ಬೆಂಗಳೂರು: ಅನಾರೋಗ್ಯ ಕಾರಣ ನೀಡಿ ಪತ್ನಿ ಹಾಗು ಮಕ್ಕಳಿಗೆ ಜೀವನಾಂಶ ಕೊಡುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಇದೇ ವೇಳೆ ಶುಗರ್ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ತಮಗಿರುವ ಅನಾರೋಗ್ಯ ಕಾರಣದಿಂದಾಗಿ ಜೀವನಾಂಶ ಕೊಡಲು ಸಾಧ್ಯವಿಲ್ಲ ಎಂಬ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, ಮಧುಮೇಹವು ನಿರ್ವಹಣೆ ಮಾಡಬಹುದಾದ ಖಾಯಿಲೆ. ಈ ಕಾರಣಕ್ಕಾಗಿ ಜೀವನಾಂಶ ನೀಡುವುದರಿಂದ ತಪ್ಪಿಸಿಕೊಳ್ಳಲಾಗದು ಎಂದು ಸ್ಪಷ್ಟಪಡಿಸಿದೆ.
ಪತ್ನಿ ಹಾಗು ಮಕ್ಕಳಿಗೆ ಮಾಸಿಕ 10 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರಿನ ಅನಂತಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಅರ್ಜಿದಾರ ಪತಿ, ತಾನು ಮಧುಮೇಹ ಸಂಬಂಧಿ ರೋಗದಿಂದ ಬಳಲುತ್ತಿದ್ದೇನೆ. ಪತ್ನಿ, ಮತ್ತು ಮಕ್ಕಳಿಗೆ ಕಳೆದ 3 ವರ್ಷಗಳಿಂದ ಜೀವನಾಂಶ ನೀಡಿಲ್ಲ. ಈಗಲೂ ನೀಡುವ ಸ್ಥಿತಿಯಲ್ಲಿಲ್ಲ ಎಂದು ವಾದಿಸಿದ್ದರು.
ಅರ್ಜಿದಾರರ ವಾದ ತಿರಸ್ಕರಿಸಿರುವ ಹೈಕೋರ್ಟ್, ಜಗತ್ತಿನಾದ್ಯಂತ ಬಹುತೇಕರು ಮಧುಮೇಹದಿಂದ ಬಳಲುತ್ತಿದ್ದಾರೆ. ವೈದ್ಯಕೀಯ ವಿಜ್ಞಾನ ಸಾಕಷ್ಟು ಮುಂದುವರಿದಿದ್ದು, ಅದನ್ನು ನಿರ್ವಹಣೆ ಮಾಡಬಹುದಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೇ, ಪತ್ನಿ ಉದ್ಯೋಗದಲ್ಲಿದ್ದು, ಆಕೆಗೆ ಜೀವನಾಂಶದ ಅಗತ್ಯವಿಲ್ಲ. ಆಕೆ ಅಪ್ರಾಪ್ತ ಮಗುವಿನೊಂದಿಗೆ ಒಳ್ಳೆಯ ಜೀವನ ನಡೆಸುತ್ತಿದ್ದಾರೆ ಎಂಬ ಪತಿಯ ವಾದವನ್ನೂ ಕೂಡ ತಿರಸ್ಕರಿಸಿದೆ.
ಪತ್ನಿ ತನ್ನ ಜೀವನಕ್ಕೆ ಹಾಗು ಮಗುವಿನ ಆರೈಕೆಗೆ ಸಾಕಾಗುವಷ್ಟು ದುಡಿಯುತ್ತಿದ್ದರೂ ಸಹ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 125, ಮಹಿಳೆಯರ ವಿರುದ್ಧದ ಕೌಟುಂಬಿಕದ ದೌರ್ಜನ್ಯ ತಡೆ ಕಾಯ್ದೆ 2005 ಮತ್ತು ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 24ರ ಅಡಿ ದುಡಿಯುವ ಸಾಮರ್ಥ್ಯವುಳ್ಳ ವ್ಯಕ್ತಿ ತನ್ನ ಪತ್ನಿ ಹಾಗೂ ಮಕ್ಕಳ ಜೀವನ ನಿರ್ವಹಣೆಗೆ ಜೀವನಾಂಶ ಪಾವತಿಸಲೇಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

