ದೆಯನ್ನು ಬದಲಾಯಿಸಿ ವೇತನ ಶ್ರೇಣಿಯನ್ನು ಕಡಿಮೆ ಮಾಡಿದ್ದ ಬಿಎಂಟಿಸಿ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಈ ಮುಂಚೆ ನಿಗದಿ ಮಾಡಲಾಗಿದ್ದ ವೇತನ ಶ್ರೇಣಿಯನ್ನೇ ಮುಂದುವರೆಸುವಂತೆ ಬಿಎಂಟಿಸಿಗೆ ನಿರ್ದೇಶಿಸಿದೆ.
ರಸ್ತೆ ಅಪಘಾತದಲ್ಲಿ ಶೇಕಡಾ 40 ರಷ್ಟು ಅಂಗವೈಫಲ್ಯಕ್ಕೆ ತುತ್ತಾದ ಕಾರಣಕ್ಕೆ ಕೆಲಸದೊಂದಿಗೆ ವೇತನ ಶ್ರೇಣಿಯಲ್ಲೂ ಹಿಂಬಡ್ತಿ ನೀಡಿದ್ದ ಕ್ರಮ ಪ್ರಶ್ನಿಸಿ ಬಿಎಂಟಿಸಿ ನೌಕರ ಎಂ.ಬಿ ಜಯದೇವಯ್ಯ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿದಾರರಿಗೆ ಮೊದಲಿನ ವೇತನ ಶ್ರೇಣಿ ಮುಂದುವರೆಸಲು ಸಾರಿಗೆ ಸಂಸ್ಥೆಗೆ ಆದೇಶಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ವಿಶೇಷ ಚೇತನರ ಕಾಯ್ದೆಯ ನಿಯಮಗಳ ಪ್ರಕಾರ ಸರ್ಕಾರಿ ಸೇವೆಯಲ್ಲಿರುವ ವೇಳೆ ಅಂಗ ವೈಫಲ್ಯಕ್ಕೆ ತುತ್ತಾದರೆ ಅಂತಹ ವ್ಯಕ್ತಿಯ ವೇತನ ಶ್ರೇಣಿಯಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಅಂಗ ವೈಫಲ್ಯಕ್ಕೆ ತುತ್ತಾದ ವ್ಯಕ್ತಿ ನಿಯೋಜಿತ ಹುದ್ದೆಗೆ ಅರ್ಹರಿಲ್ಲವಾದರೆ ಬದಲಿ ಉದ್ಯೋಗ ನೀಡಬಹುದಾಗಿದೆ. ಆದರೆ, ನಿವೃತ್ತಿವರೆಗೂ ವೇತನ ಶ್ರೇಣಿಯಲ್ಲಿ ಹಿಂಬಡ್ತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: 1984ರಲ್ಲಿ ಚಾಲಕನಾಗಿ ಬಿಟಿಸಿ (ಬಿಎಂಟಿಸಿ) ಸೇರಿದ್ದ ಎಂ.ಬಿ ಜಯದೇವಯ್ಯ1999 ರಲ್ಲಿ ಅಪಘಾತಕ್ಕೆ ತುತ್ತಾಗಿದ್ದರು. ಚಿಕಿತ್ಸೆ ಪಡೆದು ಸೇವೆಗೆ ಮರಳಿದರಾದರೂ ಶೇಕಡಾ 40 ರಷ್ಟು ಅಂಗ ವೈಫಲ್ಯಕ್ಕೆ ತುತ್ತಾಗಿದ್ದರಿಂದ ಚಾಲಕನಾಗಿ ವೃತ್ತಿ ಮುಂದುವರೆಸಲು ಸಾಧ್ಯವಿರಲಿಲ್ಲ. ವೈದ್ಯಕೀಯ ವರದಿ ಚಾಲಕ ವೃತ್ತಿ ನಡೆಸದಂತೆ ಶಿಫಾರಸು ಮಾಡಿತ್ತು.
ಅಪಘಾತದ ಸಂಬಂಧ ವಿಚಾರಣೆ ನಡೆಸಿದ್ದ ಶಿಸ್ತು ಪ್ರಾಧಿಕಾರ ಕೂಡ ಅಪಘಾತದಲ್ಲಿ ಚಾಲಕನ ನಿರ್ಲಕ್ಷ್ಯವಿರಲಿಲ್ಲ ಎಂದು ಸ್ಪಷ್ಟಪಡಿಸಿತ್ತು. ಹೀಗಿದ್ದೂ, ಬಿಎಂಟಿಸಿ ಚಾಲಕ ಜಯದೇವಯ್ಯ ಅವರ ವೇತನ ಶ್ರೇಣಿಯಲ್ಲಿ ಹಿಂಬಡ್ತಿ ನೀಡಿ ಕಚೇರಿ ಸಹಾಯಕನಾಗಿ ನೇಮಿಸಿತ್ತು.
ವೇತನ ಶ್ರೇಣಿ ಹಿಂಬಡ್ತಿ ಪ್ರಶ್ನಿಸಿ ಜಯದೇವಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಅರ್ಜಿದಾರರಿಗೆ ಚಾಲಕ ವೇತನ ಶ್ರೇಣಿಯನ್ನು ನೀಡುವಂತೆ ಬಿಎಂಟಿಸಿಗೆ ನಿರ್ದೇಶಿಸಿತ್ತು. ಬಿಎಂಟಿಸಿ ಅಧಿಕಾರಿಗಳು ಹೈಕೋರ್ಟ್ ಆದೇಶ ಪಾಲನೆ ಮಾಡದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು.

