ಬೆಂಗಳೂರು: ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಲು, ದಟ್ಟಣೆ ಕಡಿತಕ್ಕೆೆ ಮತ್ತು ಸುರಕ್ಷತೆಗೆ ಡಿ.8ರಿಂದ ಕೆಐಎನಲ್ಲಿ ಪಿಕಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ಎಂಟು ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಂತ ವಾಹನಗಳಿಗೆ ದಂಡ ವಿಧಿಸಲು ತೀರ್ಮಾನಿಸಲಾಗಿದೆ.
ಬಿಐಎಎಲ್ ಈ ಶಿಸ್ತನ್ನು ಜಾರಿಗೊಳಿಸುತ್ತಿದ್ದು, ಅನಧಿಕೃತ ಪಾರ್ಕಿಂಗ್‌ನ್ನು ತಡೆಯಲು ಮತ್ತು ಅನಗತ್ಯವಾಗಿ ಹೆಚ್ಚು ಸಮಯ ನಿಲ್ಲಿಸುವುದನ್ನು ಕಡಿಮೆ ಮಾಡಲು ಲೇನ್ ಪ್ರತ್ಯೇಕತಾ ವ್ಯವಸ್ಥೆೆಯನ್ನು ಪರಿಚಯಿಸುತ್ತಿದೆ. ಇದು ಕರ್ಬ್ಸೈಡ್ ದಟ್ಟಣೆಯನ್ನು ಕಡಿಮೆ ಮಾಡಲಿದ್ದು, ಟರ್ಮಿನಲ್‌ಗಳ ಮುಂದೆ ಪಿಕಪ್ ವಲಯದ ದುರುಪಯೋಗವನ್ನು ತಡೆಯಲಿದೆ.
ಬೆಂಗಳೂರು ಏರ್‌ಪೋರ್ಟ್ ಟಿ1 ಮತ್ತುಟಿ2 ಸೇರಿದಂತೆ ನಿತ್ಯ 1.30 ಲಕ್ಷಕ್ಕೂ ಅಧಿಕ ಮಂದಿ ಸಂಚಾರ ನಡಸುತ್ತಾರೆ. ನಿತ್ಯ ಸುಮಾರು ಒಂದು ಲಕ್ಷದಷ್ಟು ವಾಹನಗಳು ಏರ್‌ಪೋರ್ಟ್‌ಗೆ ಆಗಮಿಸುತ್ತದೆ. ಇವುಗಳಿಂದ ಏರ್ ಪೋರ್ಟ್ ಮುಂದೆ ಸಾಕಷ್ಟು ಸಂಚಾರ ದಟ್ಟಣೆಯುಂಟಾಗುತ್ತಿದ್ದು, ಪಿಕ್ ಅಪ್ ಮತ್ತು ಡ್ರಾಾಪ್ ಮಾಡಿದ ಮೇಲೆ ಅದೆಷ್ಟೊ ವಾಹನಗಳು ಸ್ಥಳದಲ್ಲೇ ನಿಂತಿರುತ್ತವೆ. ಇದೆಲ್ಲ ಗಮನಿಸಿ ದಟ್ಟಣೆಗೆ ಕಡಿವಾಣ ಹಾಕಲು ಬಿಐಎಎಲ್ ಮುಂದಾಗಿದೆ.
ಏರ್ ಪೋರ್ಟ್‌ಗೆ ಬರುವ ಖಾಸಗಿ ವಾಹನಗಳು (ಬಿಳಿ ಬೋರ್ಡ್) ಪಿಕ್ ಅಪ್ ಡ್ರಾಪ್‌ಗೆ ಮೊದಲ 8 ಎಂಟು ನಿಮಿಷ ಉಚಿತವಾಗಿರಲಿದೆ. ಈ ನಿಗದಿತ ಸಮಯ ಮೀರಿದರೆ ದಂಡ ಅನ್ವಯವಾಗುತ್ತದೆ. ಏರ್‌ಪೋರ್ಟ್ ಆವರಣದಲ್ಲಿ ಪಿಕ್ ಅಪ್ ಖಾಸಗಿ ವಾಹನಗಳೂ 18 ನಿಮಿಷಕ್ಕಿಂತ ಹೆಚ್ಚು ಸಮಯ ನಿಂತರೆ ವಾಹನ ಟೋಯಿಂಗ್ ಮಾಡಲಾಗುತ್ತದೆ. ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಲಿದೆ.
ಬಿಐಎಎಲ್‌ನ ವ್ಯವಸ್ಥಾಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮಾರಾರ್ ಈ ಕುರಿತು ಮಾತನಾಡಿ, ವಿಶೇಷವಾಗಿ ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿರುವುದರಿಂದ, ಪಿಕ್-ಅಪ್ ವಲಯಗಳಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಪ್ರಯಾಣಿಕರನ್ನು ರಕ್ಷಿಸಲು, ಕ್ರಮಬದ್ಧ ಚಲನೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
